ಮಂಗಳೂರು ಉತ್ತರಕ್ಕೆ ನಳಿನ್, ಕಾರ್ಕಳಕ್ಕೆ ಮುತಾಲಿಕ್ ; ರಾಜ್ಯ ಬಿಜೆಪಿಯನ್ನೇ ಅಲುಗಾಡಿಸಿದ ಬಿಜೆಪಿ ಮೊದಲ ಪಟ್ಟಿ!  

04-04-23 10:28 pm       Mangalore Correspondent   ನ್ಯೂಸ್ View

ಎಪ್ರಿಲ್ 4, ಮಂಗಳವಾರ ಮಧ್ಯಾಹ್ನ ಮಂಗಳೂರು, ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆಯ ಮಾಧ್ಯಮ ವಲಯ, ಬಿಜೆಪಿ ಕಾರ್ಯಕರ್ತರು, ರಾಜ್ಯ ಬಿಜೆಪಿಯ ಮುಖಂಡರೆಲ್ಲ ಅಚ್ಚರಿಗೊಂಡಿದ್ದರು.

ಮಂಗಳೂರು. ಎ.4: ಎಪ್ರಿಲ್ 4, ಮಂಗಳವಾರ ಮಧ್ಯಾಹ್ನ ಮಂಗಳೂರು, ಬೆಂಗಳೂರು ಸೇರಿ ರಾಜ್ಯದ ಬಹುತೇಕ ಕಡೆಯ ಮಾಧ್ಯಮ ವಲಯ, ಬಿಜೆಪಿ ಕಾರ್ಯಕರ್ತರು, ರಾಜ್ಯ ಬಿಜೆಪಿಯ ಮುಖಂಡರೆಲ್ಲ ಅಚ್ಚರಿಗೊಂಡಿದ್ದರು. ಬಿಜೆಪಿಯಿಂದ ಹಲವು ಶಾಸಕರಿಗೆ ಈ ಬಾರಿ ಟಿಕೆಟ್ ಇಲ್ಲ ಎಂಬ ಸುದ್ದಿಯ ನಡುವಲ್ಲೇ ಬಿಜೆಪಿಯ ಮೊದಲ ಪಟ್ಟಿ ರಿಲೀಸ್ ಆಗಿತ್ತು. ವಾಟ್ಸಪ್ ಗ್ರೂಪ್ ಗಳಲ್ಲಿ ಜೊತೆಗೆ ಕೆಲವರು ಪರ್ಸನಲ್ ಆಗಿಯೂ ಬಿಜೆಪಿ ಪಟ್ಟಿ ರಿಲೀಸ್ ಎಂದು ಪಿಡಿಎಫ್ ಲಿಸ್ಟನ್ನು ಫಾರ್ವರ್ಡ್ ಮಾಡುತ್ತಿದ್ದರು.

ಬೆಳಗ್ಗೆ ಮುಖ್ಯಮಂತ್ರಿ ಹೇಳಿದ ರೀತಿಯಲ್ಲೇ ಮೊದಲ ಪಟ್ಟಿಯಲ್ಲಿ ಹಲವು ಹಾಲಿ ಶಾಸಕರ ಕ್ಷೇತ್ರಗಳಿಗೆ ಹೊಸ ಮುಖಗಳಿಗೆ ಟಿಕೆಟ್ ಕೊಡಲಾಗಿತ್ತು. ಎಲ್ಲಿ ತಮ್ಮ ಕ್ಷೇತ್ರ ಇದೆ, ಯಾವ ಶಾಸಕ ಸ್ಥಾನ ಕಳಕೊಂಡಿದ್ದಾರೆ ಎಂದು ಮಾಧ್ಯಮದ ಮಂದಿ ಮೊದಲಿಗೆ ತಡಕಾಡಿದ್ದರು. ಕರಾವಳಿಯಲ್ಲಿ ಅಚ್ಚರಿಯಾಗಿಸಿದ್ದು ಕಾರ್ಕಳ ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್ ಗೆ ಟಿಕೆಟ್ ಕೊಟ್ಟಿದ್ದು ಮತ್ತು ಮಂಗಳೂರು ಉತ್ತರ ಕ್ಷೇತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರನ್ನು ಕಣಕ್ಕಿಳಿಸಿದ್ದು. ಕರಾವಳಿಯಲ್ಲಿ ಇವೆರಡು ಕ್ಷೇತ್ರಗಳೂ ಸಾಕಷ್ಟು ಕುತೂಹಲ ಹುಟ್ಟಿಸಿರುವಂಥವು. ಹೀಗಾಗಿ ಒಮ್ಮೆಗೆ ಇದು ಹೌದಾ ಎನ್ನುವ ಉದ್ಘಾರ ಮಾಧ್ಯಮ ಗೆಳೆಯರಿಂದಲೇ ಬಂದಿತ್ತು. ಬಿಜೆಪಿ ಪಟ್ಟಿ ಬಂದಿದೆ ಎಂದು ಪಕ್ಷದ ರಾಜ್ಯ ಪ್ರಮುಖರಲ್ಲಿ ಕೇಳಿದರೆ, ಹೌದಾ ಎಂದು ಆ ಕಡೆಯಿಂದಲೂ ಅಚ್ಚರಿಯದ್ದೇ ಉದ್ಘಾರ.

ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ, ಮಂಗಳೂರು ದಕ್ಷಿಣದಲ್ಲಿ ವೇದವ್ಯಾಸ ಕಾಮತ್, ಪುತ್ತೂರಿಗೆ ಸಂಜೀವ ಮಠಂದೂರು ಹೆಸರೇ ಇತ್ತು. ಕಾರ್ಕಳದ ಶಾಸಕ ಸುನಿಲ್ ಕುಮಾರ್ ಹೆಸರನ್ನು ಉಡುಪಿ ಕ್ಷೇತ್ರಕ್ಕೆ ಹಾಕಲಾಗಿತ್ತು. ಸುನಿಲ್ ಕುಮಾರ್ ಎತ್ತಂಗಡಿ ಮಾಡಿದ್ದು ಅಚ್ಚರಿ ಮೂಡಿಸಿದರೂ ಸರಿ ಎನಿಸಿತ್ತು. ಯಾಕಂದ್ರೆ, ಇತ್ತ ಮುತಾಲಿಕ್ ಗೆ ಟಿಕೆಟ್ ಕೊಟ್ಟಿದ್ದರಿಂದ ಸುನಿಲ್ ಅವರನ್ನು ಉಡುಪಿಗೆ ವರ್ಗಾಯಿಸಲಾಗಿದೆ ಎಂದು ನಂಬುವಂತಿತ್ತು. ಅತ್ತ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ತಾನು ಸ್ಪರ್ಧಿಸಲ್ಲ ಎಂದಿರುವುದರಿಂದ ಕಿರಣ್ ಕೊಡ್ಗಿ ಟಿಕೆಟ್ ಪಡೆದಲ್ಲಿ ರಘುಪತಿ ಭಟ್ ಸ್ಥಾನ ಕಳಕೊಂಡಿದ್ದಾರೆ, ಹಾಗಾಗಿ ಸುನಿಲ್ ಅವರನ್ನು ಉಡುಪಿಗೆ ಹಾಕಿದ್ದಾರೆ ಎಂಬ ಲೆಕ್ಕ ಮೂಡಿಸುವಂತಿತ್ತು ಪಟ್ಟಿ. ಆದರೆ ಮತ್ತಷ್ಟು ಕುತೂಹಲ ಮೂಡಿಸಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರನ್ನು ಹುಬ್ಬಳ್ಳಿ ಧಾರವಾಡದ ಜಗದೀಶ ಶೆಟ್ಟರ್ ಜಾಗದಲ್ಲಿ ಕಣಕ್ಕಿಳಿಸಿದ್ದು.

ವಿಜಯಪುರದ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಹಿರೇಕೆರೂರು, ಬೆಂಗಳೂರಿನ ಮಲ್ಲೇಶ್ವರಕ್ಕೆ ಅಶೋಕ್ ಹಾರ್ನಹಳ್ಳಿ, ವಿಜಯನಗರಕ್ಕೆ ಉಮೇಶ್ ಶೆಟ್ಟಿ ಹೆಸರಿತ್ತು. ಮಾಲೀಕಯ್ಯ ಗುತ್ತೇದಾರ್ ಜಾಗಕ್ಕೆ ಸೋದರ ನಿತಿನ್ ಗುತ್ತೇದಾರ್ ಹೆಸರಿತ್ತು. ಇವೆಲ್ಲ ನೋಡಿದರೆ ಏನೋ ಎಡವಟ್ಟು ಆಗಿದೆ ಅನ್ನೋ ಸಂಶಯ ಬರುವಂತಿತ್ತು. ಆದರೆ, ಹೆಸರಿನ ಲಿಸ್ಟ್ ಮತ್ತು ಅದಕ್ಕೆ ರಾಜ್ಯ ಉಸ್ತುವಾರಿ ಅರಣ್ ಸಿಂಗ್ ಸಹಿ, ಜೊತೆಗೆ ಸೀಲು ಹೊಡೆದಿರುವುದನ್ನು ನೋಡಿದರೆ ಅದನ್ನು ಯಾರು ಕೂಡ ನಿರಾಕರಿಸುವಂತೆ ಇರಲಿಲ್ಲ. ನೂರು ಅಭ್ಯರ್ಥಿಗಳಿದ್ದ ಮೊದಲ ಪಟ್ಟಿ ಎಷ್ಟು ಪ್ರಭಾವಶಾಲಿಯಾಗಿತ್ತು ಮತ್ತು ಇಡೀ ರಾಜ್ಯ ಬಿಜೆಪಿಯನ್ನೇ ಎಷ್ಟು ಯಾಮಾರಿಸಿತ್ತು ಅಂದರೆ, ಕೆಲವೇ ಸಮಯದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಅದು ಫೇಕ್ ಲಿಸ್ಟ್ ಎಂದು ಟ್ವಿಟರ್ ನಲ್ಲಿ ಘೋಷಿಸುವಷ್ಟರ ಮಟ್ಟಿಗೆ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿತ್ತು. ಬಿಜೆಪಿ ರಾಜ್ಯ ವಕ್ತಾರರೂ ಅದೇನೊ ಗೊತ್ತಿಲ್ಲ, ಲಿಸ್ಟ್ ಬಂದಿದ್ಯಾ ಅಂತ ಮರು ಪ್ರಶ್ನೆ ಹಾಕುವಷ್ಟು ಹೌಹಾರುವಂತೆ ಮಾಡಿತ್ತು.

ಇದು ಫೇಕ್ ಲಿಸ್ಟೇ ಆಗಿದ್ದರೂ, ಇದನ್ನು ಮಾಡಿದವರು ಮಾತ್ರ ಬಿಜೆಪಿ ಒಳಗಿನವರೇ ಮತ್ತು ಈಗಿನ ರಾಜ್ಯ ಬಿಜೆಪಿಯ ಬಗ್ಗೆ ಸಾಕಷ್ಟು ತಿಳಿದುಕೊಂಡವರೇ ಆಗಿದ್ದಾರೆ. ರಾಜ್ಯ ಬಿಜೆಪಿ ಮೊದಲ ಪಟ್ಟಿಯನ್ನು ರಿಲೀಸ್ ಮಾಡಲು ಹೊಯ್ದಾಟ ಮಾಡುತ್ತಿರುವಾಗಲೇ ಅಂತಹ ಅಚ್ಚರಿಯ ಪಟ್ಟಿಯನ್ನೇ ಬಿಡುಗಡೆ ಮಾಡಲಾಗಿತ್ತು. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಹಾಲಿ ಶಾಸಕ ಭರತ್ ಶೆಟ್ಟಿಯನ್ನು ಬದಲಿಸಿ ಹೊಸಬರನ್ನು ಆಯ್ಕೆ ಮಾಡಲು ಒಳಗಿಂದೊಳಗೆ ಕಸರತ್ತು ನಡೆದಿದೆ. ಇನ್ನೊಂದೆಡೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಪ್ತ, ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರಿಗೂ ಟಿಕೆಟ್ ಕೊಡಿಸುವುದಕ್ಕೆ ಕಸರತ್ತು ಮಾಡುತ್ತಿದ್ದಾರೆ. ಇನ್ನೊಂದೆಡೆ ನಳಿನ್ ಕುಮಾರ್ ತಾನೇ ಕಣಕ್ಕಿಳಿಯೋದಕ್ಕೂ ನೋಡುತ್ತಿದ್ದಾರೆ ಅನ್ನೋ ವಿಚಾರವೂ ಚರ್ಚೆಯಲ್ಲಿದೆ. ಇವೆಲ್ಲದರ ನಡುವೆ, ಮಂಗಳೂರು ಉತ್ತರಕ್ಕೆ ನಳಿನ್ ಕುಮಾರನ್ನೇ ಇಳಿಸಿರುವ ಪಟ್ಟಿ ಹೊಯ್ದಾಟ ನಡೆಸುತ್ತಿರುವ ರಾಜ್ಯಾಧ್ಯಕ್ಷರಿಗೇ ತಿರುಗೇಟು ನೀಡಿದಂತಾಗಿತ್ತು. ಕೇಂದ್ರದ ಕಡೆಯಿಂದ ಬಂದಿದ್ದ ಲಿಸ್ಟ್ ಅಂತೂ ಇಡೀ ರಾಜ್ಯ ಬಿಜೆಪಿ ಮತ್ತು ಮಾಧ್ಯಮ ವಲಯವನ್ನು ಒಂದು ಕ್ಷಣಕ್ಕೆ ಅಚ್ಚರಿಗೆ ನೂಕಿದ್ದಂತೂ ಸತ್ಯ.

Naleen Kateel to contest from Mangalore North Constituency, Pramod Muthalik from karkala, fake election list creats turmoil in state. BJP Targets Congress After 'Fake' Candidates' List For Karnataka Emerges On Social Media. The ruling party has not yet released the list of candidates, and is likely to come out with one after its Parliamentary Board meeting on April 8.