ಮಂಗಳೂರು ವಿವಿ ; ಪ್ರೊಫೆಸರ್ ಗಳ ಎಡವಟ್ಟು, ಒಣ ಪ್ರತಿಷ್ಠೆ - ವಿದ್ಯಾರ್ಥಿಗಳಿಗೆ ಬರೆ ! 

27-09-20 12:24 pm       Mangaluru Correspondent   ಕರಾವಳಿ

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ವಿಭಾಗದ ಕನ್ನಡ ಪರೀಕ್ಷೆ ಸೆ.25ರಂದು ಎಲ್ಲ ಕಡೆಯೂ ನಡೆದಿತ್ತು. ಆದರೆ ವಿವಿ ಕ್ಯಾಂಪಸ್‌ನಲ್ಲಿ ಮಾತ್ರ ಕನ್ನಡ ಪರೀಕ್ಷೆ ನಡೆದೇ ಇಲ್ವಂತೆ !

ಮಂಗಳೂರು, ಸೆಪ್ಟಂಬರ್ 27: ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ನಾತಕೋತ್ತರ ವಿಭಾಗದ ಕನ್ನಡ ಪರೀಕ್ಷೆ ಸೆ.25ರಂದು ಎಲ್ಲ ಕಡೆಯೂ ನಡೆದಿತ್ತು. ಆದರೆ ವಿವಿ ಕ್ಯಾಂಪಸ್‌ನಲ್ಲಿ ಮಾತ್ರ ಕನ್ನಡ ಪರೀಕ್ಷೆ ನಡೆದೇ ಇಲ್ವಂತೆ ! ಕ್ಯಾಂಪಸ್‌ನ ಕನ್ನಡ ವಿಭಾಗದ ಪ್ರೊಫೆಸರ್ ಮಾಡಿದ ಎಡವಟ್ಟಿನಿಂದಾಗಿ ಪ್ರೊ.ಎಸ್.ವಿ.ಪಿ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಕನ್ನಡ ಪರೀಕ್ಷೆಯಿಂದ ವಂಚಿತರಾಗಿದ್ದಾರೆ. 

ಸೆ.21 ರಂದು ಮಳೆಯ ಕಾರಣ ಮುಂದೂಡಿಕೆ ಆಗಿದ್ದ ಪರೀಕ್ಷೆಯನ್ನು 25 ರಂದು ನಡೆಸಲು ರಿಜಿಸ್ಟ್ರಾರ್ ಸೂಚನೆ ನೀಡಿದ್ದರು. ಚಿಕ್ಕ ಆಳುವಾರ ಸ್ನಾತಕೋತ್ತರ ಅಧ್ಯಯನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ಪರೀಕ್ಷೆ ನಡೆಸಲು ಸೂಚಿಸಲಾಗಿತ್ತು. 

ಆದರೆ ಪ್ರೊ.ಎಸ್.ವಿ.ಪಿ. ಅಧ್ಯಯನ ಕೇಂದ್ರದವರು ಮಾತ್ರ, ನಮಗೆ ವಿಶ್ವವಿದ್ಯಾಲಯ ಮಾಹಿತಿ ಕೊಟ್ಟಿಲ್ಲ ಎಂದು ನೆಪವೊಡ್ಡಿ ಪರೀಕ್ಷೆಯನ್ನೇ ನಡೆಸಿಲ್ಲ. ಅಲ್ಲದೆ, ತಮ್ಮ ವಿದ್ಯಾರ್ಥಿಗಳಿಗೆ ಕನ್ನಡ ವಿಭಾಗದ ಪ್ರೊಫೆಸರ್, ಸೆ.25ರ ಬದಲು 26ರಂದು ಪರೀಕ್ಷೆ ಎಂದು ಹೇಳಿ ಗೊಂದಲ ಸೃಷ್ಟಿಸಿದ್ದರು. 

ಮಾಹಿತಿ ಇರಲಿಲ್ಲ ಎಂದಿದ್ದಕ್ಕೆ ಕುಲಸಚಿವ ಪಿ.ಎಲ್. ಧರ್ಮ ಪ್ರತಿಕ್ರಿಯಿಸಿದ್ದು  ಇ-ಮೇಲ್‌ನಲ್ಲಿ 208 ಕಾಲೇಜಿಗೂ ಸುತ್ತೋಲೆ ಕಳುಹಿಸಿದ್ದೇವೆ, ಪ್ರಶ್ನೆಪತ್ರಿಕೆ ಮುದ್ರಿಸಿ ಕೊಟ್ಟಿದ್ದೇವೆ. ಕ್ಯಾಂಪಸ್‌ನಲ್ಲಿ ಯಾಕೆ ಪರೀಕ್ಷೆ ನಡೆಸಿಲ್ಲ ಎನ್ನುವುದಕ್ಕೆ ಕಾರಣ ಕೇಳಿ ನೋಟೀಸ್ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ. 

ಪ್ರೊಫೆಸರ್ ಮಾಡಿದ ಎಡವಟ್ಟನ್ನು ಅರಿತ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು, ಪರೀಕ್ಷಾಂಗ ಕುಲಸಚಿವರೂ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

29ರಂದು ಮರು ಪರೀಕ್ಷೆಗೆ ನಿರ್ಧಾರ ! 

ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಕ್ಷ ಮತ್ತು ಐದೂ ಬೋರ್ಡ್ ಆಫ್ ಸ್ಟಡೀಸ್ ಮುಖ್ಯಸ್ಥರೂ ಆಗಿದ್ದು ಬಾಕಿಯಾದ ಪರೀಕ್ಷೆಯನ್ನು ಸೆ.29ರಂದು ನಡೆಸಲು ಸೂಚಿಸಿದ್ದಾರೆ. ಪ್ರೊ.ಎಸ್.ವಿ.ಪಿ.ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಗಷ್ಟೇ ಕನ್ನಡ ಮರುಪರೀಕ್ಷೆ ನಡೆಸಬಹುದು ಎಂದವರು ತಿಳಿಸಿದ್ದಾರೆ. ಅದರನ್ವಯ ಮತ್ತೊಮ್ಮೆ ಪರೀಕ್ಷೆ ನಡೆಸಲು  ಬೇರೆಯೇ ಪ್ರಶ್ನೆ ಪತ್ರಿಕೆ ರೆಡಿ ಮಾಡಬೇಕಾಗಿದೆ. ಈ ಮೂಲಕ ಮಂಗಳೂರು ವಿವಿಯಲ್ಲಿ ಎಲ್ಲವೂ ಸರಿಯಿಲ್ಲ. ಕೆಲವರ ಪ್ರತಿಷ್ಠೆ , ಅಹಂಕಾರಕ್ಕೆ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎನ್ನುವ ಮಾತು ಸತ್ಯವಾಗಿದೆ.

Join our WhatsApp group for latest news updates (2)