ತಡೆ ತೆರವಾದ್ರೂ ತೆರೆಯದ ಸೆಂಟ್ರಲ್ ಮಾರುಕಟ್ಟೆ ; ಗೇಟ್ ಬಂದ್, ಹೊರಗಡೆ ಓಪನ್ !

28-09-20 12:29 pm       Mangalore Correspondent   ಕರಾವಳಿ

ದ.ಕ. ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಹೊರಭಾಗದಲ್ಲಿ ವ್ಯಾಪಾರ ಶುರುವಾಗಿದೆ. ಆದರೆ, ಮಾರುಕಟ್ಟೆ ಒಳಪ್ರವೇಶಕ್ಕೆ ಪಾಲಿಕೆ ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ.

ಮಂಗಳೂರು, ಸೆಪ್ಟಂಬರ್ 28: ದ.ಕ. ಜಿಲ್ಲಾಧಿಕಾರಿ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಮಂಗಳೂರಿನ ಸೆಂಟ್ರಲ್ ಮಾರುಕಟ್ಟೆಯ ಹೊರಭಾಗದಲ್ಲಿ ವ್ಯಾಪಾರ ಶುರುವಾಗಿದೆ. ಆದರೆ, ಮಾರುಕಟ್ಟೆ ಒಳಪ್ರವೇಶಕ್ಕೆ ಪಾಲಿಕೆ ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ. ಹೀಗಾಗಿ ಹೊರಗಿನ ವಹಿವಾಟು ಮಾತ್ರ ಆರಂಭಗೊಂಡಿದೆ.

ಪರವಾನಗಿ ಪರಿಶೀಲಿಸಿ, ಮಹಾನಗರ ಪಾಲಿಕೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿದ್ದರಿಂದ ಸೆಂಟ್ರಲ್ ಮಾರುಕಟ್ಟೆ ಕಟ್ಟಡದ ಹೊರ ಆವರಣದಲ್ಲಿ ಪಾತ್ರೆ, ತರಕಾರಿ, ಹಣ್ಣು, ಪ್ಲಾಸ್ಟಿಕ್ ಸಾಮಗ್ರಿ ಮೊದಲಾದ 25ಕ್ಕೂ ಅಧಿಕ ಅಂಗಡಿಗಳು ತೆರೆದಿವೆ. ಮಾರುಕಟ್ಟೆ ಪ್ರವೇಶದ ಗೇಟ್‌ಗಳಿಗೆ ಅಳವಡಿಸಿದ್ದ ಬೀಗ ತೆಗೆಯದ ಕಾರಣ ಒಳಭಾಗದ ವಹಿವಾಟು ಇನ್ನೂ ಆರಂಭಗೊಂಡಿಲ್ಲ. 

ಹೊರಭಾಗದ ಅಂಗಡಿಗಳಲ್ಲಿ ನೀರು ಹಾಗೂ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು ವ್ಯಾಪಾರಸ್ಥರು ತಮ್ಮ ಅಗತ್ಯಕ್ಕಾಗಿ ಜನರೇಟರ್ ಬಳಸಿ ವ್ಯಾಪಾರ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಬಂದ್ ಆಗಿದ್ದ ಕಾರಣ ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ಹಾಳಾಗಿವೆ. ಮಳೆಗಾಲ ಆಗಿರುವುದರಿಂದ ವಸ್ತುಗಳಿಗೆ ಫಂಗಸ್ ಬಂದಿದೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ. 

ಲೈಸನ್ಸ್ ಇದ್ದವರಿಗೆ ಮಾತ್ರ ಅವಕಾಶ 

ಸೆಂಟ್ರಲ್ ಮಾರುಕಟ್ಟೆಯಲ್ಲಿ 264 ಅಂಗಡಿಗಳಿದ್ದು ಪರವಾನಗಿ ಹೊಂದಿದವರೇ ವ್ಯಾಪಾರ ನಡೆಸುತ್ತಿಲ್ಲ. ಅದನ್ನು ಇನ್ಯಾರಿಗೋ ನಡೆಸಲು ಕೊಟ್ಟಿರುವುದು ಗಮನಕ್ಕೆ ಬಂದಿದೆ. ಮೂಲ ಪರವಾನಗಿ ಹೊಂದಿರುವವರಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ನೀಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ ಪಾಂಡೇಶ್ವರ ಹೇಳಿರುವುದು ವ್ಯಾಪಾರಿಗಳಿಗೆ ಸಂಕಷ್ಟಕ್ಕೀಡು ಮಾಡಿದೆ.

Join our WhatsApp group for latest news updates (2)