ನಾಯಿಗಳಿಗೆ ಮಿದುಳು ಜ್ವರ ಹಾವಳಿ, ಬೀದಿನಾಯಿಗಳ ಸಾಮೂಹಿಕ ಸಾವಿನಿಂದ ಭೀತಿ

01-10-20 03:20 pm       Mangalore Correspondent   ಕರಾವಳಿ

ಕರೊನಾ ವೈರಸ್‌ಗೆ ಇಡೀ ಮಾನವ ಸಂಕುಲವೇ ನಡುಗುತ್ತಿದ್ದರೆ, ಇತ್ತ ಹಳ್ಳಿ ಪ್ರದೇಶಗಳಲ್ಲಿ ನಾಯಿಗಳಿಗೆ ಮಿದುಳು ಜ್ವರ ಕಾಣಿಸಿಕೊಂಡಿದ್ದು ಸಾಮೂಹಿಕವಾಗಿ ಬಲಿಯಾಗುತ್ತಿವೆ.

ಮಂಗಳೂರು, ಅಕ್ಟೋಬರ್ 1: ಕರೊನಾ ವೈರಸ್‌ಗೆ ಇಡೀ ಮಾನವ ಸಂಕುಲವೇ ನಡುಗುತ್ತಿದ್ದರೆ, ಇತ್ತ ಹಳ್ಳಿ ಪ್ರದೇಶಗಳಲ್ಲಿ ನಾಯಿಗಳಿಗೆ ಮಿದುಳು ಜ್ವರ ಕಾಣಿಸಿಕೊಂಡಿದ್ದು ಸಾಮೂಹಿಕವಾಗಿ ಬಲಿಯಾಗುತ್ತಿವೆ.

ಬೀದಿ ನಾಯಿಗಳಲ್ಲಿ ಹೆಚ್ಚಾಗಿ ಈ ವೈರಸ್ ಕಾಣಿಸಿಕೊಂಡು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ರೋಗಕ್ಕೆ ನಾಯಿಗಳು ಬಲಿಯಾಗುತ್ತಿವೆ. ಪರಿಣಾಮ ಸಾಕು ನಾಯಿಗಳಿಗೂ ಈ ರೋಗ ಆವರಿಸುವ ಸಾಧ್ಯತೆ ಕಂಡುಬಂದಿದ್ದು ಜನರಲ್ಲಿ ಭೀತಿ ಕಾಡಲಾರಂಭಿಸಿದೆ. ಇದೊಂದು ವೈರಸ್ ದಾಳಿಯಾಗಿದ್ದು ಮೂರು ತಿಂಗಳ ಮೊದಲೇ ನಾಯಿಗಳು ರೋಗಕ್ಕೆ ತುತ್ತಾದರೂ ಆರಂಭದಲ್ಲಿ ಯಾವುದೇ ಲಕ್ಷಣ ಗೋಚರಿಸುವುದಿಲ್ಲ. ಕೊನೆಯ ಹತ್ತರಿಂದ ಹದಿನೈದು ದಿನಗಳಲ್ಲಿ ರೋಗ ಉಲ್ಭಣಿಸಿ ನಾಯಿಗಳು ಸಾವನ್ನಪ್ಪುತ್ತವೆ.

ವೈರಸ್‌ಗೆ ತುತ್ತಾದ ನಾಯಿಗಳು ರೇಬಿಸ್ ಪೀಡಿತ ನಾಯಿಯಂತೆ ವರ್ತಿಸುತ್ತಿದ್ದು, ಸಾಕು ನಾಯಿಗಳ ಮೇಲೆ ದಾಳಿ ಮಾಡುತ್ತವೆ. ಆ ಮೂಲಕ ರೋಗ ಒಂದರಿಂದ ಇನ್ನೊಂದಕ್ಕೆ ಹರಡುತ್ತಿದ್ದು, ಸಾಕುನಾಯಿ ಮಾಲೀಕರನ್ನು ಆತಂಕಕ್ಕೀಡು ಮಾಡುತ್ತಿದೆ. ಮೂಗಿನಿಂದ ಕೀವು ಬರಲು ಆರಂಭವಾಗುತ್ತದೆ ಮತ್ತು ಬಾಯಿಯಿಂದಲೂ ಕೀವು ಮಿಶ್ರಿತ ನೀರು ನಾಯಿ ಸಂಚರಿಸಿದ ಉದ್ದಕ್ಕೂ ಬೀಳುವುದರ ಪರಿಣಾಮ ರೋಗ ಹರಡುತ್ತದೆ. ಇಂಥ ಮಿದುಳು ಜ್ವರದ ಹಾವಳಿ ಈಗ ಪುತ್ತೂರು, ಸುಳ್ಯದಲ್ಲಿ ಹೆಚ್ಚಿದ್ದು ಜನರಲ್ಲಿ ಭೀತಿ ಮೂಡಿಸಿದೆ. 

ಈ ರೋಗದಿಂದ ಮನುಷ್ಯರಿಗೆ ಅಪಾಯವಿಲ್ಲ. ಬೇಸಿಗೆಯಲ್ಲಿ ರೋಗ ಹೆಚ್ಚಾಗಿ ಉಲ್ಭಣಿಸುತ್ತದೆ. ರೋಗ ಬಾರದಂತೆ ಆರಂಭದಲ್ಲಿ 60 ದಿನಗಳ ಮರಿಗಳಿಗೆ ಡಿಸ್ಟೆಂಪರ್ ವ್ಯಾಕ್ಸೀನ್ ನೀಡಬೇಕಾಗುತ್ತದೆ. ಬಳಿಕ 90 ದಿನ ಹಾಗೂ ನಂತರ ಪ್ರತಿ ವರ್ಷಕ್ಕೊಮ್ಮೆ ರೋಗ ನಿರೋಧಕ ಚುಚ್ಚು ಮದ್ದು ನೀಡುವುದರ ಮೂಲಕ ನಾಯಿಗಳನ್ನು ರೋಗದಿಂದ ರಕ್ಷಿಸಬಹುದು ಪಶು ವೈದ್ಯ ಡಾ.ಧರ್ಮಪಾಲ ಹೇಳುತ್ತಾರೆ.