ಹೊಸ ಕಾರು ಕೊಳ್ಳೋರಿಲ್ಲ , ಹಳೆಯದಕ್ಕೆ ಭಾರೀ ಡಿಮ್ಯಾಂಡ್ !

29-09-20 01:10 pm       Mangalore Correspondent   ಕರಾವಳಿ

ಕೋವಿಡ್ 19 ಲಾಕ್ಡೌನ್ ಮತ್ತು ಅನ್ಲಾಕ್ ನಂತರವೂ ಬಹುತೇಕ ಜನರು ಹೊಸ ಕಾರು ಖರೀದಿಗೆ ಮುಂದಾಗದೇ ಹಳೆ ಕಾರಿನತ್ತ ಮುಖ ಮಾಡುತ್ತಿದ್ದಾರೆ.

ಮಂಗಳೂರು, ಸೆಪ್ಟಂಬರ್ 29: ಕೋವಿಡ್ 19 ಲಾಕ್ಡೌನ್ ಮತ್ತು ಅನ್ಲಾಕ್ ನಂತರವೂ ಬಹುತೇಕ ಜನರು ಹೊಸ ಕಾರು ಖರೀದಿಗೆ ಮುಂದಾಗುತ್ತಿಲ್ಲ. ಹೀಗಾಗಿ ಹಳೆ ಕಾರುಗಳಿಗೆ ಒಮ್ಮೆಲೇ ಡಿಮ್ಯಾಂಡ್ ಹೆಚ್ಚಿದೆ. 

ಮಾರುಕಟ್ಟೆಯಲ್ಲಿ ಐದು ಲಕ್ಷದೊಳಗಿನ ಹಳೆ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಹಳೆಯ ಕಾರುಗಳ ಕೊರತೆ ಉಂಟಾಗಿದ್ದು ಅಗತ್ಯಕ್ಕೆ ತಕ್ಕಷ್ಟು ಪೂರೈಕೆ ಆಗುತ್ತಿಲ್ಲ. ಎರಡು ಲಕ್ಷದೊಳಗಿನ ಕಾರುಗಳಿಗಂತೂ ಭಾರೀ ಬೇಡಿಕೆ ಬಂದಿದೆ. 3 ರಿಂದ 5 ಲಕ್ಷದ ವರೆಗಿನ ಕಾರುಗಳಿಗೂ ಬೇಡಿಕೆ ಇದ್ದು ಬಹುತೇಕ ಜನರು ಈ ಬಗ್ಗೆ ವಿಚಾರಿಸುತ್ತಿದ್ದಾರೆ. 

ಹಳೆ ಕಾರುಗಳನ್ನು ಸಾಧಾರಣ ಬೆಂಗಳೂರಿನಿಂದಲೇ ಹೆಚ್ಚಾಗಿ ತರಿಸಿಕೊಳ್ಳುತ್ತಿದ್ದೇವೆ. ಆದರೆ ಅಲ್ಲಿಯೂ ಕಾರುಗಳನ್ನು ಮಾರುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕರಾವಳಿ ಜಿಲ್ಲೆಗಳಿಗೆ ಹಳೆಯ ಕಾರುಗಳ ಪೂರೈಕೆ ನಿಂತು ಹೋಗಿದೆ ಎಂದು ಹಳೆಯ ಕಾರುಗಳ ಏಜೆಂಟ್ ಒಬ್ಬರು ತಿಳಿಸಿದ್ದಾರೆ. ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಹಿಂಜರಿಯುತ್ತಿದ್ದಾರೆ. ಬದಲಿಗೆ ಸಣ್ಣ ಕಾರು ಇದ್ದರೆ ಆಗಬಹುದು ಎಂದು ಹುಡುಕಾಟದಲ್ಲಿ ತೊಡಗಿದ್ದಾರೆ. ಇದರಿಂದಾಗಿ ಹಳೆ ಕಾರುಗಳಿಗೆ ಬೇಡಿಕೆ ಕಂಡುಬಂದಿದೆ. ಇಎಂಐ ಪಾವತಿಸಲು ಸಾಧ್ಯವಾಗದ ಜನರು ಮಾತ್ರ ಕಾರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೊಸ ಕಾರು ಖರೀದಿಗಾಗಿ ಯಾರು ಮುಂದಾಗುತ್ತಿಲ್ಲ ಎನ್ನುವುದು ಕಾರ್ ಡೀಲರ್ ಒಬ್ಬರ ಮಾತು. 

ಕಾರುಗಳ ಜೊತೆಗೆ ಹಳೆಯ ಬೈಕ್ ಗಳಿಗೂ ಬೇಡಿಕೆ ಹೆಚ್ಚಿದೆ. ಕಳೆದ ತಿಂಗಳು ಬೈಕ್ ಡೀಲರ್ ಗಳ ಬಳಿ ನೋಂದಣಿ ಮಾಡುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದರಿಂದಾಗಿ ಸ್ಕ್ರಾಪ್  ಹೋಗಿದ್ದ ಬೈಕ್ ಗಳನ್ನೂ ಗ್ಯಾರೇಜ್ ಗಳಲ್ಲಿ ದುರಸ್ತಿ ಮಾಡಿ ಮಾರಾಟಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Join our WhatsApp group for latest news updates (2)