ಮೇಲಂತಸ್ತಿನಲ್ಲಿ ಪೈಂಟ್ ಬಳಿಯುತ್ತಿದ್ದ ಯುವಕ ಕಟ್ಟಡದಿಂದ ಎಸೆಯಲ್ಪಟ್ಟು ದಾರುಣ ಸಾವು ! ವಿದ್ಯುತ್ ತಂತಿ ಸ್ಪರ್ಶಿಸಿರುವ ಶಂಕೆ 

31-05-22 06:46 pm       Mangalore Correspondent   ಕರಾವಳಿ

ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲಂತಸ್ತಿನ ಗೋಡೆಗೆ ಪೈಂಟ್ ಬಳಿಯುತ್ತಿದ್ದ ಕಾರ್ಮಿಕನೋರ್ವ ವಿದ್ಯುತ್ ಶಾಕ್ ಆಗಿ ಕೆಳಗೆ ಎಸೆಯಲ್ಪಟ್ಟು ದಾರುಣ ಸಾವನ್ನಪ್ಪಿದ್ದ ಘಟನೆ ಕೊಲ್ಯದಲ್ಲಿ ನಡೆದಿದೆ. 

ಉಳ್ಳಾಲ, ಮೇ 31 : ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲಂತಸ್ತಿನ ಗೋಡೆಗೆ ಪೈಂಟ್ ಬಳಿಯುತ್ತಿದ್ದ ಕಾರ್ಮಿಕನೋರ್ವ ವಿದ್ಯುತ್ ಶಾಕ್ ಆಗಿ ಕೆಳಗೆ ಎಸೆಯಲ್ಪಟ್ಟು ದಾರುಣ ಸಾವನ್ನಪ್ಪಿದ್ದ ಘಟನೆ ಕೊಲ್ಯದಲ್ಲಿ ನಡೆದಿದೆ. 

ಕೊಲ್ಯದ ಮಳಯಾಳ ಚಾಮುಂಡಿ ದೈವಸ್ಥಾನದ ಬಳಿಯ ಅಡ್ಕಬೈಲ್ ಎಂಬಲ್ಲಿ ಘಟನೆ ನಡೆದಿದ್ದು ಮನೆಯ ಬದಿಯಲ್ಲೇ ಹಾದು ಹೋದ ಹೈಟೆನ್ಷನ್ ತಂತಿ ಸ್ಪರ್ಶಿಸಿ ಯುವಕ ಎಸೆಯಲ್ಪಟ್ಟಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. 

ಮಂಜನಾಡಿ ಗ್ರಾಮದ ಕಟ್ಟೆಮಾರ್ ನಿವಾಸಿ ಝುಲ್ಪಿಕಾರ್ ಆಲಿ(29) ಸಾವನ್ನಪ್ಪಿದ ದುರ್ದೈವಿ. ಕೊಲ್ಯದ ಬಾಳೆ ಹಣ್ಣಿನ ವ್ಯಾಪಾರಿ ಗಣೇಶ್ ಎಂಬವರು ಅಡ್ಕಬೈಲ್ ಎಂಬಲ್ಲಿ ಮನೆ ನಿರ್ಮಿಸುತ್ತಿದ್ದು ನಿರ್ಮಾಣ ಹಂತದ ಕಟ್ಟಡಕ್ಕೆ ಪೈಂಟ್ ಬಳಿಯುತ್ತಿದ್ದಾಗ ಘಟನೆ ನಡೆದಿದೆ. ಎಂದಿನಂತೆ ಕಟ್ಟಡದಲ್ಲಿ ಮಾರ್ಬಲ್ ಮತ್ತು ಪೈಂಟಿಂಗ್ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹೊರಗಡೆ ಮನೆಯ ಮೇಲಂತಸ್ತಿನ ಗೋಡೆಗೆ ರೋಲರ್ ನಿಂದ ಪೈಂಟ್ ಹೊಡೆಯುತ್ತಿದ್ದ ಝುಲ್ಫಿಕಾರ್ ಹಠಾತ್ತನೆ ಕೆಳಗೆ ಎಸೆಯಲ್ಪಟ್ಟಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆ ದಾರಿ ಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. 

ಝುಲ್ಪಿಕಾರ್ ಪೈಂಟ್ ಬಳಿಯುತ್ತಿದ್ದ ಕಟ್ಟಡದ ಹತ್ತಿರದಿಂದಲೇ ಹೈಟೆನ್ಷನ್ ತಂತಿ ಹಾದು ಹೋಗಿದ್ದು ತಂತಿ ಸ್ಪರ್ಶದಿಂದಲೇ ಘಟನೆ ನಡೆದಿದೆಯೆಂದು ಶಂಕಿಸಲಾಗಿದೆ. ಅಲ್ಲದೆ ಮನೆಯ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ ಫಾರಂ ಕೂಡ ಇದೆ. ಕಟ್ಟಡದಿಂದ ಕೆಳಗೆ ಎಸೆಯಲ್ಪಟ್ಟ ಝುಲ್ಪಿಕಾರ್ ಅವರು ಕಲ್ಲಿನ ಆವರಣ ಗೋಡೆ ಮೇಲೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾರೆ. 


ಗಣೇಶ್ ಅವರು ನಿಯಮಗಳನ್ನ ಗಾಳಿಗೆ ತೂರಿ ಮನೆಯನ್ನು ನಿರ್ಮಿಸಿರುವ ಆರೋಪ ಕೇಳಿಬಂದಿದೆ. ಆವರಣದಲ್ಲಿ ಸೆಟ್ ಬ್ಯಾಕ್ ಬಿಡದೆ ಮನೆ ಕಟ್ಟಡ ನಿರ್ಮಿಸಿದ್ದೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. 

ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು ಪರೀಕ್ಷೆ ವರದಿ ಆಧರಿಸಿ ಪ್ರಕರಣ ದಾಖಲಾಗುವ ಸಾಧ್ಯತೆಯಿದೆ. ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Mangalore Painter electrocuted at Kolya in Ullal while painting. The deceased has been identified as Zalfikar (29).