ಕನ್ನಡ ಚಿತ್ರಗಳು 2 ವಾರ ಪ್ರದರ್ಶನ ಕಾಣುವುದೇ ಕಷ್ಟ ಆದರೆ ಈ ಚಿತ್ರ 50 ದಿನ ಓಡಿದೆ ಎಂದ ರಿಷಬ್ ಶೆಟ್ಟಿ

28-06-23 02:49 pm       Source: Filmy Beat   ಸಿನಿಮಾ

ರಿಷಬ್ ಶೆಟ್ಟಿ.. ರಿಕ್ಕಿ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಈ ಪ್ರತಿಭೆ ಸದ್ಯ ಇಡೀ ಭಾರತವೇ ತನ್ನ ಮುಂದಿನ ಚಿತ್ರಕ್ಕಾಗಿ ಕಾಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.

ರಿಷಬ್ ಶೆಟ್ಟಿ.. ರಿಕ್ಕಿ ಚಿತ್ರದ ಮೂಲಕ ನಿರ್ದೇಶಕನಾಗಿ ಬಡ್ತಿ ಪಡೆದ ಈ ಪ್ರತಿಭೆ ಸದ್ಯ ಇಡೀ ಭಾರತವೇ ತನ್ನ ಮುಂದಿನ ಚಿತ್ರಕ್ಕಾಗಿ ಕಾಯುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಹೌದು, ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರಗಳ ಮೂಲಕ ದಿಗ್ವಿಜಯ ಸಾಧಿಸಿದ್ದ ರಿಷಬ್ ಶೆಟ್ಟಿ ಕಳೆದ ವರ್ಷ ಕಾಂತಾರ ಎಂಬ ಮಾಸ್ಟರ್‌ಪೀಸ್ ನಿರ್ದೇಶಿಸುವ ಮೂಲಕ ಇಡೀ ದೇಶದ ಮೆಚ್ಚುಗೆಗೆ ಪಾತ್ರವಾದರು.

ಕಾಂತಾರ ಚಿತ್ರ ರಿಷಬ್ ಶೆಟ್ಟಿಗೆ ಅಷ್ಟರಮಟ್ಟಿಗೆ ಸಕ್ಸಸ್ ಹಾಗೂ ಫೇಮ್ ಅನ್ನು ತಂದುಕೊಟ್ಟಿದೆ. ಇದು ರಿಷಬ್ ಶೆಟ್ಟಿ ಪ್ರತಿಭೆಗೆ ಸಿಕ್ಕ ಸರಿಯಾದ ಮನ್ನಣೆ ಎಂದೇ ಹೇಳಬಹುದಾಗಿದೆ. ಮೊದಲಿಗೆ ಕನ್ನಡ ಚಿತ್ರವಾಗಿ ಸಣ್ಣ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಕಾಂತಾರ ಬಳಿಕ ಕನ್ನಡದಲ್ಲಿ ದೊಡ್ಡ ಮಟ್ಟದ ಪ್ರಶಂಸೆಗಳನ್ನು ಪಡೆದುಕೊಂಡು ಪರಭಾಷೆಯ ಸಿನಿ ರಸಿಕರನ್ನೂ ಸಹ ಆಕರ್ಷಿಸಿತ್ತು.

ಬಳಿಕ ಪ್ರೇಕ್ಷಕರ ಒತ್ತಾಯದ ಮೇರೆಗೆ ಕಾಂತಾರ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಿಗೂ ಸಹ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾವಾಯಿತು. ಹೀಗೆ ಕಾಂತಾರ ಹಂತ ಹಂತವಾಗಿ ದೊಡ್ಡ ಯಶಸ್ಸು ಸಾಧಿಸಿದ್ದನ್ನು ರಿಷಬ್ ಶೆಟ್ಟಿ ಇತ್ತೀಚೆಗಷ್ಟೇ ವಾಷಿಂಗ್ಟನ್‌ನಲ್ಲಿ ಸಹ್ಯಾದ್ರಿ ಕನ್ನಡ ಸಂಘದವರು ನಡೆಸಿದ ಕಾರ್ಯಕ್ರಮದಲ್ಲಿಯೂ ಸಹ ನೆನೆದಿದ್ದಾರೆ.

rishab-shetty-about-kantara-50-days-at-washington

ಹೌದು, ಈ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ ಅವರನ್ನು ಆಹ್ವಾನಿಸಿದ್ದ ಸಹ್ಯಾದ್ರಿ ಕನ್ನಡ ಸಂಘದ ಸದಸ್ಯರು "ವಿಶ್ವ ಶ್ರೇಷ್ಟ ಕನ್ನಡಿಗ 2023" ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಈ ಪ್ರಶಸ್ತಿಯನ್ನು ಪತ್ನಿ ಪ್ರಗತಿ ಶೆಟ್ಟಿ ಜತೆ ವೇದಿಕೆ ಏರಿ ಸ್ವೀಕರಿಸಿದ ರಿಷಬ್ ಶೆಟ್ಟಿ ಬಳಿಕ ಕಾಂತಾರ ಯಶೋಗಾಥೆಯನ್ನು ಹಂಚಿಕೊಂಡರು.

ಮೊದಲಿಗೆ ಪ್ರಶಸ್ತಿ ಪಡೆದದ್ದರ ಬಗ್ಗೆ ಖುಷಿಯನ್ನು ಹಂಚಿಕೊಂಡ ರಿಷಬ್ ಶೆಟ್ಟಿ ಇದಕ್ಕೆಲ್ಲಾ ಕಾರಣ ಕನ್ನಡಿಗರು ಎಂದು ಹೇಳಿಕೆ ನೀಡಿದರು. ಹೀಗೆ ಪ್ರಶಸ್ತಿ ಸಿಕ್ಕ ಬಳಿಕ ಕಾಂತಾರ ಚಿತ್ರದ ಕುರಿತು ಮಾತನಾಡಿದ ರಿಷಬ್ ಶೆಟ್ಟಿ "ಚಿತ್ರ ಬಿಡುಗಡೆಯಾದಾಗಿನಿಂದ ಹೇಳ್ತಾನೆ ಬಂದಿದ್ದೀನಿ. ಬಹುಶಃ ಇದು ಭಾರತದ ಮೊದಲ ಸೆಲ್ಫ್‌ಮೇಡ್ ಪ್ಯಾನ್ ಇಂಡಿಯನ್ ಸಿನಿಮಾ ಅನಿಸುತ್ತೆ. ಈ ಸಿನಿಮಾ ಮಾಡಬೇಕಾದ್ರೆ ಈ ಚಿತ್ರವನ್ನು ಪ್ಯಾನ್ ಇಂಡಿಯಾ ಮಾಡಿ ಅಂತ ಹೇಳಿದ್ದೇ ಪ್ರಗತಿ. ನಾನು ಅವಾಗ ಇಲ್ಲ ಈ ಸಿನಿಮಾವನ್ನು ಕನ್ನಡ ಸಿನಿಮಾವನ್ನಾಗಿ ಬಿಡುಗಡೆ ಮಾಡೋಣ, ಕನ್ನಡ ಸಿನಿಮಾವಾಗಿಯೇ ಈ ಚಿತ್ರ ಆಚೆ ಹೋಗಬೇಕು ಅಂತ ಹೇಳಿದ್ದೆ" ಎಂದು ಹೇಳಿಕೊಂಡರು.

Rishab Shetty's Kantara Screening Stopped at Mangalore Theatre for This  Shocking Reason - News18

ಇನ್ನೂ ಮುಂದುವರೆದು ಮಾತನಾಡಿದ ರಿಷಬ್ ಶೆಟ್ಟಿ "ಕನ್ನಡ ಚಿತ್ರರಂಗ ನಮ್ಮ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿತ್ತು. ನಾವು ಏನು ಮಾಡುತ್ತಿದ್ದೆವು ಅಂದ್ರೆ ಪರಭಾಷಾ ಸಿನಿಮಾಗಳನ್ನು ನೋಡಿದಾಗ ದೊಡ್ಡ ಸಿನಿಮಾ ಅಂದ್ರೆ ಇದು, ಅವರು ತಮ್ಮ ಆಚಾರ ವಿಚಾರಗಳನ್ನು ತೋರಿಸುವುದನ್ನು ನೋಡಿ ಸಿನಿಮಾ ಅಂದರೆ ಹೀಗಿರಬೇಕು ಎಂದುಕೊಳ್ತಿದ್ವಿ. ಹಾಗಾಗಿ ನನಗೆ ನಂಬಿಕೆ ದೊಡ್ಡಮಟ್ಟದಲ್ಲಿತ್ತು. ನಮ್ಮ ಮಣ್ಣಿನ ಕಥೆ ಹೇಳುವಂತ, ನಮ್ಮ ಆಚಾರ ವಿಚಾರ ಹೇಳುವಂತಹ ಚಿತ್ರ, ನಮ್ಮ ಸಂಸ್ಕೃತಿ ಹೇಳುವಂತ ಚಿತ್ರ ಕನ್ನಡದಲ್ಲಿಯೇ ರಿಲೀಸ್ ಆಗಬೇಕು ಅಂತ ಅಂದುಕೊಂಡಿದ್ದೆ. ಹಾಗೆಯೇ ನನ್ನ ಆಸೆ ಈಡೇರಿತು. ಚಿತ್ರ ಕನ್ನಡದಲ್ಲಿ ಬಿಡುಗಡೆಯಾಯಿತು. ಬಳಿಕ ಹತ್ತು ದಿನಗಳು ಕಳೆದ ನಂತರ ನೀವೇ ಪ್ರಮೋಷನ್ ಮಾಡಿ ಕಾಂತಾರವನ್ನು ಬೇರೆ ಭಾಷೆಗೆ ಡಬ್ ಅಗಿ ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ಮಾಡಿಸಿಬಿಟ್ರಿ" ಎಂದರು.

ಅಲ್ಲದೇ "ವಾಷಿಂಗ್ಟನ್‌ನಲ್ಲಿನ ಚಿತ್ರಮಂದಿರದಲ್ಲಿ 50 ದಿನಗಳನ್ನು ಪೂರೈಸಿದ ಕಾಂತಾರ ಚಿತ್ರ ಇಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತ ಚಿತ್ರ ಎಂಬ ದಾಖಲೆಯನ್ನು ಮಾಡಿದ್ದು ಖುಷಿ ಕೊಟ್ಟಿತು. ಈ ಚಿತ್ರವನ್ನು ಬೇರೆ ಭಾಷೆಯ ಜನಗಳೂ ಸಹ ನೋಡುವಂತೆ ಮಾಡಿ, ಇಲ್ಲಿ ಚಿತ್ರ 50 ದಿನಗಳನ್ನು ಪೂರೈಸುವಲ್ಲಿ ಕನ್ನಡಿಗರ ಪಾತ್ರ ದೊಡ್ಡದು. ಇನ್ನೊಂದು ವಿಚಾರ ಏನಂದ್ರೆ ಕರ್ನಾಟಕದಲ್ಲಿಯೇ ಕನ್ನಡ ಚಿತ್ರ 2 - 3 ವಾರ ಓಡೋದು ದೊಡ್ಡ ವಿಚಾರ ಆಗಿಬಿಟ್ಟಿದೆ. ಅಂಥದ್ದರಲ್ಲಿ ದೇಶ ಬಿಟ್ಟು ಜೀವನ ಕಟ್ಟಿಕೊಳ್ಳಲು ಇನ್ನೊಂದು ದೇಶದಲ್ಲಿರುವ ನೀವು ಇನ್ನೂ ಸಹ ಕನ್ನಡ ಭಾಷೆಯ ಮೇಲಿನ, ಕನ್ನಡ ಚಿತ್ರಗಳ ಮೇಲಿನ ಪ್ರೀತಿಯಿಂದ ಇಲ್ಲಿ 50 ದಿನ ಓಡುವಂತೆ ಮಾಡಿದ್ದೀರ" ಎಂದು ಹೊಗಳಿದರು.

Kannada films struggling to complete 2 weeks in Karnataka says Rishab Shetty.