ಮಂಗಳೂರಿನಲ್ಲಿ ಯುಪಿ ಮುಖ್ಯಮಂತ್ರಿ ಆದಿತ್ಯನಾಥ ಪ್ರತಿಕೃತಿ ದಹಿಸಿ ಪ್ರತಿಭಟನೆ

02-10-20 09:56 am       Headline Karnataka News Network   ಕರಾವಳಿ

ಹತ್ರಾಸ್ ಸಾಮೂಹಿಕ ಅತ್ಯಾಚಾರವನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಯುಪಿ ಮುಖ್ಯ ಮಂತ್ರಿ ಆದಿತ್ಯನಾಥ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

ಮಂಗಳೂರು, ಅಕ್ಟೋಬರ್ 02: ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗದ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗು  ಇದಕ್ಕೆ ಅಲ್ಲಿನ ಸರಕಾರ ನಡೆದುಕೊಂಡ ರೀತಿಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. 

ನಗರದ ಲಾಲ್ ಬಾಗ್  ವೃತ್ತದ ಗಾಂಧಿ ಪ್ರತಿಮೆ ಎದುರು ಸೇರಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಹಾಗು ಉತ್ತರ  ಪ್ರದೇಶ ಸರಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೆ, ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಅತ್ಯಾಚಾರಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಹಾಗೂ ಅಂತವರು ನೈಜ ಹಿಂದೂ ಆಗಿರಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಗಿ ಆದಿತ್ಯನಾಥ ಅವರ ಪ್ರತಿಕೃತಿ ದಹಿಸಿ ಸಿಟ್ಟು ಹೊರಹಾಕಿದ  ಪ್ರತಿಭಟನಾಕಾರರು, ಯುವತಿಯ ಬೆನ್ನು ಮೂಳೆಯನ್ನು ಮುರಿದು, ನಾಲಗೆಯನ್ನು ಕತ್ತರಿಸಿ ಅತ್ಯಾಚಾರ ಮಾಡಿರುವುದು ಪೈಶಾಚಿಕ ಕೃತ್ಯವಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟ ಬಳಿಕ ಆಕೆಯ ಶವವನ್ನು ಅಜ್ಞಾತ ಸ್ಥಳದಲ್ಲಿ ಪೊಲೀಸರು  ಸುಟ್ಟು  ಹಾಕಿರುವುದು ಉತ್ತರ ಪ್ರದೇಶದ ನಿಜ ಚಿತ್ರಣ ದೇಶದ ಮುಂದೆ ಬಯಲಾಗಿದೆ ಎಂದು ಆರೋಪಿಸಿದ್ದಾರೆ. 

ಅತ್ಯಾಚಾರಿ ಕೊಲೆಗಡುಕರಿಗೆ  ಅತೀ ಶೀಘ್ರವಾಗಿ ಮರಣ ದಂಡನೆಯನ್ನು ವಿಧಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಈ ಕೂಡಲೇ ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಅವರು ಮುಖ್ಯ ಮಂತ್ರಿ  ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.