Why Did BJP failed to win outright majority; ಅಹಂಕಾರ, ದರ್ಪಕ್ಕೆ ಅವಕಾಶ ಸಿಕ್ಕಾಗೆಲ್ಲ ಕಪಾಳ ಮೋಕ್ಷ ಕೊಟ್ಟ ಭಾರತೀಯ ಮತದಾರ ! ಸೀತಾರಾಮನಲ್ಲದಿದ್ದರೆ, ರಾಜಾರಾಮನಾಗಿಯಾದರೂ ಇರು ಎಂದು ಧ್ವನಿಸಿದ ಲೋಕಸಭೆ ತೀರ್ಪು

05-06-24 10:21 pm       Giridhar Shetty   ನ್ಯೂಸ್ View

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ತೀರ್ಪೇ ಹಾಗೆ. ಕೆಲವೊಮ್ಮೆ ಕಪಾಳಕ್ಕೆ ಹೊಡೆದ ರೀತಿ. ಅಧಿಕಾರದಲ್ಲಿದ್ದು ಎಷ್ಟು ಎಗರಾಡಿದವರೂ ಜನರ ತೀರ್ಪು ಬಂದೊಡನೆ ಎದ್ದು ನಡೆಯಲೇಬೇಕು. ಅಹಂಕಾರ, ದರ್ಪ, ಆನೆ ನಡೆದಿದ್ದೇ ದಾರಿ ಎನ್ನುವುದೆಲ್ಲ ಹೆಚ್ಚು ದಿನ ನಡೆಯುವುದಿಲ್ಲ. ಅಂತಹ ಸ್ಥಿತಿ ಬಂದಾಗೆಲ್ಲ ದೇಶದ ಮತದಾರ ಆಗಿಂದಾಗ್ಗೆ ದಂಡ ಎತ್ತಿದ್ದಾನೆ, ನ್ಯಾಯ ತೀರ್ಮಾನದ ತೀರ್ಪು ಕೊಟ್ಟಿದ್ದಾನೆ. ಈ ಬಾರಿಯ ಚುನಾವಣೆ ಫಲಿತಾಂಶವೂ ಅದೇ ರೀತಿಯದ್ದು. ಪ್ರತಿ ರಾಜ್ಯದಲ್ಲಿಯೂ ಜನರ ತೀರ್ಪು ಅನೇಕ ಅರ್ಥಗಳನ್ನು ಧ್ವನಿಸಿದೆ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ತೀರ್ಪೇ ಹಾಗೆ. ಕೆಲವೊಮ್ಮೆ ಕಪಾಳಕ್ಕೆ ಹೊಡೆದ ರೀತಿ. ಅಧಿಕಾರದಲ್ಲಿದ್ದು ಎಷ್ಟು ಎಗರಾಡಿದವರೂ ಜನರ ತೀರ್ಪು ಬಂದೊಡನೆ ಎದ್ದು ನಡೆಯಲೇಬೇಕು. ಅಹಂಕಾರ, ದರ್ಪ, ಆನೆ ನಡೆದಿದ್ದೇ ದಾರಿ ಎನ್ನುವುದೆಲ್ಲ ಹೆಚ್ಚು ದಿನ ನಡೆಯುವುದಿಲ್ಲ. ಅಂತಹ ಸ್ಥಿತಿ ಬಂದಾಗೆಲ್ಲ ದೇಶದ ಮತದಾರ ಆಗಿಂದಾಗ್ಗೆ ದಂಡ ಎತ್ತಿದ್ದಾನೆ, ನ್ಯಾಯ ತೀರ್ಮಾನದ ತೀರ್ಪು ಕೊಟ್ಟಿದ್ದಾನೆ. ಈ ಬಾರಿಯ ಚುನಾವಣೆ ಫಲಿತಾಂಶವೂ ಅದೇ ರೀತಿಯದ್ದು. ಪ್ರತಿ ರಾಜ್ಯದಲ್ಲಿಯೂ ಜನರ ತೀರ್ಪು ಅನೇಕ ಅರ್ಥಗಳನ್ನು ಧ್ವನಿಸಿದೆ. ರಾಜಕೀಯ ಪಕ್ಷಗಳ ನೇತಾರರಿಗೆ ನಾನಾ ರೀತಿಯ ಸಂದೇಶಗಳನ್ನು ರವಾನಿಸಿದೆ. ಕೇಂದ್ರ ಸರಕಾರದಿಂದ ಹಿಡಿದು ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಎಲ್ಲ ಕಡೆಯೂ ಅಹಂಕಾರಿಗಳಿಗೆ ಜನರು ಪಾಠ ಕಲಿಸಿದ್ದಾರೆ. ಸಂಭವಾಮಿ ಯುಗೇ ಯುಗೇ ಎನ್ನುವಂತೆ ಜನರ ತೀರ್ಪಿನ ಮೂಲಕ ಕೃಷ್ಣ ಶಂಖ ಊದಿದ್ದಾನೆ.

ಕರ್ನಾಟಕದಲ್ಲಿ ಕಳೆದ ವಿಧಾನಸಭೆ ಚುನಾವಣೆ ಹೊತ್ತಿಗೆ ಭಾರೀ ಅಹಂಕಾರ ತೋರಿಸುತ್ತಿದ್ದವರು ಹಲವರಿದ್ದರು. ಅಂದಿನ ಸಚಿವ ಡಾ.ಕೆ.ಸುಧಾಕರ್, ಸುನಿಲ್ ಕುಮಾರ್, ನಳಿನ್ ಕುಮಾರ್, ಕಾಂಗ್ರೆಸಿನಲ್ಲಿ ಡಿಕೆಶಿ ಸೋದರರು ಹೀಗೆ ಹಲವರ ಹೆಸರು ಹೇಳಬಹುದು. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವರ್ಕ್ ಆರ್ಡರ್ ಇಲ್ಲದೆಯೇ ನೂರಾರು ಕೋಟಿ ಕೆಲಸಗಳನ್ನೂ ಮಾಡಿಸಿದ ಶಾಸಕರೂ ಇದ್ದರು. ಆ ಪೈಕಿ ಸುನಿಲ್ ಕುಮಾರ್ ಏದುಸಿರು ಬಿಟ್ಟು ಅಲ್ಪ ಅಂತರದಿಂದ ಸೋಲನ್ನು ತಪ್ಪಿಸಿಕೊಂಡಿದ್ದರು. ಚಿಕ್ಕಬಳ್ಳಾಪುರದಲ್ಲಿ ಸುಧಾಕರ್, ರಾಜಕೀಯದಲ್ಲಿ ಹಸುಳೆಯಾಗಿದ್ದ ಪ್ರದೀಪ್ ಈಶ್ವರ್ ಎದುರಲ್ಲಿ ಸೋತು ಸುಣ್ಣವಾಗಿದ್ದರು. ಕೊರೊನಾ ವೇಳೆ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆರೋಪ ಸುಧಾಕರ್ ರಾಜಕೀಯ ಭವಿಷ್ಯವನ್ನೇ ಮಸುಕಾಗಿಸುತ್ತೋ ಎನ್ನುವಷ್ಟರ ಮಟ್ಟಿಗೆ ಅತ್ತ ಬಿಜೆಪಿಯೂ ಇಲ್ಲ, ಇತ್ತ ಕಾಂಗ್ರೆಸ್ಸೂ ಇಲ್ಲದ ಸ್ಥಿತಿ ತಂದಿಟ್ಟಿತ್ತು.

ಸುಧಾಕರ್ ಅಹಂಕಾರದ ಕಾರಣಕ್ಕೇ ಸಿದ್ದರಾಮಯ್ಯ ಚುನಾವಣೆ ಪ್ರಚಾರದಲ್ಲಿ ನೇರ ಟಾರ್ಗೆಟ್ ಮಾಡಿದ್ದರು. ಪ್ರದೀಪ್ ಈಶ್ವರ್ ಎಂಬ ಬಚ್ಚಾನನ್ನು ಎದುರು ನಿಲ್ಲಿಸಿ, ಗುರಿಯಿಟ್ಟು ಬಾಣ ಹೊಡೆದಿದ್ದರು. ಅಂದು ಫೀನಿಕ್ಸ್ ನಂತೆ ಎದ್ದು ಬಂದಿದ್ದು ಪ್ರದೀಪ್ ಈಶ್ವರ್ ಎಂಬ ಮಾತಿನ ಶೂರ. ಕಂಡ ಕಂಡಲ್ಲಿ ಡಯಲಾಗ್ ಹೊಡೆಯುತ್ತಿದ್ದ ಪ್ರದೀಪ್ ಈಶ್ವರ್ ಬಹುಬೇಗನೆ ರಾಜ್ಯದ ಜನರ ಮನಸ್ಸನ್ನು ಆಕರ್ಷಿಸಿದ್ದರು. ಆವರೆಗೂ ಪ್ರದೀಪ್ ಈಶ್ವರ್ ಎಂದರೆ ಯಾರೆಂದೇ ಗೊತ್ತಿರದ ಜನರು ಆತನ ಹಿನ್ನೆಲೆ, ಸಾಧನೆಯನ್ನು ಕೇಳಿ ಬೆರಗಾಗಿದ್ದರು. ಪರಿಶ್ರಮ ಅಕಾಡೆಮಿ ಎನ್ನುವ ಸಂಸ್ಥೆಯನ್ನು ಹುಟ್ಟುಹಾಕಿ ಇಡೀ ರಾಜ್ಯದಲ್ಲೇ ಅತಿ ವಿಶಿಷ್ಟ ರೀತಿಯಲ್ಲಿ ಝೀರೋದಿಂದ ಬೆಳೆದು ಬಂದ ಬಗೆ, ಆಮೂಲಕ ಚಿಕ್ಕಬಳ್ಳಾಪುರದ ಜನರ ಮನಗೆದ್ದ ಕತೆ ಕೇಳಿ ಹೌಹಾರಿದ್ದರು. ಆದರೆ ಅಷ್ಟೇ ಆಗುತ್ತಿದ್ದರೆ, ತೊಂದ್ರೆ ಇರಲಿಲ್ಲ. ಇದೇ ಪ್ರದೀಪ್ ಈಶ್ವರ್, ಹೋದಲ್ಲಿ ಬಂದಲ್ಲಿ ಡಾ.ಕೆ. ಸುಧಾಕರ್ ವಿರುದ್ಧ ಕಿಡಿಕಾರುತ್ತಲೇ ಅಹಂಕಾರ ತಲೆಗೆ ಹತ್ತಿಸಿಕೊಂಡಿದ್ದರು. ಭವಿಷ್ಯದಲ್ಲಿ ಯಾವತ್ತೂ ಸುಧಾಕರ್ ಗೆದ್ದು ಬರಲಿಕ್ಕೆ ಸಾಧ್ಯವೇ ಇಲ್ಲ ಎಂದು ಹೇಳುತ್ತಲೇ ತಿರುಗಾಡಿದ್ದರು.

ಕ್ಯಾಮರಾ ಮುಂದೆ ಬೆತ್ತಲಾದ ಪ್ರದೀಪ್ ಈಶ್ವರ್

ಈತನ ಡಯಲಾಗ್ ಎಷ್ಟರ ಮಟ್ಟಿಗೆ ಹೋಯ್ತು ಅಂದ್ರೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸುಧಾಕರ್ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಎಂದು ತಿಳಿಯುತ್ತಲೇ ಮತ್ತೆ ಮಾತಿನ ಛೂಬಾಣ ಬಿಟ್ಟಿದ್ದರು. ಒಂದು ಹಂತದಲ್ಲಿ ಮಾಧ್ಯಮದ ಕ್ಯಾಮರಾ ಮುಂದೆ ನೇರ ಸವಾಲನ್ನೇ ಹಾಕಿದ್ದರು. ಚಿಕ್ಕಬಳ್ಳಾಪುರದಲ್ಲಿ ನನಗಿಂತ ಒಂದೇ ಒಂದು ಮತ ಜಾಸ್ತಿ ತೆಗೆದರೆ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ, ಸುಧಾಕರ್ ಪಾರ್ಲಿಮೆಂಟ್ ಹತ್ತಲು ಬಿಡೋದಿಲ್ಲ. ಇದು ನನ್ನ ಸವಾಲು ಎಂದು ಡಯಲಾಗ್ ಹೊಡೆದಿದ್ದರು. ಸುಧಾಕರ್ ವಿರುದ್ಧ ಈ ರೀತಿಯ ಸವಾಲು ಹಾಕಿದ್ದರಿಂದ ಸಹಜವಾಗಿಯೇ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಆಗಿತ್ತು. ಆದರೆ ಕಾಂಗ್ರೆಸ್ ಶಾಸಕನ ಹೇಳಿಕೆಯಾಗಿದ್ದರಿಂದ ಅಷ್ಟೇನೂ ತಲೆಕೆಡಿಸಿಕೊಂಡಿರಲಿಲ್ಲ. ಇದೇ ಮಾತು ಮುಂದಿಟ್ಟು ಶಾಸಕ ಎಸ್.ಆರ್ ವಿಶ್ವನಾಥ್ ತನಗೆ ಅಥವಾ ತನ್ನ ಪುತ್ರನಿಗೆ ಟಿಕೆಟ್ ಕೊಡಬೇಕು ಎಂದು ಯಡಿಯೂರಪ್ಪ ಬಳಿ ದುಂಬಾಲು ಬಿದ್ದಿದ್ದರು. ಯಡಿಯೂರಪ್ಪ ಅವರೂ ವಿಶ್ವನಾಥ್ ಪರವಾಗಿಯೇ ನಿಂತಿದ್ದರು. ಆದರೆ, ಕೊನೆಕ್ಷಣದಲ್ಲಿ ದೆಹಲಿ ಲಾಬಿ ನಡೆಸಿ ಸುಧಾಕರ್ ಟಿಕೆಟ್ ಗಿಟ್ಟಿಸಿಕೊಂಡಿದ್ದರು.

ಪ್ರದೀಪ್ ಈಶ್ವರ್ ನಿರಂತರ ವಾಗ್ದಾಳಿಯಿಂದ ಸುಧಾಕರ್ ಒಂದು ರೀತಿಯಲ್ಲಿ ಕನಲಿ ಹೋಗಿದ್ದರು. ಪ್ರದೀಪ್ ಈಶ್ವರ್ ಮಾತ್ರ ಜನರನ್ನು ತಾನೇ ಗುತ್ತಿಗೆ ಪಡೆದಿದ್ದೇನೆ ಎನ್ನುವಂತೆ ಡಯಲಾಗ್ ಹೊಡೆಯುತ್ತಿದ್ದರೆ, ಇತ್ತ ಸುಧಾಕರ್ ಜನರ ನಡುವೆ ನುಸುಳಲು ಶುರು ಮಾಡಿದ್ದರು. ಅಹಂ ಬದಿಗಿಟ್ಟು ಬೆನ್ನು ಬಗ್ಗಿಸಿ ಕೈ ಮುಗಿಯುತ್ತ ಸಾಗಿದ್ದರು. ಇತ್ತ ಕಾಂಗ್ರೆಸಿನಲ್ಲಿ ಯುವ ಹೊಸಮುಖ ರಕ್ಷಾ ರಾಮಯ್ಯ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದರು. ಯಾವುದೇ ಕೋನದಲ್ಲಿ ನೋಡಿದರೂ, ರಕ್ಷಾ ರಾಮಯ್ಯ ಈ ಹಿಂದಿನ ಅಭ್ಯರ್ಥಿ ವೀರಪ್ಪ ಮೊಯ್ಲಿಗಿಂತ ಎಷ್ಟೋ ವಾಸಿ ಎನ್ನಬಹುದಾದ ವ್ಯಕ್ತಿ. ಆದರೆ ಸಾಧು ಸ್ವಭಾವ, ರಾಜಕೀಯ ಅನುಭವ ಇಲ್ಲದೇ ಇರುವ ರಕ್ಷಾ ರಾಮಯ್ಯ ಎದುರಲ್ಲಿ ಸುಧಾಕರ್ ಸದ್ದಿಲ್ಲದೆ ರಾಜಕೀಯ ದಾಳ ಉರುಳಿಸಿದ್ದರು. ಆದರೂ, ಚುನಾವಣೆ ಹೊತ್ತಲ್ಲಿ ಸುಧಾಕರ್ ಗೆಲುವು ಅಸಾಧ್ಯ ಎನ್ನುವ ಮಾತೇ ಬಂದಿತ್ತು. ಯಾಕಂದ್ರೆ, ಪ್ರದೀಪ್ ಈಶ್ವರ್ ಹೋದಲ್ಲಿ ಬಂದಲ್ಲಿ ಸವಾಲು ಹಾಕಿದ್ದು ಮತ್ತು ಸುಧಾಕರ್ ಮೇಲಿನ ಭ್ರಷ್ಟಾಚಾರದ ಆರೋಪಗಳೇ ಹೆಚ್ಚು ಚರ್ಚೆಯಾಗಿದ್ದು ಬಿಜೆಪಿ ಗೆಲುವಿನ ಬಗ್ಗೆ ಅನುಮಾನ ಮೂಡಿಸಿತ್ತು.

ಆದರೆ ಚುನಾವಣೆಯ ಫಲಿತಾಂಶ ಬರುತ್ತಿದ್ದಂತೆ ಸುಧಾಕರ್ ಗೆಲುವಿನ ನಗೆ ಬೀರಿದ್ದಾರೆ. ಇತ್ತ ಮಾತಿಗೆ ಸಿಕ್ಕಾಗೆಲ್ಲ ಡಯಲಾಗ್ ಹೊಡೆಯುತ್ತಿದ್ದ ಶಾಸಕ ಪ್ರದೀಪ್ ಈಶ್ವರ್ ಪಾಲಿಗೆ ಪೆಚ್ಚು ಮೋರೆ ಹಾಕುವ ಸ್ಥಿತಿ. ಜೊತೆಗೆ, ತೀವ್ರ ನಗೆಪಾಟಲಿಗೂ ಈಡಾಗಿದ್ದಾರೆ. ಅಹಂಕಾರದ ಮಾತೇ ಈಗ ಅವರನ್ನು ಜನರ ನಡುವೆ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟಿದೆ. ಯಾರು ಏನಂದ್ರೂ ಸುಧಾಕರ್ ಗೆಲುವು ಸಾಧ್ಯವಿಲ್ಲ, ಆತ ಗೆದ್ದರೆ ತಾನು ರಾಜಿನಾಮೆ ಎಸೆಯುತ್ತೇನೆ ಎಂದಿದ್ದ ಮಾತಿನ ವಿಡಿಯೋ ಮುಂದಿಟ್ಟು ಬಿಜೆಪಿ ಕಾರ್ಯಕರ್ತರು ರಾಜಿನಾಮೆ ಕೊಡಪ್ಪಾ, ಎಲ್ಲಿದ್ದೀಯಪ್ಪಾ ಎಂದು ಅಣಕಿಸುತ್ತಿದ್ದಾರೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಅನ್ನುವ ಮಾತು ಬಂದಿದ್ದು ಇದೇ ಕಾರಣಕ್ಕೆ ಇರಬೇಕು. ಡಿಕೆಶಿ ಸೋದರರಿಗೂ ಇದೇ ರೀತಿಯ ಗತಿಯನ್ನು ಮತದಾರ ನೀಡಿದ್ದಾನೆ. ಸೋದರ ಡಿಕೆ ಸುರೇಶ್ ಸೋಲು ಡಿಕೆಶಿ ಸಿಎಂ ಕನಸನ್ನೇ ಸದ್ಯಕ್ಕೆ ನುಚ್ಚು ನೂರು ಮಾಡಿದ್ದಂತೂ ಸತ್ಯ.

ಅವಕಾಶ ಸಿಕ್ಕಾಗೆಲ್ಲ ಕಪಾಳ ಮೋಕ್ಷ

ಪ್ರಜಾಪ್ರಭುತ್ವದಲ್ಲಿ ಅಹಂಕಾರ, ದರ್ಪ ಹೆಚ್ಚು ದಿನ ನಡೆಯೋದಿಲ್ಲ. ಜನರು ಅವಕಾಶ ಸಿಕ್ಕಾಗಲೆಲ್ಲ ಅಹಂಕಾರ, ದರ್ಪಕ್ಕೆ ಉತ್ತರ ನೀಡುತ್ತಲೇ ಬಂದಿದ್ದಾರೆ. ಹಿಂದೆ ಇಂದಿರಾ ಗಾಂಧಿ ಅಹಂಕಾರ ತೋರಿಸಿದಾಗಲೂ ಮನೆಯ ಕಡೆಗೆ ದಾರಿ ತೋರಿಸಿದ್ದಾರೆ. ತಮಿಳುನಾಡಿನಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಪಟ್ಟ ಸಿಗುತ್ತಿದ್ದಂತೆ ರಾಜಕೀಯ ಎದುರಾಳಿ ಜಯಲಲಿತಾರನ್ನು ಜೈಲಿಗೆ ಹಾಕಿ ಸೇಡು ತೀರಿಸಿಕೊಂಡು ಅಹಂಕಾರ ಮೆರೆದಿದ್ದರು. ಆನಂತರ, ಜಯಲಲಿತಾ ಅದೇ ತಮಿಳರಿಂದ ಮತ ಗಿಟ್ಟಿಸಿಕೊಂಡು ತನ್ನನ್ನು ಎಳೆದೊಯ್ದಿದ್ದ ಅಧಿಕಾರಿಗಳಿಂದಲೇ ಕಪ್ಪು ಕನ್ನಡಕದ ಕರುಣಾನಿಧಿಯನ್ನು ನಡುರಾತ್ರಿಯಲ್ಲಿ ದರ ದರನೆ ಎಳೆದೊಯ್ದು ಜೈಲಿಗೆ ಹಾಕಿಸಿದ್ದರು. ಕರುಣಾನಿಧಿ, ಜಯಲಲಿತಾಗೂ ಅಲ್ಲಿನ ಮತದಾರ ಕಾಲ ಕಾಲಕ್ಕೆ ತೀರ್ಪು ಕೊಟ್ಟಿದ್ದಾನೆ. ವರ್ಷದ ಹಿಂದೆ ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನೂ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜೈಲಿಗೆ ಹಾಕಿದ್ದರು. ಈಗಿನ ಚುನಾವಣೆಯಲ್ಲಿ ತೆಲುಗಿನ ಮತದಾರ ಮತ್ತೆ ಚಂದ್ರಬಾಬು ನಾಯ್ಡುಗೆ ಪಟ್ಟಾಭಿಷೇಕದ ಮತ ಧಾರೆ ಎರೆದಿದ್ದಾನೆ. ತಂದೆಯಿಂದ ಬಂದ ಬಳುವಳಿಯಂತೆ ಹತ್ತು ವರ್ಷ ಅಧಿಕಾರದಲ್ಲಿ ಕೂತಿದ್ದ ಜಗನ್ ರೆಡ್ಡಿಯನ್ನು ಮನೆಯ ಕಾರಕೂನನಿಗೂ ಸಿಗದಷ್ಟೂ ಮರ್ಯಾದಿ ಕೊಡದೆ ನಡು ಬೆತ್ತಲಾಗಿಸಿ ಮನೆಯತ್ತ ಕಳಿಸಿದ್ದಾನೆ. ಮಹಾರಾಷ್ಟ್ರದಲ್ಲಿಯೂ ಅಘಾಡಿ ಸರಕಾರವನ್ನು ಲಗಾಡಿ ಹೊಡೆಸಿದ್ದಕ್ಕೆ ಈ ಬಾರಿ ಬಿಜೆಪ ಮತ್ತು ಶಿಂಧೆ ಜೋಡಿಗೆ ಕಪಾಳ ಮೋಕ್ಷ ಮಾಡಿದ ರೀತಿ ಅಲ್ಲಿನ ಫಲಿತಾಂಶ ಧ್ವನಿಸಿದೆ.

ಎರಡು ಬಾರಿ ಬಹುಮತದ ಅಧಿಕಾರದಿಂದ ಏನು ಮಾಡಿದರೂ ನಡೆಯುತ್ತೆ ಎನ್ನುವ ಅಹಂಕಾರ ಅಮಿತ್ ಷಾ, ಮೋದಿ ಜೋಡಿಯ ತಲೆಗೂ ಅಡರಿತ್ತು. ಆರೆಸ್ಸೆಸ್ ತನ್ನ ಮಾತೃಸಂಸ್ಥೆ ಎನ್ನುವುದನ್ನೂ ಲೆಕ್ಕಿಸದೆ, ನಾವು ಆರೆಸ್ಸೆಸ್ ಹಿಡಿತದಲ್ಲಿ ಇಲ್ಲ. ಅದಕ್ಕಿಂತ ಮೇಲೆ ಹೋಗಿದ್ದೇವೆ ಎನ್ನುವ ಮಾತುಗಳನ್ನು ಪಕ್ಷದ ಅಧ್ಯಕ್ಷನ ಮೂಲಕ ಆಡಿಸಿದ್ದರು. ಚುನಾವಣೆ ಹೊತ್ತಿಗೆ ಆರೆಸ್ಸೆಸ್ ಎನ್ನುವ ಮಹಾನ್ ಸಂಘಟನಾ ಶಕ್ತಿಯನ್ನು ಧಿಕ್ಕರಿಸಿ ಆಡಿದ್ದ ಮಾತು ಸಂಘದ ನಿಷ್ಠರಿಗೆ ಹಿಡಿಸಿರಲಿಲ್ಲ. ಮೋದಿ ಬಳಿಕ ಯೋಗಿ ಎನ್ನುವುದು ಆರೆಸ್ಸೆಸ್ ಲೆಕ್ಕ ಆಗಿದ್ದರೆ, ಅಮಿತ್ ಷಾ ಜೋಡಿ ಈ ಲೆಕ್ಕವನ್ನು ಕೇಳುವ ಸ್ಥಿತಿಯಲ್ಲಿ ಇಲ್ಲ. ಇದೇ ಕಾರಣಕ್ಕೆ ಆ ಮಾತುಗಳನ್ನು ನಡ್ಡಾ ಮೂಲಕ ಹೇಳಿಸಿದ್ದರು ಎನ್ನುವುದು ಒಳಗಿನ ಮಾತು. ಅದೇ ಕಾರಣಕ್ಕೆ ಯುಪಿಯಲ್ಲಿ ಯೋಗಿ ಕಳಿಸಿಕೊಟ್ಟಿದ್ದ 30 ಮಂದಿಯ ಹೆಸರು ಬಿಟ್ಟು ಮೇಲಿನವರು ಬೇರೆಯವರನ್ನೇ ಅಭ್ಯರ್ಥಿಯಾಗಿಸಿದ್ದರು.  

ರಾಜಾರಾಮನಂತಾದರೂ ಇರು..!

ಇದಕ್ಕೆಲ್ಲ ಆರೆಸ್ಸೆಸ್ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲವಾದರೂ, ಸಂಘದ ಬಲಿಷ್ಠ ನೆಲೆ ಉತ್ತರ ಪ್ರದೇಶದಲ್ಲಿ ಮತದಾರ ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾನೆ. ಯಾವ ಅಯೋಧ್ಯೆ ರಾಮನ ಹೆಸರಿಡಿದು ಇಡೀ ದೇಶದಲ್ಲಿ ರಾಜಕೀಯ ಮಾಡಿದರೋ, ಅದೇ ರಾಮನ ಭೂಮಿಯಲ್ಲಿ ಮತದಾರ ಬಿಜೆಪಿ ವಿರುದ್ಧ ಮತ ನೀಡಿದ್ದಾನೆ. ಇದು ರಾಮನ ವಿರುದ್ಧ ನೀಡಿದ ತೀರ್ಪಲ್ಲ, ಬದಲಿಗೆ ಅಹಂಕಾರ, ದರ್ಪಕ್ಕೆ ನೀಡಿದ್ದ ಪ್ರತಿಯೇಟು. ನೀನು ಸೀತಾರಾಮನಾಗದಿದ್ದರೆ ಪರವಾಗಿಲ್ಲ, ರಾಜಕೀಯದಲ್ಲಿ ರಾಜಾರಾಮನಾಗಿ ಅಂತಾದರೂ ಇರು ಎನ್ನುವ ಸಂದೇಶವನ್ನು ಮತದಾರ ಕೊಟ್ಟಿದ್ದಾನೆ. ರಾಮ ಮಂದಿರದ ಕಾರಣಕ್ಕೆ ಕ್ಲೀನ್ ಸ್ವೀಪ್ ಕನಸಿನಲ್ಲಿದ್ದ ಬಿಜೆಪಿ ಪಾಲಿಗಂತೂ ಉತ್ತರ ಪ್ರದೇಶದ ತೀರ್ಪು ಶಾಕ್ ಟ್ರೀಟ್ಮೆಂಟ್. ಪಕ್ಕದ ಮಧ್ಯಪ್ರದೇಶದಲ್ಲಿ ಕ್ಲೀನ್ ಸ್ವೀಪ್ ಸಿಕ್ಕಿದ್ದರೆ, ಅಂಥದ್ದೇ ಹಿಂದಿ ಹಾರ್ಟ್ ಲ್ಯಾಂಡ್ ಯುಪಿಯಲ್ಲಿ ಮತದಾರನ ತೀರ್ಪು ಅಮಿತ್ ಷಾ- ಮೋದಿ ಜೋಡಿಯನ್ನು ಪೂರ್ತಿ ಅಧಿಕಾರದಿಂದ ದೂರ ಇಡದಿದ್ದರೂ ಮುಟ್ಟಿ ನೋಡುವಷ್ಟರ ಮಟ್ಟಿಗೆ ಬಿಸಿ ತುಪ್ಪವನ್ನು ಬಾಯಿಗಿಟ್ಟಿದೆ. ದೇವರು, ಹಿಂದುತ್ವದ ಹೆಸರಲ್ಲಿ ಅಧಿಕಾರಕ್ಕಾಗಿ ಏನಂದರೂ ಮತದಾರ ಸಹಿಸಿಕೊಳ್ಳುತ್ತಾನೆ ಎಂಬ ಭ್ರಮೆಯನ್ನು ಕಳಚಿಡುವಂತೆ ಈ ತೀರ್ಪು ತೋರಿಸಿಕೊಟ್ಟಿದೆ.

People voted against BJPs arrogance How BJP lost the plot in India. The results are a personal blow to Mr Modi, who has always secured majorities in elections as both chief minister of Gujarat state and India’s prime minister, and dominated the country's politics for a decade. The verdict marks a surprising revival for the Congress Party-led INDIA opposition alliance, defying earlier predictions of its decline, and sharply diverging from both exit polls and pre-election surveys.