ಬಿದ್ದು ಸಿಕ್ಕಿದ ಬಂಗಾರದ ಗಟ್ಟಿ ಹಿಂತಿರುಗಿಸಿ ಪ್ರಾಮಾಣಿಕತೆ 

30-09-20 11:14 pm       Mangaluru Correspondent   ಕರಾವಳಿ

ದಾರಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಬಿದ್ದು ಸಿಕ್ಕಿದ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನು ಶಾಸಕರ ಮುತುವರ್ಜಿಯಿಂದ ವಾರೀಸುದಾರರಿಗೆ ಮರಳಿಸಿದ ಘಟನೆ ನಡೆದಿದೆ. ‌

ಮಂಗಳೂರು, ಸೆಪ್ಟಂಬರ್ 30: ದಾರಿಯಲ್ಲಿ ನಡೆದು ಹೋಗುತ್ತಿದ್ದ ವೇಳೆ ಬಿದ್ದು ಸಿಕ್ಕಿದ ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನು ಶಾಸಕರ ಮುತುವರ್ಜಿಯಿಂದ ವಾರೀಸುದಾರರಿಗೆ ಮರಳಿಸಿದ ಘಟನೆ ನಡೆದಿದೆ. ‌

ಮಂಗಳೂರು ಹೊರವಲಯದ ಸಹ್ಯಾದ್ರಿ ಕಾಲೇಜಿನ ಬಳಿ ಪ್ರಭಾಕರ ಪ್ರಭು ಎಂಬವರಿಗೆ ಪರ್ಸ್ ಸಿಕ್ಕಿತ್ತು. ಅದರಲ್ಲಿ ಅಂದಾಜು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ ಇದ್ದುದನ್ನು ಗಮನಿಸಿದ ಪ್ರಭಾಕರ ಪ್ರಭು, ತಮ್ಮ ಸಂಬಂಧಿಯಾಗಿರುವ ಶಾಸಕ ವೇದವ್ಯಾಸ ಕಾಮತ್ ಗಮನಕ್ಕೆ ತಂದಿದ್ದರು. ವೇದವ್ಯಾಸ ಕಾಮತ್ ಅವರು, ಮಹಾಲಕ್ಷ್ಮಿ ಜ್ಯುವೆಲ್ಲರ್ಸ್ ಮಾಲೀಕರಾಗಿರುವ ರವೀಂದ್ರ ನಿಕ್ಕಂ ಬಳಿ ಈ ಬಗ್ಗೆ ಪ್ರಸ್ತಾಪಿಸಿದ್ದರು. ರವೀಂದ್ರ ನಿಕ್ಕಂ ತಮ್ಮ ಆಪ್ತರ ವಲಯದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದಾಗ, ಅದು ಅಡ್ಯಾರ್ ಬಳಿಯ ನಿವಾಸಿ ಕೃಷ್ಣ ಆಚಾರ್ ಅವರಿಗೆ ಸೇರಿದ್ದು ಎಂದು ಗೊತ್ತಾಯಿತು. ಈ ಕುರಿತು ಕೃಷ್ಣ ಆಚಾರ್ ಅವರ ಬಳಿ ವಿಚಾರಿಸಿದಾಗ ಹಿಂದಿನ ದಿನ ಪರ್ಸ್ ಕಳೆದುಹೋಗಿದ್ದನ್ನು ಅವರು ರವೀಂದ್ರ ನಿಕ್ಕಂ ಅವರಿಗೆ ತಿಳಿಸಿದರು.

ಮಂಗಳೂರಿನ ಜೋಡುಮಠ ರಸ್ತೆಯಲ್ಲಿರುವ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಬುಧವಾರ ಟ್ರಸ್ಟ್ ಪ್ರಮುಖರಾದ ಹನುಮಂತ ಕಾಮತ್ ಅವರು ಪ್ರಭಾಕರ್ ಪ್ರಭು ಹಾಗೂ ರವೀಂದ್ರ ನಿಕ್ಕಂ ಅವರ ಉಪಸ್ಥಿತಿಯಲ್ಲಿ ಕೃಷ್ಣ ಆಚಾರ್ ಅವರಿಗೆ ಬಂಗಾರವನ್ನು ಹಸ್ತಾಂತರಿಸಿದರು. ಕೃಷ್ಣ ಆಚಾರ್ ಸಾಂಪ್ರದಾಯಿಕ ಚಿನ್ನದ ಕೆಲಸಗಾರರಾಗಿದ್ದು, ಬಂಗಾರದ ಆಭರಣ ಮಾಡಲು ಚಿನ್ನದ ಗಟ್ಟಿಯನ್ನು ಖರೀದಿಸಿ ದಾರಿಯಲ್ಲಿ ಬರುತ್ತಿದ್ದಾಗ ಕಳೆದುಕೊಂಡಿದ್ದರು. ಇದೇ ವೇಳೆ, ಪ್ರಾಮಾಣಿಕವಾಗಿ ಬಂಗಾರವನ್ನು ಸಂಬಂಧಪಟ್ಟವರಿಗೆ ಮರಳಿಸಲು ಪ್ರಯತ್ನ ಪಟ್ಟ ಪ್ರಭಾಕರ್ ಪ್ರಭು ಅವರನ್ನು ಹನುಮಂತ ಕಾಮತ್ ಅಭಿನಂದಿಸಿದರು.