ಮೇಲ್ವರ್ಗ ಓಲೈಸುತ್ತೀರಿ, ಹಿಂದುಳಿದ ವರ್ಗದ ನಾರಾಯಣ ಗುರುಗಳನ್ನು ಕಡೆಗಣಿಸಿದ್ದೀರಿ, ಅವಮಾನಕ್ಕೆ ಬೆಲೆ ತೆರುತ್ತೀರಿ !  

16-06-22 08:42 pm       Mangalore Correspondent   ಕರಾವಳಿ

ಹತ್ತನೇ ತರಗತಿ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯವನ್ನು ತೆಗೆದ ವಿಚಾರದ ಬಗ್ಗೆ ರಾಜ್ಯದ ನಾಯಕರು ಗೊಂದಲದ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ.

ಮಂಗಳೂರು, ಜೂನ್ 16: ಹತ್ತನೇ ತರಗತಿ ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯವನ್ನು ತೆಗೆದ ವಿಚಾರದ ಬಗ್ಗೆ ರಾಜ್ಯದ ನಾಯಕರು ಗೊಂದಲದ ಹೇಳಿಕೆಗಳನ್ನು ನೀಡಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾರೆ. ಗುರುಗಳ ಪಠ್ಯವನ್ನು ತೆಗೆದು ಹಾಕಿಲ್ಲ, ಪಠ್ಯಪುಸ್ತಕ ಬಂದ ಮೇಲೆ ನೋಡಿಕೊಳ್ಳಿ ಎಂದು ಹೇಳಿದ್ದರು. ಈಗ ಪಠ್ಯ ಪುಸ್ತಕ ಬಂದಿದ್ದು ಸಮಾಜ ವಿಜ್ಞಾನ ಪುಸ್ತಕದಲ್ಲಿ ಗುರುಗಳ ಪಠ್ಯವೇ ಕಂಡುಬಂದಿಲ್ಲ.
ಇದು ರಾಜ್ಯದ ಈಡಿಗ, ಬಿಲ್ಲವ, ಹಿಂದುಳಿದ ವರ್ಗದವರಿಗೆ ಮಾಡಿದ ಅನ್ಯಾಯ ಎಂದು ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಸತ್ಯಜಿತ್ ಅವರು, ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಮತ ಎಂದು ಸಾರಿದವರು. ಕೇರಳದಲ್ಲಿ ಹಿಂದುಳಿದ ವರ್ಗದ ಜನ ಗತಿ ಇಲ್ಲದೆ, ಮತಾಂತರ, ತುಳಿತಕ್ಕೊಳಗಾದಾಗ ಗುರುಗಳು ಎದ್ದು ಬಂದು ಅವರನ್ನು ಹಿಂದು ಧರ್ಮದಲ್ಲಿ ಜೊತೆಗೂಡಿಸಿದವರು. ಇಂಥ ಉದಾತ್ತ ತತ್ವಗಳನ್ನು ಮಕ್ಕಳಿಗೆ ಹೇಳಿಕೊಡುವುದು ಬೇಡ ಎಂಬ ನಿರ್ಧಾರಕ್ಕೆ ರಾಜ್ಯ ಸರಕಾರ ಬಂದಿದೆಯೇ ? ಪ್ರತಿ ಬಾರಿ ಬಿಲ್ಲವ, ಈಡಿಗರನ್ನು ರಾಜ್ಯ ಸರಕಾರ ಮೂಲೆಗೆ ತಳ್ಳುವ, ಅಪಮಾನ ಮಾಡುವ ಪ್ರಯತ್ನಕ್ಕೆ ಕೈಹಾಕಿದೆ.

ಬಸವಣ್ಣ, ಕುವೆಂಪು ಪಠ್ಯಕ್ಕೆ ಕತ್ತರಿ ಹಾಕಿದ್ದು ಹೊರಬಂದಾಗಲೇ ನಾರಾಯಣ ಗುರುಗಳ ಪಠ್ಯ ತೆಗೆದಿರುವ ವಿಚಾರವೂ ಪ್ರಸ್ತಾಪ ಆಗಿತ್ತು. ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು ತಪ್ಪಾಗಿದ್ದನ್ನು ಸರಿಪಡಿಸುತ್ತೇವೆ ಎಂದಿದ್ದರು. ಆದರೆ ಈಗ ಪುಸ್ತಕ ಹೊರಬಂದಿದ್ದು ಹತ್ತನೇ ತರಗತಿ ಕನ್ನಡ ಪುಸ್ತಕದಲ್ಲಿ ನಾರಾಯಣ ಗುರುಗಳ ಪಠ್ಯ ಕೊಡಲಾಗಿದೆ. ಕನ್ನಡ ಪುಸ್ತಕ ಐಚ್ಛಿಕವಾಗಿದ್ದು, ಗುರುಗಳ ತತ್ವವನ್ನು ಎಲ್ಲರೂ ಓದುವುದರಿಂದ ವಂಚಿತರನ್ನಾಗಿ ಮಾಡಲಾಗಿದೆ. ಕನ್ನಡ ದ್ವಿತೀಯ ಭಾಷೆಯ ಪುಸ್ತಕವನ್ನು ಎಲ್ಲ ಮಕ್ಕಳಿಗೂ ಕಡ್ಡಾಯ ಇರುವುದಿಲ್ಲ. ಹಾಗಾಗಿ, ಉದ್ದೇಶಪೂರ್ವಕವಾಗಿ ನಾರಾಯಣ ಗುರುಗಳನ್ನು ಬದಿಗೆ ಸರಿಸಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಈ ಬಗ್ಗೆ ರಾಜ್ಯ ಸರಕಾರ ಸೂಕ್ತವಾಗಿ ಸ್ಪಂದಿಸಿ, ಗುರುಗಳ ಪಠ್ಯವನ್ನು ಮತ್ತೆ ಅಳವಡಿಸದಿದ್ದಲ್ಲಿ ರಾಜ್ಯಾದ್ಯಂತ ಎಲ್ಲ ಹಿಂದುಳಿದ ವರ್ಗದವರನ್ನು ಜೊತೆಗೂಡಿಸಿ ಹೋರಾಟ ನಡೆಸಲಾಗುವುದು ಎಂದು ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಇದೇ ವೇಳೆ, ಕುದ್ರೋಳಿ ದೇವಸ್ಥಾನದ ಟ್ರಸ್ಟಿ ಪದ್ಮರಾಜ್ ಮಾತನಾಡಿ, ಹಿಂದುಳಿದವರ ಪರವಾಗಿ ಹೋರಾಡಿದ್ದ ಗುರುಗಳನ್ನು ಕಡೆಗಣಿಸಿದ್ದು ಮತ್ತೆ ಮೇಲ್ವರ್ಗದ ದಬ್ಬಾಳಿಕೆಯನ್ನು ತೋರಿಸಿದಂತಾಗಿದೆ. ಬಸವಣ್ಣ, ಕುವೆಂಪು ಬಗ್ಗೆ ಸ್ಪಷ್ಟನೆ ಕೊಟ್ಟು ಪಠ್ಯವನ್ನು ಮತ್ತೆ ಸೇರಿಸಿದ್ದೀರಿ. ನಾರಾಯಣ ಗುರುಗಳ ಪಠ್ಯವನ್ನು ಕಡೆಗಣಿಸಿದ್ದೀರಿ ಎಂದರೆ, ಇದು ತಮ್ಮ ದಬ್ಬಾಳಿಕೆಯನ್ನು ತೋರಿಸುತ್ತದೆ. ಮೇಲ್ವರ್ಗವನ್ನು ಓಲೈಸಿದ್ದು ಸ್ಪಷ್ಟವಾಗುತ್ತದೆ. ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ನಾವು ಎಚ್ಚರಿಕೆ ಕೊಡುತ್ತಿದ್ದೇವೆ. ಗುರುಗಳ ಪಠ್ಯವನ್ನು ಮತ್ತೆ ಸಮಾಜ ವಿಜ್ಞಾನ ಪುಸ್ತಕದಲ್ಲಿ ಅಳವಡಿಸದಿದ್ದರೆ ಇದಕ್ಕೆ ಬೆಲೆ ತೆರಬೇಕಾದೀತು ಎಂದು ಹೇಳಿದ್ದಾರೆ.

ಬಿಲ್ಲವ ಸಮಾಜದ ವಿವಿಧ ವಲಯದ ಮುಖಂಡರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Mangalore Politicians have created confusion among people about Sree Narayana Guru slams Satyajeet surathkal. Narayana Guru, IPA, was a philosopher, spiritual leader and social reformer in India. He led a reform movement against the injustice in the caste-ridden society of Kerala in order to promote spiritual enlightenment and social equality.