ಖಾಸಗಿ ಸಾರಿಗೆಗೆ ಕೊರೊನಾ ಹೊಡೆತ, ಲಾಕ್ ತೆರೆದ್ರೂ ಚೇತರಿಸಿಲ್ಲ ಉದ್ಯಮ !

28-09-20 03:24 pm       Mangalore Correspondent   ಕರಾವಳಿ

ಲಾಕ್ಡೌನ್ ನಿಂದಾಗಿ ಕರಾವಳಿಯಲ್ಲಿ ಖಾಸಗಿ ಸಾರಿಗೆ ಉದ್ಯಮವೇ ನೆಲಕಚ್ಚಿದೆ. ಲಾಕ್ಡೌನ್ ಓಪನ್ ಆದ್ರೂ ಉದ್ಯಮಿಗಳು ಸಂಕಷ್ಟದಿಂದ ಚೇತರಿಸಿಕೊಂಡಿಲ್ಲ.

ಮಂಗಳೂರು, ಸೆಪ್ಟಂಬರ್ 28: ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಮಟ್ಟಿಗೆ ಖಾಸಗಿ ಸಾರಿಗೆಯೇ ಜೀವಾಳ. ಆದರೆ, ಲಾಕ್ಡೌನ್ ನಿಂದಾಗಿ ಕರಾವಳಿಯಲ್ಲಿ ಖಾಸಗಿ ಸಾರಿಗೆ ಉದ್ಯಮವೇ ನೆಲಕಚ್ಚಿದೆ. ಆರು ತಿಂಗಳ ಕಾಲ ಬಸ್ ಗಳನ್ನು ರಸ್ತೆಗೆ ಇಳಿಸದೆ ಕಾರ್ಮಿಕರಿಗೆ ಸಂಬಳ ಕೊಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದರು. ಈಗ ಲಾಕ್ಡೌನ್ ಓಪನ್ ಆದ್ರೂ ಉದ್ಯಮಿಗಳು ಸಂಕಷ್ಟದಿಂದ ಚೇತರಿಸಿಕೊಂಡಿಲ್ಲ.

ಲಾಕ್ಡೌನ್ ಆದ್ರೂ ಸರ್ಕಾರ ಸಾರಿಗೆ ಬಸ್ ಗಳ ತೆರಿಗೆ ವಿನಾಯಿತಿ ಮಾಡಿಲ್ಲ. ಅಲ್ಲದೆ, ಇದೇ ವೇಳೆ, ಡೀಸೆಲ್ ಬೆಲೆ ಈಗ ಐದು ತಿಂಗಳಲ್ಲಿ ಲೀಟರ್‌ಗೆ 12 ರೂ.ನಷ್ಟು ಏರಿಕೆಯಾಗಿದೆ. ಲಾಕ್‌ಡೌನ್ ಬಳಿಕ ಎರಡೂ ಜಿಲ್ಲೆಗಳಲ್ಲಿ ಎಲ್ಲ ರೀತಿಯ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಜೂನ್ 1ರಿಂದ ಹಂತ ಹಂತವಾಗಿ ಬಸ್ ಗಳನ್ನು ರಸ್ತೆಗೆ ಇಳಿಸಿದರೂ ಪ್ರಯಾಣಿಕರ ಸಂಖ್ಯೆ ಕಡಿಮೆ. ಇನ್ನೊಂದೆಡೆ ಡೀಸೆಲ್ ದರ ಏರಿಕೆಯಿಂದಾಗಿ ಲೆಕ್ಕಕ್ಕೇ ಸಿಗುತ್ತಿಲ್ಲ ಎನ್ನುತ್ತಾರೆ ಬಸ್ ಮಾಲೀಕರು.

ಮಂಗಳೂರು- ಉಡುಪಿ -ಕುಂದಾಪುರ ರೂಟ್‌ನಲ್ಲಿ ಸದ್ಯಕ್ಕೆ 70 ಬಸ್‌ ಗಳು ಓಡಾಡುತ್ತಿವೆ. ಬೆಳಗ್ಗೆ ಮತ್ತು ಸಂಜೆ ಮಾತ್ರ ಪ್ರಯಾಣಿಕರು ಇರುತ್ತಾರೆ. ಇದರಿಂದ ಟ್ರಿಪ್ ನಿರ್ವಹಣೆ ಕಷ್ಟವಾಗುತ್ತಿದೆ. ಎಕ್ಸ್ ಪ್ರೆಸ್/ಸರ್ವೀಸ್ ಬಸ್‌ಗಳ ಪೈಕಿ ಶೇ.30 ಬಸ್ ಗಳು ಮಾತ್ರ ರಸ್ತೆಗಳಿದಿರುವುದು. ಹೀಗಾಗಿ ಶೇ.70ರಷ್ಟು ಬಸ್‌ಗಳು ನಿಂತಲ್ಲೇ ಇವೆ. ಮಂಗಳೂರಿನ ಒಟ್ಟು 325 ಸಿಟಿ  ಬಸ್‌ಗಳಲ್ಲಿ 275ರಷ್ಟು ರಸ್ತೆಗೆ ಇಳಿದಿದ್ದರೆ, ಉಡುಪಿಯಲ್ಲಿ 85 ಸಿಟಿ ಬಸ್‌ಗಳ ಪೈಕಿ 35 ಬಸ್‌ಗಳು ರಸ್ತೆಗಿಳಿದಿಲ್ಲ. ಇದೇ ವೇಳೆ, ಬಸ್ ಮಾಲೀಕರ ಸಂಘದವರು ರಾಜ್ಯ ಸಾರಿಗೆ ಸಚಿವರನ್ನು ಭೇಟಿಯಾಗಿ ತೆರಿಗೆ ವಿನಾಯಿತಿ ನೀಡಲು ಕೋರಿದ್ದಾರೆ. ಆಟೋ ಚಾಲಕರಿಗೆ ನೀಡಿರುವಂತೆ ಖಾಸಗಿ ಬಸ್ ಸಿಬ್ಬಂದಿಗೂ ನೆರವಾಗಲು ಮನವಿ ಮಾಡಿದ್ದಾರೆ.

Join our WhatsApp group for latest news updates (2)