ಮಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡರಿಂದ ಹಠಾತ್ ರಸ್ತೆ ತಡೆ

02-10-20 12:28 pm       Mangalore Correspondent   ಕರಾವಳಿ

ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯ ಬಂಧನವನ್ನು ಖಂಡಿಸಿ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ ನಡೆಸಲಾಯಿತು.

ಮಂಗಳೂರು, ಅ.2: ದಲಿತ ಯುವತಿಯ ಅತ್ಯಾಚಾರ-ಹತ್ಯೆ ನಡೆದ ಉತ್ತರ ಪ್ರದೇಶದ ಹತ್ರಾಸ್‌ಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯ ಬಂಧನವನ್ನು ಖಂಡಿಸಿ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ರಸ್ತೆ ತಡೆ ನಡೆಸಲಾಯಿತು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಮಂಗಳೂರಿನ ಮಿನಿ ವಿಧಾನ ಸೌಧದ ಎದುರು ಹಠಾತ್ ರಸ್ತೆ ತಡೆ ನಡೆಸಿದ ಕಾಂಗ್ರೆಸ್ ಮುಖಂಡರು ಉತ್ತರ ಪ್ರದೇಶ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ಎರಡು ವಾಹನಗಳಲ್ಲಿ ಕರೆದೊಯ್ದರು.

ಇದಕ್ಕೂ ಮೊದಲು ದ.ಕ.ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಸುರತ್ಕಲ್-ಗುರುಪುರ, ಮಂಗಳೂರು ನಗರ- ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಮತ್ತು ಕೇಂದ್ರ-ರಾಜ್ಯ ಸರಕಾರ ಅಂಗೀಕರಿಸಿರುವ ಕೃಷಿ ಕಾಯ್ದೆಗಳ ವಿರುದ್ಧ ಧರಣಿ ಸತ್ಯಾಗ್ರಹ ನಡೆಯಿತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ರಮಾನಾಥ ರೈ, ಮಹಾತ್ಮ ಗಾಂಧಿಯವರು ಶಾಂತಿ, ಸಹಿಷ್ಣುತೆ, ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ ತಂದುಕೊಟ್ಟರು. ಆದರೆ ಸದ್ಯ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರಕಾರ ದೇಶದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಗಾಂಧಿ ತಂದುಕೊಟ್ಟ ಸ್ವಾತಂತ್ರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಬಳಿಕ ಪ್ರತಿಭಟನಾಕಾರರು ಕಾಲ್ನಡಿಗೆಯಲ್ಲಿ ಸಾಗಿ ಪುರಭವನದ ಎದುರಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಆನಂತರ ಮಿನಿ ವಿಧಾನಸೌಧ ಎದುರು ಹಠಾತ್ ರಸ್ತೆ ತಡೆ ನಡೆಸಲಾಯಿತು.

ಪ್ರತಿಭಟನೆಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಜೆ.ಆರ್.ಲೋಬೊ, ಐವನ್ ಡಿಸೋಜ, ಮೊಯ್ದಿನ್ ಬಾವ, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮುಖಂಡರಾದ ಎ.ಸಿ.ವಿನಯ್‌ರಾಜ್, ಪ್ರವೀಣ್‌ಚಂದ್ರ ರೈ, ಶಶಿಧರ ಹೆಗ್ಡೆ, ಅನಿಲ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

video