ಪುಸ್ತಕ ಮೇಳದಲ್ಲಿ ಸಾಹಿತಿಗಳ ಗೌರವಕ್ಕಾಗಿ 25 ಸಾವಿರದ ಶಾಲು ಖರೀದಿಸಿದ್ದು ಸತ್ಯ, ಲಿಖಿತವಾಗಿ ಕೊಟ್ಟರೆ ಚರ್ಚೆಗೆ ಅವಕಾಶ ; ಸ್ಪೀಕರ್ ಯುಟಿ ಖಾದರ್

25-11-25 10:07 pm       Mangalore Correspondent   ಕರಾವಳಿ

ಶಾಸಕರ ಭವನ ನವೀಕರಣ, ಪುಸ್ತಕ ಮೇಳದ ನೆಪದಲ್ಲಿ ದುಬಾರಿ ಬಿಲ್ ಮಾಡಿಸಿದ ಆರೋಪದ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಆರೋಪ ಇದ್ದರೂ, ಲಿಖಿತವಾಗಿ ದೂರು ಕೊಡಲಿ. ಸ್ಪೀಕರ್ ಪೀಠಕ್ಕೆ ಅದರದ್ದೇ ಮಹತ್ವ ಇದೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಇದೆ.

ಮಂಗಳೂರು, ನ.25 : ಶಾಸಕರ ಭವನ ನವೀಕರಣ, ಪುಸ್ತಕ ಮೇಳದ ನೆಪದಲ್ಲಿ ದುಬಾರಿ ಬಿಲ್ ಮಾಡಿಸಿದ ಆರೋಪದ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ. ಯಾವುದೇ ಆರೋಪ ಇದ್ದರೂ, ಲಿಖಿತವಾಗಿ ದೂರು ಕೊಡಲಿ. ಸ್ಪೀಕರ್ ಪೀಠಕ್ಕೆ ಅದರದ್ದೇ ಮಹತ್ವ ಇದೆ. ಕಾಮಗಾರಿಗಳಲ್ಲಿ ಪಾರದರ್ಶಕತೆ ಇದೆ. ಪುಸ್ತಕ ಮೇಳದಲ್ಲಿ ಸಾಹಿತಿಗಳನ್ನು ಗೌರವಿಸಲು 25 ಸಾವಿರ ಮೌಲ್ಯದ ಶಾಲು ತೆಗೆಸಿದ್ದಕ್ಕೂ ದಾಖಲೆ ಇದೆ. ಅದನ್ನು ಸರ್ಕಾರದ ಸಿಲ್ಕ್ ಬೋರ್ಡ್ ನಿಂದಲೇ ಖರೀದಿಸಲಾಗಿದೆ ಎಂದು ಹೇಳಿದ್ದಾರೆ.

ಜವಾಬ್ದಾರಿ ಸ್ಥಾನದಲ್ಲಿದ್ದವರು ಗಾಳಿಯಲ್ಲಿ ಗುಂಡು ಹೊಡೆದ ರೀತಿ ಮಾತನಾಡಬಾರದು. ಸರಿಯಾಗಿಯೇ ಪ್ರಶ್ನೆ ಮಾಡಲಿ, ಉತ್ತರ ನೀಡುತ್ತೇನೆ. ಸತ್ಯ ಏನೆಂದು ದಾಖಲೆಯಲ್ಲಿ ಇರುತ್ತದೆ. ಹೆಸರಾಂತ ಸಾಹಿತಿಗಳನ್ನು ತಕ್ಕ ರೀತಿಯಲ್ಲೇ ಗೌರವಿಸಬೇಕೆಂದು 25 ಸಾವಿರ ಮೌಲ್ಯದ ಶಾಲನ್ನು ಖರೀದಿಸಲಾಗಿತ್ತು. ಅದನ್ನು ಸರ್ಕಾರದ ಗೃಹ ಮಂಡಳಿಯಿಂದಲೇ ಖರೀದಿಸಿದ್ದು ಬೇಕಾದರೆ ಚೆಕ್ ಮಾಡಲಿ ಎಂದು ಹೇಳಿದ್ದಾರೆ. ಈ ಕುರಿತು ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಬಂದರೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ, ಕೇಳುವ ರೀತಿಯಲ್ಲೇ ಕೇಳಿದರೆ ಅವಕಾಶ ಕೊಡುತ್ತೇನೆ ಎಂದರು.

ಮಂಜನಾಡಿಯಲ್ಲಿ ಮಳೆಗೆ ಮನೆ ಕುಸಿದು ಬಿದ್ದು ಕುಟುಂಬ ಬೀದಿಗೆ ಬಂದಿರುವ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಪ್ರಕೃತಿ ವಿಕೋಪದಿಂದ ಅತಿಯಾಗಿ ಮಳೆ ಬಂದು ಮನೆ ಕುಸಿದು ಬಿದ್ದಿತ್ತು. ಮಂಜನಾಡಿಯಲ್ಲಿ ಮೂವರು ಮತ್ತು ದೇರಳಕಟ್ಟೆಯಲ್ಲಿ ಮಗು ಸತ್ತಿತ್ತು. ನಾಲ್ವರ ಸಾವಿನ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರು ತಲಾ 5 ಲಕ್ಷದಂತೆ ಪರಿಹಾರ ನೀಡಿದ್ದಾರೆ. ಸ್ಥಳೀಯ ಪಂಚಾಯತ್ ನವರು ಸೇರಿ ಜಿಲ್ಲಾಡಳಿತ ರಕ್ಷಣೆಗೆ ನೆರವು ನೀಡಿತ್ತು. ಅವರಿಗೆ ಯಾವ ರೀತಿಯ ಪರಿಹಾರ ಸಿಗಲಿಲ್ಲ ಅನ್ನುವುದು ತನ್ನ ಗಮನಕ್ಕೆ ಬಂದಿಲ್ಲ. ಮನೆ ಡ್ಯಾಮೇಜ್ ಆಗಿದ್ದಕ್ಕೆ ದುಡ್ಡು ಸಿಕ್ಕಿದೆಯೋ ಇಲ್ಲವೋ ಹೇಳಲಿ ಎಂದು ಪ್ರಶ್ನಿಸಿದರು.

ಅದೇ ಪ್ರಕರಣದಲ್ಲಿ ಸ್ಥಳೀಯ ಅಧಿಕಾರಿಗಳು ಉಲ್ಟಾ ವರದಿ ನೀಡಿದ್ದು, ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತ ಆಗಿರುವ ಕುರಿತು ಪ್ರಶ್ನಿಸಿದಾಗ ಗುಡ್ಡಗಾಡು ಇರುವ ಪ್ರದೇಶದಲ್ಲಿ ಕಷ್ಟಪಟ್ಟು ಕಾಂಕ್ರೀಟ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಗುಡ್ಡವನ್ನು ಅಗೆಯುವುದು ಅನಿವಾರ್ಯ ಆಗಿತ್ತು. ಹಾಗೆಂದು ಅದಕ್ಕೆ ಇಂಜಿನಿಯರ್ ಕಾರಣವೆಂದು ಕ್ರಮಕ್ಕೆ ಮುಂದಾದರೆ ಮುಂದೆ ಇಂತಹ ಕೆಲಸಕ್ಕೆ ಇಂಜಿನಿಯರ್ ಗಳೇ ಬರಲಿಕ್ಕಿಲ್ಲ. ಪ್ರಕೃತಿ ವಿಕೋಪದಿಂದ ಅಲ್ಲಿ ದುರಂತ ಆಗಿದೆ, ಅದಕ್ಕೆ ಯಾರನ್ನೋ ದೂಷಿಸಿ ಪ್ರಯೋಜನ ಇಲ್ಲ. ಅಲ್ಲಿ ಕಾಂಕ್ರೀಟ್ ರಸ್ತೆ ಮಾಡಿದ್ದಕ್ಕೆ ಸ್ಥಳೀಯ ಜನರು ಸಂತುಷ್ಟರಾಗಿದ್ದಾರೆ ಎಂದರು.

ಸಂಪುಟ ಸರ್ಜರಿಯಾದಲ್ಲಿ ನೀವು ಸ್ಪೀಕರ್ ಸ್ಥಾನ ತೊರೆದು ಸಚಿವರಾಗುತ್ತೀರಾ ಎಂಬ ಪ್ರಶ್ನೆಗೆ, ಸ್ಪೀಕರ್ ಆದನಂತರ ನನ್ನ ಪೊಲಿಟಿಕಲ್ ಚಾನೆಲ್ ಬಂದ್ ಆಗಿದೆ, ಬಾಲ್ ಬಂತು ಅಂದ್ರೆ ಬ್ಯಾಟ್ ಹಿಡಿಯಲೇಬೇಕಲ್ವಾ ಎಂದು ಹೇಳುವ ಮೂಲಕ ತಾವೂ ಸಚಿವ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ತೆರೆದಿಟ್ಟರು.

Karnataka Assembly Speaker UT Khader clarified allegations of excessive spending during the MLA quarters renovation and the book fair. He confirmed that a ₹25,000 silk shawl was officially purchased to honour writers, adding that all procurement was transparent and recorded.