ಗರ್ಭಧಾರಣೆಗೆ ಮುನ್ನ ಕೊರೊನಾ ಲಸಿಕೆ ಪಡೆದರೆ ಒಳ್ಳೆಯದು, ಏಕೆ?

08-05-21 12:52 pm       Reena TK, BoldSky Kannada   ಡಾಕ್ಟರ್ಸ್ ನೋಟ್

ಮಗು ಬೇಕೆಂದು ಬಯಸುವವರು ಕೋವಿಡ್ 19 ಲಸಿಕೆ ಪಡೆಯುವುದರಿಂದ ಅವರ ಫಲವತ್ತತೆ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ.

ಮಗುವಿಗಾಗಿ ಅಪೇಕ್ಷಿಸುತ್ತಿರುವ ಮಹಿಳೆಯರಲ್ಲಿ ಹೆಚ್ಚಿನವರಿಗೆ ತಾನು ಕೊರೊನಾ ಲಸಿಕೆ ತೆಗೆದುಕೊಳ್ಳಬಹುದೇ, ಇಲ್ಲವೇ ಎಂಬ ಸಂಶಯ ಮೂಡಿದೆ. ಇವರ ಈ ಸಂಶಯಕ್ಕೆ ಪುಷ್ಠಿ ನೀಡಿರುವುದು ಆಧಾರ ರಹಿತ ಸೋಷಿಯಲ್‌ ಪೋಸ್ಟ್‌ಗಳಾಗಿರುತ್ತವೆ.

ಕೊರೊನಾ ಲಸಿಕೆ ಪಡೆದರೆ ಅದು ಫಲವತ್ತತೆಯ ಮೇಲೆ ಅಡ್ಡ ಪರಿಣಾಮವಾಗುವುದು, ಅನಿಯಮಿತ ಮುಟ್ಟಿನ ಸಮಸ್ಯೆ ಉಂಟಾಗುವುದು ಎಂಬೆಲ್ಲಾ ಪೋಸ್ಟ್‌ ನೋಡಿದಾಗ ಪುಟ್ಟ ಮಗು ಮನೆ ತುಂಬಬೇಕೆಂದು ಬಯಸುವವರು ಈ ಲಸಿಕೆ ತೆಗೆದುಕೊಳ್ಳುವುದೇಕೆ ಹಿಂದೇಟು ಹಾಕುತ್ತಾರೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ. ಇವೆಲ್ಲಾ ರೂಮರ್‌ಗಳಾಗಿವೆ ಹೊರತು ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶಗಳಲ್ಲ.



ಕೊರೊನಾ ವ್ಯಾಕ್ಸಿನ್ ಬಂಜೆತನಕ್ಕೆ ಕಾರಣವಾಗಲ್ಲ

ಮಗು ಬೇಕೆಂದು ಬಯಸುವವರು ಕೋವಿಡ್ 19 ಲಸಿಕೆ ಪಡೆಯುವುದರಿಂದ ಅವರ ಫಲವತ್ತತೆ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟು ಮಾಡುವುದಿಲ್ಲ. ಕೋವಿಡ್‌ 19 ವ್ಯಾಕ್ಸಿನ್ ಗರ್ಭಪಾತಕ್ಕೆ ಕಾರಣವಾಗುವುದಿಲ್ಲ. ಈ ವ್ಯಾಕ್ಸಿನ್‌ ಅನ್ನು ಕೊರೊನಾ ವೈರಸ್‌ ಅನ್ನು ದುರ್ಬಲಗೊಳಿಸುವಂತೆ ಸಿದ್ಧಪಡಿಸಲಾಗಿದೆ. ಈ ವ್ಯಾಕ್ಸಿನ್‌ ತೆಗೆದುಕೊಳ್ಳುವುದರಿಂದ ಗರ್ಭಾಕೋಶದ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರಲ್ಲ.



ಗರ್ಭಧಾರಣೆಗೆ ಮುಂಚಿತವಾಗಿಯೇ ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದು ಏಕೆ?

ಗರ್ಭಾವಸ್ಥೆಯ ಸಮಯದಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ, ಅಲ್ಲದೆ ಅಂಥ ಸಂದರ್ಭದಲ್ಲಿ ಕೊರೊನಾ ವೈರಸ್‌ನಂಥ ಸೋಂಕು ತಗುಲಿದರೆ ರೋಗ ಲಕ್ಷಣಗಳು ಉಲ್ಭಣವಾಗುವ ಸಾಧ್ಯತೆ ಹೆಚ್ಚು. ಗರ್ಭಾವಸ್ಥೆಯಲ್ಲಿ ಇಂಥ ತೊಂದರೆ ತಪ್ಪಿಸಲು ಗರ್ಭಧಾರಣೆಯ ಮೊದಲು ಲಸಿಕೆ ಪಡೆಯುವುದು ಒಳ್ಳೆಯದು.

ಗರ್ಭಿಣಿಯರು ಲಸಿಕೆ ಪಡೆಯಬಹುದೇ?

ಭಾರತದಲ್ಲಿ ಗರ್ಭೀಣಿಯರಿಗೆ ಕೊರೊನಾ ಲಸಿಕೆ ನೀಡುತ್ತಿಲ್ಲ. ಆದರೆ ಗರ್ಭೀಣಿಯರು ಕೂಡ ಲಸಿಕೆ ಪಡೆಯಬಹುದೆಂದು ಕೆಲವೊಂದು ಸಂಶೋಧನೆಗಳು ಹೇಳುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆ ಈ ಹಿಂದೆ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದೀಗ ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡಲು ಅನುಮತಿ ಸೂಚಿಸಿದೆ.



ಕೋವಿಡ್‌ 19 ವ್ಯಾಕ್ಸಿನ್ ಪಡೆದ 8 ವಾರಗಳ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸುವುದು ಒಳ್ಳೆಯದು

ಗರ್ಭಾವಸ್ಥೆಯ ಸಮಯದಲ್ಲಿ ಕೋವಿಡ್‌ 19 ಬಂದರೆ ಗರ್ಭಪಾತವಾಗುವ ಸಾಧ್ಯತೆ ಹೆಚ್ಚು, ಅಲ್ಲದೆ ಕೆಲವರಿಗೆ ಐಸಿಯು ಬೇಕಾಗುವುದು, ರೋಗ ಲಕ್ಷಣಗಳು ತುಂಬಾ ಅಧಿಕವಾಗಿ ಸಾವನ್ನಪ್ಪುವ ಸಾಧ್ಯತೆ ಕೂಡ ಇರುವುದರಿಂದ ಇಂಥ ಪರಿಸ್ಥಿತಿ ತಪ್ಪಿಸಲು ಗರ್ಭಧಾರಣೆಯ ಮೊದಲೇ ಲಸಿಕೆ ಪಡೆಯುವುದು ಸುರಕ್ಷಿತ. ಅಲ್ಲದೆ ಕೋವಿಡ್‌ 19 ವ್ಯಾಕ್ಸಿನ್ ಅನ್ನು ಎರಡು ಡೋಸ್‌ಗಳಲ್ಲಿ ತೆಗೆದು ಕೊಳ್ಳಬೇಕು, ಈ ವ್ಯಾಕ್ಸಿನ್ ಪಡೆದ ಬಳಿಕ ನಮ್ಮ ದೇಹದಲ್ಲಿ ಕೊರೊನಾ ವಿರುದ್ದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕೆಲ ವಾರಬೇಕು. ಆದ್ದರಿಂದ ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಮೊದಲು ಲಸಿಕೆ ಪಡೆದು ನಂತರ 8 ವಾರಗಳ ಬಳಿಕ ಗರ್ಭಧಾರಣೆಯಾದರೆ ಮಗು ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

(Kannada Copy of Boldsky Kannada)