ಕೋವಿಡ್ ಸಂಕಷ್ಟದ ಕಾಲದಲ್ಲಿ ಮುಂಗಾರಿನ ಅಪಾಯದ ಕುರಿತಾಗಿಯೂ ಎಚ್ಚರವಿರಲಿ

01-08-20 07:51 pm       ಗಣೇಶ್ ಜಾಲ್ಸೂರು, ಸಹ ಶಿಕ್ಷಕರು, ಶ್ರೀ ಭುವನೇಂದ್ರ ಪ್ರೌಢಶಾಲೆ, ಕಾರ್ಕಳ   ನ್ಯೂಸ್ View

ಧಾರಾಕಾರವಾಗಿ ಮಳೆ ಸುರಿಯುವ ಈ ಸಂದರ್ಭದಲ್ಲಿ ಹಿರಿಯರೆಲ್ಲರೂ ತಮ್ಮ ಮಕ್ಕಳ ಜಾಗರೂಕತೆಯ ಬಗ್ಗೆ ನಿಗಾ ವಹಿಸುವುದು ಉತ್ತಮ. ಹವಾಮಾನ ಇಲಾಖೆಯು ಆಗಾಗ ಹವಾಮಾನ ವರದಿಯ ಮೂಲಕ ಮುನ್ಸೂಚನೆಯನ್ನು ನೀಡುತ್ತಿದೆ.

ಒಂದೆಡೆ ಕೋವಿಡ್ 19 ಸೋಂಕಿನ ಕಂಟಕ ಇನ್ನೊಂದೆಡೆ ಅತಿವೃಷ್ಟಿ ಉಂಟಾದರೆ, ಅದು ತಂದೊಡ್ಡುವ ಸವಾಲುಗಳಿಂದ ನಾವೆಲ್ಲರೂ ಪಾರಾಗುವ ಬಗ್ಗೆ ಎಚ್ಚರವಿರಬೇಕು. ಮಲೇರಿಯಾ, ಡೆಂಗ್ಯೂಜ್ವರ ಬರದಂತೆ ಮನೆಯ ಸುತ್ತಮುತ್ತಲೂ ಶುಚಿಯಾಗಿರಿಸಿಕೊಳ್ಳಬೇಕು – ಎಂಬ ಕಿವಿಮಾತನ್ನು ಮಕ್ಕಳ ಸಹಿತ ಎಲ್ಲರಿಗೂ ನೀಡಿದ್ದಾರೆ ವೃತ್ತಿಯಲ್ಲಿ ಶಿಕ್ಷಕರಾಗಿರುವ ಗಣೇಶ್ ಜಾಲ್ಸೂರು ಅವರು.

ಈ ಬಾರಿಯಂತೂ ಬೇಸಿಗೆ ರಜೆ ಬರೀ ಹೆಸರಿಗೆ ಮಾತ್ರ ಸೀಮಿತವಾಯಿತು.

ಶಾಲಾ ಮಕ್ಕಳ ಈ ಶೈಕ್ಷಣಿಕ ವರ್ಷದ ಕೊನೆಯು ನೀರಸವಾಗಿಯೇ ಕೊನೆಗೊಂಡಿತು.

ಕಾರಣ ಬಂದೆರಗಿದ ಕೋವಿಡ್ 19 ಬಗೆಗಿನ ವಿದ್ಯಮಾನದ ಸಂಗತಿಗಳು.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರದ ಸೂಚನೆಯಂತೆ ಶಿಕ್ಷಣ ಇಲಾಖೆಯು ಮಕ್ಕಳ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲೇಬೇಕಾಯಿತು.

ಶಾಲೆಗೆ ರಜೆನೀಡುವಂತೆ ಆದೇಶವನ್ನು ಹೊರಡಿಸಿತು. ಖಂಡಿತವಾಗಿಯೂ ಎಲ್ಲರೂ ಕೂಡಾ ಈ ನಿರ್ಣಯಕ್ಕೆ ಸಹಮತವನ್ನು ವ್ಯಕ್ತಪಡಿಸಿದರು. ಸರಕಾರ ಸೂಕ್ತ ಸಮಯದ ನಿರ್ಧಾರದಿಂದ ಕೋವಿಡ್ 19 ಸೋಂಕು ಬಿಗಡಾಯಿಸುವ ಮೊದಲೇ ಮಕ್ಕಳೆಲ್ಲರೂ ಸುರಕ್ಷಿತವಾಗಿ ಮನೆ ಸೇರುವಂತಾಯಿತು.

ಆದರೆ ಶಾಲೆಯಲ್ಲಿಯೇ ನಿತ್ಯ ಪಾಠ ಕಲಿತು ಪರೀಕ್ಷೆಯನ್ನು ಬರೆದು ಫಲಿತಾಂಶದಲ್ಲಿ ತೇರ್ಗಡೆ ಹೊಂದಿ ಫಲಿತಾಂಶ ಸುದ್ದಿಯನ್ನು ಮನೆಗೆ ಹೊತ್ತೊಯ್ದು ಖುಷಿ ಪಡುತ್ತಿದ್ದ ಕ್ಷಣವೆಲ್ಲವೂ ಸ್ಥಬ್ದವಾಯಿತು. ಫಲಿತಾಂಶದ ಪ್ರಕಟಣೆಯೂ ಒಂದರಿಂದ ಒಂಭತ್ತನೇ ತರಗತಿಯ ವಿದ್ಯಾಾರ್ಥಿಗಳು ನೇರವಾಗಿ ಮುಂದಿನ ತರಗತಿಗೆ ಅರ್ಹತೆ ಪಡೆದುಕೊಂಡರು. ಅಲ್ಲಿಗೆ ಪರೀಕ್ಷೆ ಫಲಿತಾಂಶದ ಗೊಂದಲಗಳಿಗೆ ತೆರೆ ಎಳೆಯಲಾಯಿತು.

ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕುರಿತಂತೆ ಮರು ವೇಳಾಪಟ್ಟಿ ಅಧಿಕೃತವಾಗಿ ಪ್ರಕಟಗೊಂಡು ಇದೀಗ ಪರೀಕ್ಷೆಯೂ ಸುಸೂತ್ರವಾಗಿ ನಡೆದಿದೆ. ಬಾಕಿ ಉಳಿದಿದ್ದ ಪಿಯು ಇಂಗ್ಲಿಷ್ ಪತ್ರಿಕೆಯ ಪರೀಕ್ಷೆಯೂ ನಡೆದೂ ಫಲಿತಾಂಶವೂ ಹೊರಬಿದ್ದಿದೆ.

ಆದರೆ ದಿನೇ ದಿನೇ ಕೋವಿಡ್ 19 ಸಮಸ್ಯೆ ಬಿಗಡಾಯಿಸುತ್ತಲೇ ಇರುವುದರಿಂದ ಮಕ್ಕಳ ಆರೋಗ್ಯ ಕಾಳಜಿಯ ಬಗ್ಗೆ ಸರಕಾರ ಎಲ್ಲಾಾ ವ್ಯವಸ್ಥೆಗಳನ್ನು ಸಿದ್ಧಗೊಳಿಸುತ್ತಿದೆ. ಆದರೆ ಈಗಾಗಲೇ ಹೇಳಿದಂತೆ ಒಂದರಿಂದ ಒಂಭತ್ತನೇ ತರಗತಿಯ ಮಕ್ಕಳು ಕೋವಿಡ್ 19 ಅತಂಕದಿಂದ ದೂರವಾಗಿ ಸುರಕ್ಷಿತವಾಗಿ ಮನೆಯಲ್ಲಿ ಉಳಿದರು. ಅಂತೆಯೇ ಶಿಕ್ಷಕರು ಪಾಲಕರು ಪೋಷಕರು ಶಾಲಾ ಆಡಳಿತ ಸಮಿತಿ ವಿದ್ಯಾಭಿಮಾನಿಗಳು ಎಲ್ಲರೂ ನಿರಾಳವಾದರು.

ಮತ್ತೊಮ್ಮೆ ನೆನಪಿಸುವುದಾದರೆ ವಿದ್ಯಾಾರ್ಥಿ ಜೀವನದಲ್ಲಿ ಬರುವ ಬೇಸಿಗೆ ರಜೆಯ ಮಜದ ಖುಷಿಯೇ ಅದ್ಬುತ. ಶಾಲೆಗೆ ಈ ದಿನ ರಜಾ ಎನ್ನುವಂತೆ ಏಪ್ರಿಲ್ 10 ರಿಂದ ಪ್ರಾರಂಭಗೊಳ್ಳುವ ಬೇಸಿಗೆ ರಜೆಯು ಮೇ 29 ಕ್ಕೆ ಮುಕ್ತಾಯಗೊಂಡು ಮತ್ತೆ 30ಕ್ಕೆ ಹೊಸ ಹುರುಪಿನಿಂದ ಹೊಸ ಉಡುಪಿನಲಿ ಮಕ್ಕಳು ಶಾಲೆಗೆ ಹೆಜ್ಜೆ ಹಾಕುತ್ತಿದ್ದರು.

ಆದರೆ ಇದೀಗ ನೂತನ ಶಾಲಾ ಶೈಕ್ಷಣಿಕ ವರ್ಷದ ತಿಂಗಳು ಪ್ರಾಾರಂಭವಾಗುವ ಸಮಯವಾದರೂ ಬಂದರೂ ಶಾಲಾ ಪುನರಾರಂಭದ ದಿನಾಂಕ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಕಾರಣ ಕೋವಿಡ್ 19 ಸಂಕಟ ಇನ್ನು ಆರಿಲ್ಲ. ಆದರೆ ಸೂಚನೆಯನ್ನೂ ಮುಂದಿನ ದಿನಾಂಕವನ್ನು ಶಿಕ್ಷಣ ಇಲಾಖೆ ಮುಂದೆ ಸೂಚಿಸಬಹುದು.

ಶಾಲೆಯೆಂದರೆ ಅದೊಂದು ಮಕ್ಕಳ ಲೋಕ. ದೊಡ್ಡವರಂತೆ ಮುಂದೆ ಬರುವ ಸಂಕಷ್ಟಗಳ ಅರಿವು ಇರುವುದಿಲ್ಲ. ಹಾಡು, ಕುಣಿತ, ನೆಗೆತ, ಸಂಭ್ರಮ, ಪಾಠ, ಆಟ, ಊಟವೆಂಬಂತೆ ಓಡುತ್ತಲೇ ಲವಲವಿಕೆಯಿಂದ ಇರುವವರು. ಹಾಗಾಗಿ ಶಾಲಾ ಬದುಕು ಅಮೂಲ್ಯವಾದುದು ಎಂಬುದನ್ನು ನಾವೆಲ್ಲರೂ ಅರಿತವರೇ. ಈ ಸಂದಿಗ್ಧ ಸಮಯದಲ್ಲಿ ಸಮಸ್ಯೆಗಳ ಮಧ್ಯೆ ಆತುರ ಪಡದೇ ಸೂಕ್ತ ಸಮಯ ಸಂದರ್ಭವನ್ನು ನೋಡಿಕೊಂಡು ಶಾಲಾ ಪುನರಾರಂಭದ ಯೋಚಿಸಿ ಮುಂದಣ ಹೆಜ್ಜೆ ಇಡಬೇಕಾಗಿದೆ.

ಆದರೆ ಬೇಸಿಗೆ ರಜೆ ಎಂದಾಗ ಅಜ್ಜನ ಮನೆ, ಅಜ್ಜಿಯ ಮನೆ, ಸಂಬಂಧಿಕರ ಮನೆ, ತನ್ನ ಮನೆ, ಗೆಳೆಯರ ಮನೆ, ಕೌಟುಂಬಿಕ ಪ್ರವಾಸ, ಪುಣ್ಯ ಕ್ಷೇತ್ರಗಳ ದರ್ಶನ, ಶುಭ ಸಮಾರಂಭಗಳಿಗೆ ಹೋಗುವುದು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಜಿಲ್ಲೆ, ಅಂತರ್ ರಾಜ್ಯ, ವಿದೇಶ ಪ್ರವಾಸ ಹೋಗುವುದು ಹೀಗೆಯೇ ತಮ್ಮ ವಾಹನಗಳಲ್ಲೋ ಬಾಡಿಗೆ ವಾಹನಗಳಲ್ಲೋ, ರೈಲುಗಳಲ್ಲೋ, ವಿಮಾನಗಳಲ್ಲೋ ಮನೆಯವರೊಂದಿಗೆ ಹೋಗಿ ಖಷಿ ಪಡುವ ಒಂದಲ್ಲ ಒಂದು ಸಂತಸದಾಯಕ ಕ್ಷಣ ಅದಾಗಿತ್ತು.

ಅದರಲ್ಲೂ ತಮ್ಮ ಊರಿನಲ್ಲಿಯೋ, ಶಾಲೆಯಲ್ಲಿಯೋ ನಡೆಯುವ ಬೇಸಿಗೆ ಶಿಬಿರವು ಚೆನ್ನಾಾಗಿ ನಡೆಯುತ್ತಾಾ ಅದರಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೋವಿಡ್ 19 ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರವೇ ಮುಖ್ಯವೆನಿಸಿ ಮಕ್ಕಳು ಮನೆಯವರೆಲ್ಲರೆಂಬಂತೆ ಮನೆಯೊಳಗೆಯೇ ಇರಬೇಕಾಯಿತು. ಮನೆಯ ಹೊಸ್ತಿಲ ದಾಟಿ ಬರದಂತೆಯೂ ಕೇಂದ್ರ ಸರಕಾರವು ಜನರ ರಕ್ಷಣೆಗಾಗಿ ಲಾಕ್‌ ಡೌನ್ ಲಕ್ಷ್ಮಣರೇಖೆಯನ್ನು ಎಳೆಯಿತು. ಹೀಗಾಗಿ ಮಕ್ಕಳು ತಮ್ಮ ಗೆಳೆಯರ ಜೊತೆಯಾಗಲೀ ಮನೆಯವರ ಜೊತೆ ಸುತ್ತಾಾಡುವ ಎಲ್ಲಾ ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು.

ಆದರೆ ಮನೆಯೊಳಗಿದ್ದು ಸೃಜನಶೀಲತೆಯಲ್ಲಿ ಕೆಲವರಂತೂ ಸಮಯವನ್ನು ತುಂಬಾ ಖುಷಿಯಾಗಿಯೇ ಕಳೆಯುತ್ತಿದ್ದಾಾರೆ. ಮನೆಯವರ ಮಾರ್ಗದರ್ಶನ ಶಾಲಾ ಶಿಕ್ಷಕರ ಸೂಚನೆಯಂತೆ ಸಾಹಿತ್ಯವನ್ನು ಬಳಸಿಕೊಂಡು ಒಳ್ಳೆಯ ರೀತಿಯಲ್ಲಿ ಸಮಯದ ಸದುಪಯೋಗವನ್ನು ಮಾಡುತ್ತಿದ್ದಾರೆ.

ರಾಜ್ಯ ಸರಕಾರವೂ ಮಕ್ಕಳವಾಣಿಯಂತಹ ವಿಶೇಷ ಕಾರ್ಯಕ್ರಮವನ್ನು ಚಂದನ ವಾಹಿನಿಯ ಮೂಲಕ ವಿದ್ಯಾಾರ್ಥಿಗಳ ಪ್ರತಿಭಾ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಹತ್ತನೆಯ ತರಗತಿ ವಿದ್ಯಾಾರ್ಥಿಗಳಿಗೆ ವಿಶೇಷವಾಗಿ ಪುನರ್ಮನನ ಎನ್ನುವ ಪಠ್ಯ ವಿಷಯಗಳ ತರಬೇತಿಯೂ ನಡೆಯಿತು.

ವಿದ್ಯಾರ್ಥಿಗಳು ಮನೆಯವರು ಈ ಕಾರ್ಯಕ್ರಮವನ್ನು ಆನಂದಿಸುತ್ತಿದ್ದಾರೆ ನಾಡಿನ ಪುಟ್ಟ ಪ್ರತಿಭೆಗಳು ಎಲ್ಲರಿಂದಲೂ ಸೈ ಎನಿಸಿಕೊಳ್ಳುತ್ತಿದ್ದಾರೆ. ಅಂತೂ ಇಂತೂ ಈ ಬಾರಿಯ ಬೇಸಿಗೆ ಮುಗಿದು ಹೋಯಿತು ಆದರೆ ಶಾಲೆಯು ಸದ್ಯದ ಪರಿಸ್ಥಿತಿಯಲ್ಲಿ ಆರಂಭವಾಗದು. ಸೆಪ್ಟಂಬರ್ – ಅಕ್ಟೋಬರ್ ತಿಂಗಳಿಗೆ ಆರಂಭವಾಗಬಹುದೇನೋ.

ಈಗಾಗಲೇ ಮುಂಗಾರು ಪ್ರಾರಂಭಗೊಂಡಿದೆ. ಜೂನ್‌ನಿಂದ ಸೆಪ್ಟಂಬರ್ ಅಂತ್ಯದವರೆಗೆ ಮಳೆಯ ಆರ್ಭಟ ಜೋರಾಗಿಯೇ ಇರುತ್ತದೆ. ವಾತಾವರಣದಲ್ಲಿ ದಟ್ಟವಾದ ಮೋಡ ಆವರಿಸಿ ಮಳೆಯೂ ಜೋರಾಗಿ ಆರ್ಭಟಿಸತೊಡಗಿದೆ.

ಕಳೆದ ವರ್ಷದ ಮಳೆಯ ದಿನಗಳನ್ನು ನೆನಪಿಸಿಕೊಂಡರೆ ಮೈ ಒದ್ದೆಯಾಗುವಂತೆ ರೋಮಾಂಚನವಾಗುತ್ತಿದೆ. ಅಂದು ಸುರಿದ ಕುಂಭದ್ರೋಣ ಮಳೆಗೆ ನಾಡಿನೆಲ್ಲೆಡೆ ಆದ ಅನಾಹುತ ಅಷ್ಟಿಷ್ಟಲ್ಲ. ಪ್ರಕೃತಿ ವಿಕೋಪಗಳು ಮತ್ತೆ ಕಣ್ಣಮುಂದೆ ಹಾದುಹೋಗುತ್ತಿದೆ. ಕರ್ನಾಟಕದ ಕಾಶ್ಮೀರವೆಂದೇ ಕರೆಸಿಕೊಳ್ಳುವ ಕೊಡಗಿನ ಸ್ಥಿತಿಯನ್ನು ಹೇಳುವುದಾದರೆ ಸಂಪೂರ್ಣ ಮಳೆಯಿಂದ ತತ್ತರಿಸಿದ ವಿಚಾರ ನಮಗೆಲ್ಲಾಾ ತಿಳಿದದ್ದೇ.

ಆದರೆ ಅದರಿಂದ ಪಾರಾಗಿ ಹೊರಬರುತ್ತಿರಲು ಮತ್ತೇ ಆಘಾತವಾದುದು ಈ ಕೋವಿಡ್ 19 ಮಹಾಮಾರಿ. ಇಡೀ ಜಗತ್ತೇ ಇದಕ್ಕೆ ಹೊರತಾಗಿಲ್ಲ. ಇನ್ನೂ ಕೋವಿಡ್ 19 ಸೋಂಕು ಸುರಿವ ಮಳೆಯ ಆವಾಂತರಗಳು ಎಲ್ಲವೂ ಜೊತೆ ಜೊತೆಯಾಗಿ ನಮಗೆಲ್ಲಾ ಕಾಟ ಕೊಡಬಹುದು. ಆದರೆ ಇವೆಲ್ಲವುಗಳಿಂದ ಬಚಾವಾಗಿ ಇದುವರೆಗೆ ಸವಾಲನ್ನು ಗೆದ್ದು ಬಂದಂತೆ ಬರುವ ಸವಾಲುಗಳ ಪ್ರವಾಹ ವಿರುದ್ಧ ನಾವೇ ಈಜಬೇಕು ಈಜಿ ಜಯಿಸಬೇಕು.

ಮಳೆಗಾಲದ ಈ ದಿನಗಳಲ್ಲಿ ಮಕ್ಕಳು ಸೇರಿದಂತೆ ನಾವೆಲ್ಲರೂ ಹೆಚ್ಚು ಜಾಗರೂಕತೆಯನ್ನು ವಹಿಸುವುದು ಅತೀ ಮುಖ್ಯ. ಹತ್ತಿರದ ತೋಡು, ಹೊಳೆ, ಸೇತುವೆ, ಬಾವಿ ಆಳವಾದ ಹೊಂಡಗಳು, ವಿದ್ಯುತ್ ಕಂಬಗಳನ್ನು, ತಂತಿಗಳನ್ನು ಮುಟ್ಟುವುದು ಅತೀ ವೇಗದಲ್ಲಿ ವಾಹನ ಚಲಾಯಿಸುವುದು, ಹಳ್ಳಕ್ಕೆ ಬಟ್ಟೆ ತೊಳೆಯಲು ಹೋಗುವುದು, ಗಾಳಿ ಬೀಸುವ ಸಂದರ್ಭದಲ್ಲಿ ತೋಟಕ್ಕೆ ಹೋಗುವುದು, ನೀರಿನ ಪ್ರವಾಹ ಹೆಚ್ಚುತ್ತಿರುವಾಗ ನದಿಯಲ್ಲಿ ಈಜಾಡುವುದು, ದೊಡ್ಡ ದೊಡ್ಡ ಮರಗಳ ಕೆಳಗೆ ನಿಲ್ಲುವುದು, ಗೊತ್ತಿಲ್ಲದೇ ಮನೆಯ ವಿದ್ಯುತ್ ಪೂರೈಕೆಯ ಬಗ್ಗೆ ರಿಪೇರಿ ಮಾಡುವುದು, ಮೀನು ಹಿಡಿಯಲು ಹೋಗುವುದು, ಇವೆಲ್ಲಾ ಅಪಾಯವನ್ನುಂಟು ಮಾಡುವುದು.

ಆದರೆ ಈ ಬಾರಿಯ ಕೋವಿಡ್ 19 ವಿಚಾರದಲ್ಲಿ ಕಂಗಾಲಾಗಿರುವ ಜನರು ಇನ್ನೂ ಸಹಜ ಸ್ಥಿತಿಗೆ ಪೂರ್ಣವಾಗಿ ಬಂದಿಲ್ಲ. ಅದಾಗಲೇ ಕೋವಿಡ್ 19 ವೈರಸ್ ಬಂದು ಜನಜೀವನವನ್ನು ಅಸ್ತವ್ಯಸ್ತಗೊಳಿಸಿ ಬಿಟ್ಟಿತು. ಅದರಲ್ಲೂ ಕಳೆದ ಕೆಲವು ದಿನಗಳಿಂದ ಸೋಂಕಿತರ ಸಂಖ್ಯೆಯೂ ಹೆಚ್ಚಾಾಗುತ್ತಿರುವ ಬಗ್ಗೆಯೂ ಕೇಳುತ್ತಿದ್ದೇವೆ ಆದರೆ ಎಲ್ಲವೂ ನಿಯಂತ್ರಣದಲ್ಲಿದೆ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ.

ಹಾಗಾಗಿ, ಧಾರಾಕಾರವಾಗಿ ಮಳೆ ಸುರಿಯುವ ಈ ಸಂದರ್ಭದಲ್ಲಿ ಹಿರಿಯರೆಲ್ಲರೂ ತಮ್ಮ ಮಕ್ಕಳ ಜಾಗರೂಕತೆಯ ಬಗ್ಗೆ ನಿಗಾ ವಹಿಸುವುದು ಉತ್ತಮ. ಸುರಿಯುವ ಅತಿಯಾದ ಮಳೆ, ಬೀಸುವ ಚಂಡಮಾರುತ, ಆರ್ಭಟಿಸುವ ಗುಡುಗುಗಳು, ಹೊಡೆಯುವ ಮಿಂಚುಗಳು ಹಾಗೆಯೇ ವಿದ್ಯುತ್ ಕೈಕೊಡುವ ಸಂದರ್ಭಗಳಲ್ಲಿ ಅನಾವಶ್ಯಕ ಹೊರಬರದಂತೆ ಎಚ್ಚರ ವಹಿಸುವುದು ಮುಖ್ಯವಾಗಿದೆ.

ಈ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡದಂತೆ, ಬ್ಯಾಟರಿ ಚಾರ್ಜ್ ಮಾಡದಂತೆ, ಕಿವಿಗೆ ಫೋನ್ ಇಟ್ಟು ಹಾಡು ಕೇಳದಂತೆ ತಿಳಿ ಹೇಳುವುದು ಉತ್ತಮ. ಈಗಾಗಲೇ ಅಲ್ಲೊಂದು ಇಲ್ಲೊಂದು ಘಟನೆಗಳು ನಡೆದು ಪ್ರಾಾಣವನ್ನೇ ಕಳೆದುಕೊಂಡ ಸಂಗತಿಗಳನ್ನು ಪತ್ರಿಕೆ, ರೇಡಿಯೋ, ಟಿವಿ ಗಳಲ್ಲಿ ಕೇಳುತ್ತಲೇ ಇದ್ದೇವೆ ಓದುತ್ತಲೇ ಇದ್ದೇವೆ ಹಾಗಾಗಿ ಇಂತಹ ದುರ್ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯದಂತೆ ಬಹಳಷ್ಟು ಎಚ್ಚರ ವಹಿಸೋಣ.

ಒಂದೆಡೆ ಕೋವಿಡ್ 19 ಸೋಂಕಿನ ಕಂಟಕ ಇನ್ನೊಂದೆಡೆ ಅತಿವೃಷ್ಟಿಯಾದರೆ ತಂದೊಡ್ಡುವ ಸವಾಲುಗಳಿಂದ ನಾವೆಲ್ಲರೂ ಪಾರಾಗುವ ಬಗ್ಗೆ ಎಚ್ಚರವಿರಬೇಕು. ಮಲೇರಿಯಾ, ಡೆಂಗ್ಯೂಜ್ವರ ಬರದಂತೆ ಮನೆಯ ಸುತ್ತಮುತ್ತಲೂ ಶುಚಿಯಾಗಿರಿಸಿಕೊಳ್ಳಬೇಕು.

ಹವಾಮಾನ ಇಲಾಖೆಯು ಆಗಾಗ ಹವಾಮಾನ ವರದಿಯ ಮೂಲಕ ಮುನ್ಸೂಚನೆಯನ್ನು ನೀಡುತ್ತಿದೆ. ಒಟ್ಟಿನಲ್ಲಿ ಮಳೆಗಾಲದ ಸಂದರ್ಭದಲ್ಲಿ ಅಪಾಯಗಳನ್ನು ಕಾಣದೇ ಕಾದ ನೆಲಕ್ಕೆ ಮಳೆ ಬರುವಂತಾಗಲಿ. ನಾಡು ನಿತ್ಯ ಹರಿದ್ವರ್ಣವಾಗಿ ಕಂಗೊಳಿಸಲಿ. ಸ್ವಚ್ಛತೆಯ ಬಗೆಗೆ ನಮ್ಮ ಕಾಳಜಿ ಎಂದೂ ನಿರ್ಲಕ್ಷ್ಯವಾಗದಿರಲಿ. ಚಾತಕ ಪಕ್ಷಿಯಂತೆ ಶಾಲೆಯ ಸುಂದರ ಕನಸುಗಳನ್ನು ಕಾಣುತ್ತಾ ಕಾದಿರುವ ಮಕ್ಕಳಿಗೆ ಎಲ್ಲಾ ಅವಕಾಶಗಳು ಸುಗಮವಾಗಿ ಕೂಡಿ ಬರಲಿ. ವಿದ್ಯಾ ಅಧಿದೇವತೆ ಶ್ರೀ ಶಾರದೆ ಎಲ್ಲರನ್ನೂ ಅನುಗ್ರಹಿಸಲಿ.