ಭಾರತದ ಪ್ರತಿ ಐವರಲ್ಲಿ ಒಬ್ಬ ಅಲ್ಪಸಂಖ್ಯಾತ ! ಜಮ್ಮು ಕಾಶ್ಮೀರ, ಪಂಜಾಬ್, ನಾಗಾಲ್ಯಾಂಡಲ್ಲಿ ಅಲ್ಪಸಂಖ್ಯಾತರು ಯಾರು ? ಅಲ್ಲಿನ ನೈಜ ಅಲ್ಪಸಂಖ್ಯಾಕರಿಗೆ ಯಾಕಿಲ್ಲ ಸ್ಥಾನ ? ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಅರ್ಜಿ ಬಗ್ಗೆ ಗಂಭೀರ ಚರ್ಚೆ

31-03-22 01:34 pm       HK Desk news   ದೇಶ - ವಿದೇಶ

ಭಾರತದಲ್ಲಿ ಮೈನಾರಿಟಿ ಅಂದರೆ ಯಾರು? ಅಲ್ಪಸಂಖ್ಯಾತ ಅನ್ನುವುದನ್ನು ಯಾವ ನೆಲೆಯಲ್ಲಿ ಗುರುತಿಸಲಾಗುತ್ತದೆ.

ನವದೆಹಲಿ, ಮಾ.31:  ಭಾರತದಲ್ಲಿ ಮೈನಾರಿಟಿ ಅಂದರೆ ಯಾರು? ಅಲ್ಪಸಂಖ್ಯಾತ ಅನ್ನುವುದನ್ನು ಯಾವ ನೆಲೆಯಲ್ಲಿ ಗುರುತಿಸಲಾಗುತ್ತದೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಮತ್ತು ಎರಡನೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಆರು ಸಮುದಾಯಗಳಷ್ಟೇ ಅಲ್ಪಸಂಖ್ಯಾತ ಎಂದು ಗುರುತಿಸಲ್ಪಟ್ಟಿವೆ. 2011ರ ಜನಗಣತಿ ಆಧರಿಸಿ ಅಲ್ಪಸಂಖ್ಯಾತರ ಸ್ಥಿತಿಗತಿ ಬಗ್ಗೆ ಅವಲೋಕನದ ಜೊತೆಗೆ, ಕೆಲವು ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿರುವ ಸಮುದಾಯಗಳಿಗೆ ಆಯಾ ಭಾಗದಲ್ಲಿ ಯಾಕೆ ಸ್ಥಾನಮಾನ ಕೊಡಬಾರದು ಎಂಬ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟಿನಲ್ಲಿ ನಡೆದಿರುವ ಚರ್ಚೆಯ ಸ್ಥೂಲನೋಟವನ್ನು ಕೊಡಲಾಗಿದೆ.

ಭಾರತದಲ್ಲಿ ಪ್ರತೀ ಐದು ಜನರಲ್ಲಿ ಒಬ್ಬ ಅಲ್ಪಸಂಖ್ಯಾತನಿದ್ದಾನೆ. ಅಂದಾಜು ಪ್ರಕಾರ, ಒಂದು ಸಾವಿರ ಜನರಲ್ಲಿ 193 ಮಂದಿ ಅಲ್ಪಸಂಖ್ಯಾತರು. ಮುಸ್ಲಿಮರು ಭಾರತದಲ್ಲಿ ಅಲ್ಪಸಂಖ್ಯಾತರೆಂದು ಪರಿಗಣಿಸಲ್ಪಟ್ಟ ಅತಿದೊಡ್ಡ ಪಂಗಡ. ಅಂದರೆ, ಒಂದು ಸಾವಿರ ಮಂದಿಯಲ್ಲಿ 140 ಜನರು ಮುಸ್ಲಿಮರಿದ್ದಾರೆ ಅನ್ನುವುದು ಲೆಕ್ಕಾಚಾರ. ಇದೇ ವೇಳೆ ಒಂದು ಸಾವಿರ ಮಂದಿಯಲ್ಲಿ ಇನ್ನೊಂದು ಅಲ್ಪಸಂಖ್ಯಾತ ಪಂಗಡ ಆಗಿರುವ ಪಾರ್ಸಿಗಳು ಇರೋದು ಕೇವಲ ಆರು ಜನ. ಉಳಿದ ಐವತ್ತರಷ್ಟು ಮಂದಿಯಲ್ಲಿ ಕ್ರಿಶ್ಚಿಯನ್ ಮತ್ತು ಜೈನರು ಬರುತ್ತಾರೆ. ಭಾರತದಲ್ಲಿ ಮುಸ್ಲಿಮರು ಸೇರಿ ಆರು ಸಮುದಾಯಗಳು ಮಾತ್ರ ಅಧಿಕೃತವಾಗಿ ಅಲ್ಪಸಂಖ್ಯಾತ ಎನ್ನುವ ಸ್ಥಾನಮಾನದ ಲಾಭ ಪಡೆಯುತ್ತಿವೆ.

2011ರ ವೇಳೆಗೆ 14 ಶೇಕಡಾ ಮುಸ್ಲಿಮರು

2011ರ ವೇಳೆಗೆ ದೇಶದ ಜನಸಂಖ್ಯೆಯಲ್ಲಿ 14 ಶೇಕಡಾ ಮುಸ್ಲಿಮರಿದ್ದರು. ಅದರಂತೆ, ಜಗತ್ತಿನಲ್ಲಿ ಅತಿ ಹೆಚ್ಚು ಮುಸ್ಲಿಮರು ಇರುವ ದೇಶಗಳ ಪೈಕಿ ಏಳನೇ ಸ್ಥಾನದಲ್ಲಿರುವ ನೈಜೀರಿಯಾದಲ್ಲಿರುವಷ್ಟೇ ಮುಸ್ಲಿಮರು ಭಾರತದಲ್ಲಿದ್ದಾರೆ. ಜಗತ್ತಿನಲ್ಲಿ ಅತಿಹೆಚ್ಚು ಮುಸ್ಲಿಮರನ್ನು ಹೊಂದಿರುವ ಪಾಕಿಸ್ಥಾನ ಮತ್ತು ಇಂಡೋನೇಶ್ಯಾದಲ್ಲಿ ಮಾತ್ರ ಭಾರತಕ್ಕಿಂತ ಹೆಚ್ಚು ಮುಸ್ಲಿಮ್ ಜನಸಂಖ್ಯೆ ಇದೆ. ಇದೇ ವೇಳೆ, ಭಾರತದಲ್ಲಿ ಕೇವಲ 99 ಸಾವಿರ ಮಂದಿಯಷ್ಟೇ ಪಾರ್ಸಿಗಳು ಇದ್ದಾರೆ. ಭಾರತದ ಅತಿ ಸಣ್ಣ ನಗರ ಕಪುರ್ತಲಾದಲ್ಲಿ ಇವರನ್ನೆಲ್ಲ ಒಂದೇ ಕಡೆ ಕೂಡಿ ಹಾಕಿದರೂ, ಅಲ್ಲಿ ಹಿಡಿದಿಡಬಲ್ಲಷ್ಟೇ ಪಾರ್ಸಿಗಳು ಈ ದೇಶದಲ್ಲಿದ್ದಾರೆ.

ಹಾಗಾದರೆ, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಯಾರು ಮತ್ತು ಹೇಗೆ ನಿರ್ಧರಿಸುತ್ತಾರೆ ಅನ್ನುವ ಪ್ರಶ್ನೆ ಇರಬಹುದು. ಸದ್ಯಕ್ಕೆ ಕೇಂದ್ರ ಸರಕಾರಕ್ಕೆ ಮಾತ್ರ ಅಲ್ಪಸಂಖ್ಯಾತ ಸಮುದಾಯ ಪರಿಗಣಿಸುವ ಅಧಿಕಾರ ಇರುತ್ತದೆ. 1992ರ ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದಡಿ ನಿರ್ವಚಿಸಲ್ಪಟ್ಟ ಕಾಯ್ದೆಯಡಿ ಕೇಂದ್ರ ಸರಕಾರ ಆರು ಸಮುದಾಯಗಳನ್ನು ಅಲ್ಪಸಂಖ್ಯಾತ ಎಂದು ಮಾನ್ಯ ಮಾಡಿದೆ. ಕಾಯ್ದೆಯ 2(ಸಿ) ಪ್ರಕಾರ ಯಾವ ಸಮುದಾಯಗಳು ಬರುತ್ತದೋ ಅವನ್ನು ಮಾತ್ರ ಅಲ್ಪಸಂಖ್ಯಾತರು ಎಂದು ಪರಿಗಣಿಸಿರುವುದು. ಆದರೆ ಭಾರತದಲ್ಲಿ 31 ರಾಜ್ಯಗಳಿದ್ದು ದೇಶೀಯವಾಗಿ ಅಲ್ಪಸಂಖ್ಯಾತರು ಎಂದು ಪರಿಗಣಿಸಲ್ಪಟ್ಟವರು ಕೆಲವೊಂದು ರಾಜ್ಯಗಳಲ್ಲಿ ಬಹುಸಂಖ್ಯಾತರಿದ್ದಾರೆ. ಹೀಗಿದ್ದರೂ ಅಲ್ಲಿನ ರಾಜ್ಯಗಳಲ್ಲಿ ಅವರಿಗೆ ಅಲ್ಪಸಂಖ್ಯಾತ ಅನ್ನುವ ಸ್ಥಾನಮಾನವನ್ನೇ ನೀಡಲಾಗತ್ತಿದೆ. ಇದೇ ವಿಚಾರವನ್ನು ಬಿಜೆಪಿ ನಾಯಕರೊಬ್ಬರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದಾರೆ.

Hindus can be declared 'minority' in states where they're numerically lower  strength: Centre tells Supreme Court

ಆಯಾ ರಾಜ್ಯಗಳಲ್ಲಿ ಅಲ್ಪಸಂಖ್ಯಾಕರಿಗೆ ಮಣೆ ?

ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಎಂಬವರು ಸುಪ್ರೀಂ ಕೋರ್ಟಿಗೆ ಪಿಐಎಲ್ ಅರ್ಜಿ ಸಲ್ಲಿಸಿದ್ದು, ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ಯಾರು ಅಲ್ಪಸಂಖ್ಯಾತರು ಇರುತ್ತಾರೋ ಅವರಿಗೇ ಪ್ರಾತಿನಿಧ್ಯ ನೀಡಲು ಅವಕಾಶ ನೀಡಬೇಕು ಎಂದು ಕೇಳಿಕೊಂಡಿದ್ದರು. ಹೀಗಾಗಿ ಮತೀಯ ನೆಲೆಯಲ್ಲಿ ನೀಡಲಾಗುತ್ತಿರುವ ಅಲ್ಪಸಂಖ್ಯಾತರ ಪರಿಗಣನೆಯನ್ನು ವಿಶಾಲ ದೇಶದಲ್ಲಿ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ನಿರ್ಧರಿಸಲು ಕೋರ್ಟ್ ಅನುಮತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಉದಾಹರಣೆಗೆ, ಜಮ್ಮು ಕಾಶ್ಮೀರ, ಅರುಣಾಚಲ ಪ್ರದೇಶ, ಮಿಜೋರಾಂ, ನಾಗಾಲ್ಯಾಂಡ್, ಮಣಿಪುರ, ಲಕ್ಷದ್ವೀಪ ಮತ್ತು ಪಂಜಾಬ್ ನಲ್ಲಿ ಯಾರು ಬಹುಸಂಖ್ಯಾತರಿದ್ದಾರೋ ಅವರೇ ಅಲ್ಪಸಂಖ್ಯಾತ ಪ್ರಾತಿನಿಧ್ಯವನ್ನೂ ಪಡೆಯುತ್ತಿದ್ದಾರೆ. ಅಲ್ಲಿ ಹಿಂದುಗಳು, ಬುದ್ಧರು, ಜೂಡಾಯಿಸಂ, ಬಹಾಯಿಸಂ ಅನುಸರಿಸುವ ಮಂದಿ ಕಡಿಮೆ ಸಂಖ್ಯೆಯಲ್ಲಿದ್ದರೂ, ಅವರಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ನಿರಾಕರಿಸುತ್ತಿರುವುದು ಯಾಕೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಉತ್ತರ ನೀಡಲು ಕೇಂದ್ರಕ್ಕೆ ನಾಲ್ಕು ವಾರಗಳ ಸಮಯ ನೀಡಿದೆ. ಇದೇ ವೇಳೆ, ಅಲ್ಪಸಂಖ್ಯಾತ ಕೋಟಾವನ್ನು ನಿರ್ಧರಿಸಲು ಕೇಂದ್ರದ ಬದಲು ಆಯಾ ರಾಜ್ಯಗಳಿಗೆ ನೀಡಿದರೆ ಈ ತಾರತಮ್ಯ ನಿವಾರಣೆ ಮಾಡಬಹುದು ಎಂದು ಕೇಂದ್ರ ಸರಕಾರ ಅಭಿಪ್ರಾಯ ಪಟ್ಟಿತ್ತು.

ರಾಷ್ಟ್ರ ಮಟ್ಟದಲ್ಲಿ ಆರು ಸಮುದಾಯಗಳನ್ನಷ್ಟೇ ಅಲ್ಪಸಂಖ್ಯಾತರು ಎಂದು ಪರಿಗಣಿಸಲಾಗಿದೆ. ಮುಸ್ಲಿಂ, ಕ್ರಿಸ್ತಿಯನ್, ಸಿಖ್, ಪಾರ್ಸಿ ಮತ್ತು ಬುದ್ಧರನ್ನು 1993ರಲ್ಲಿ ಅಲ್ಪಸಂಖ್ಯಾತ ಪಂಗಡಗಳೆಂದು ಘೋಷಣೆ ಮಾಡಲಾಗಿತ್ತು. 2014ರಲ್ಲಿ ಅದಕ್ಕೆ ಜೈನ್ ಸಮುದಾಯವನ್ನೂ ಸೇರಿಸಲಾಗಿತ್ತು. ರಾಜ್ಯಗಳ ವ್ಯಾಪ್ತಿಯಲ್ಲಿ ಇತರ ಸಮುದಾಯಗಳು ಸಂಖ್ಯೆಯಲ್ಲಿ ಅಲ್ಪಸಂಖ್ಯಾತರಿದ್ದರೂ ಈ ಬಗ್ಗೆ ಪರಿಗಣಿಸಿಲ್ಲ. ರಾಷ್ಟ್ರ ಮಟ್ಟದಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣಿಸಿರುವುನ್ನಷ್ಟೇ ಮಾನ್ಯ ಇಡೀ ದೇಶ ವ್ಯಾಪ್ತಿಯಲ್ಲಿ ಮಾಡಲಾಗಿದೆ. ಆದರೆ, ಇದರ ನಡುವೆಯೂ ಮಹಾರಾಷ್ಟ್ರದಲ್ಲಿ ಯಹೂದಿಗಳನ್ನು ಹೆಚ್ಚುವರಿಯಾಗಿ ಅಲ್ಪಸಂಖ್ಯಾತ ಪಟ್ಟಿಗೆ ಸೇರಿಸಲಾಗಿಕಾಯ್ದೆಯಲ್ಲಿರುವ ಅವಕಾಶವನ್ನು ಬಳಸಿಕೊಂಡು ಮಹಾರಾಷ್ಟ್ರ ಸರಕಾರ ನಿರ್ಣಯ ಕೈಗೊಂಡಿತ್ತು. ಹೀಗಾಗಿ ಅಲ್ಪಸಂಖ್ಯಾತ ಸಮುದಾಯಗಳ ಪರಿಗಣನೆಯನ್ನು ಆಯಾ ರಾಜ್ಯಗಳಿಗೆ ನೀಡಿದರೆ, ಹಿಂದುಗಳು ಅಥವಾ ಯಾವ ಸಮುದಾಯ ಆಯಾ ರಾಜ್ಯಗಳಲ್ಲಿ ಅಲ್ಪಸಂಖ್ಯೆಯಲ್ಲಿರುತ್ತದೋ ಅವುಗಳಿಗೆ ಪ್ರಾತಿನಿಧ್ಯ ಪಡೆಯಬಹುದು. ಆಯಾ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಕೋಟಾದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೂ ಅವಕಾಶ ಸಿಗುತ್ತದೆ ಎಂದು ಕೇಂದ್ರ ಸರಕಾರದ ಪರವಾಗಿ ಹಾಜರಾಗಿದ್ದ ವಕೀಲರು ಅಭಿಪ್ರಾಯ ಪಟ್ಟಿದ್ದರು.

ಆದರೆ ಈ ರೀತಿ ಇತರ ಸಮುದಾಯಗಳಿಗೆ ಆಯಾ ರಾಜ್ಯಗಳಲ್ಲಿ ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ಸಂವಿಧಾನದಲ್ಲಿ ಅವಕಾಶ ಇದೆಯೇ ಎಂಬ ಬಗ್ಗೆ ಪ್ರಶ್ನೆ ಬಂದಿದೆ. ಯಾಕಂದ್ರೆ, ಸಂವಿಧಾನದಲ್ಲಿ ಮೈನಾರಿಟಿ ಎನ್ನುವುದನ್ನು ನಿರ್ದಿಷ್ಟವಾಗಿ ಉಲ್ಲೇಖ ಮಾಡಿಲ್ಲ. ಆರ್ಟಿಕಲ್ 29 ಮತ್ತು 30ರ ಪ್ರಕಾರ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ಗೌರವಿಸಬೇಕು ಎಂದಿದೆ. ಅಲ್ಲದೆ, ಅಲ್ಪಸಂಖ್ಯಾತ ಸಮುದಾಯಗಳಿಗೆ ತಮ್ಮದೇ ಆದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದಕ್ಕೂ ಅವಕಾಶ ನೀಡಿದೆ. ಅಲ್ಪಸಂಖ್ಯಾತ ಸಮುದಾಯಗಳನ್ನು ಭಾಷೆ ಮತ್ತು ಸಂಸ್ಕೃತಿ ಆಧರಿಸಿ ಗುರುತಿಸಬೇಕೇ ವಿನಾ ಧರ್ಮ, ಜಾತಿ, ವರ್ಗ, ಭಾಷೆಯ ಆಧಾರದಲ್ಲಿ ಅವರನ್ನು ತಾರತಮ್ಯ ಮಾಡುವಂತಿಲ್ಲ ಎಂದು ಸಂವಿಧಾನ ಹೇಳಿದೆ. ಹೀಗಾಗಿ ಭಾಷೆ ಮತ್ತು ಸಂಸ್ಕೃತಿ ಆಧರಿಸಿ ರಾಷ್ಟ್ರ ಮಟ್ಟದಲ್ಲಿ ಆರು ಸಮುದಾಯಗಳನ್ನಷ್ಟೇ ಅಲ್ಪಸಂಖ್ಯಾತರು ಎಂದು ಪರಿಗಣಿಸಿ ಅವುಗಳಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿತ್ತು.

ಕರ್ನಾಟಕದಲ್ಲಿ ಉರ್ದು, ತೆಲುಗು, ಮಲಯಾಳಂ, ಮರಾಠಿ, ತುಳು, ಲಂಬಾಣಿ, ಹಿಂದಿ, ಕೊಂಕಣಿ ಮತ್ತು ಗುಜರಾತಿ ಭಾಷೆಗಳನ್ನು ಅಲ್ಪಸಂಖ್ಯಾತ ಭಾಷೆಗಳೆಂದು ಗುರುತಿಸಲಾಗಿದೆ. ಅದೇ ಆಧಾರವನ್ನು ಮುಂದಿಟ್ಟು ಸಮುದಾಯಗಳನ್ನು ಯಾಕೆ ಗುರುತಿಸಬಾರದು ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿತ್ತು. ಇದೇ ರೀತಿಯ ಪ್ರಶ್ನೆ 2019ರಲ್ಲೂ ಸುಪ್ರೀಂ ಕೋರ್ಟಿನಲ್ಲಿ ಎದುರಾಗಿತ್ತು. ಪ್ರದೇಶವಾರು ಕಡಿಮೆ ಸಂಖ್ಯೆಯಲ್ಲಿರುವ ಮಂದಿಗೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕೆಂದು ಪಿಐಎಲ್ ಅರ್ಜಿ ಸಲ್ಲಿಕೆಯಾಗಿತ್ತು. ವಿಚಾರಣೆ ನಡೆಸಿದ್ದ ಕೋರ್ಟ್, ಅಲ್ಪಸಂಖ್ಯಾತ ಸಮುದಾಯಗಳನ್ನು ಗುರುತಿಸುವುದು ರಾಷ್ಟ್ರೀಯ ನೆಲೆಯಲ್ಲಿ ಮಾತ್ರ. ಭಾಷೆಯನ್ನು ಆಧರಿಸಿ ರಾಜ್ಯಗಳನ್ನು ವಿಂಗಡಣೆ ಮಾಡಿದ್ದು ವಿನಾ ಜಾತಿ, ಧರ್ಮಗಳನ್ನು ಆಧರಿಸಿ ಅಲ್ಲ. ಹಾಗಾಗಿ ಪ್ರದೇಶವಾರು ಪರಿಗಣಿಸಿ ಸಮುದಾಯಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡಲಾಗದು ಎಂದು ಹೇಳಿ ಅರ್ಜಿಯನ್ನು ವಜಾ ಮಾಡಲಾಗಿತ್ತು. (ಮಾಹಿತಿ ಕೃಪೆ- ಇಂಡಿಯಾ ಟುಡೇ)

Almost every fifth person in India belongs to a minority community 193 in 1,000. Muslims are the biggest minority group in India, accounting for 142 persons in every 1,000. Parsis are just six in 1,000 Indians. According to the Union minority affairs ministry, there are just six minority communities in India, but the word ‘minority’ dominates the political debates in the country.