ಉತ್ತರ ಪ್ರದೇಶ ಸರಕಾರವನ್ನು ತಕ್ಷಣವೇ ವಜಾಗೊಳಿಸಿ ; ರಮಾನಾಥ ರೈ ಆಗ್ರಹ

02-10-20 01:50 pm       Mangalore Correspondent   ಕರಾವಳಿ

ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ತಕ್ಷಣವೇ ಅಲ್ಲಿನ ಸರಕಾರವನ್ನು ವಜಾಗೊಳಿಸಬೇಕು, ಈ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 2: ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ತಕ್ಷಣವೇ ಅಲ್ಲಿನ ಸರಕಾರವನ್ನು ವಜಾಗೊಳಿಸಬೇಕು, ಈ ಕೂಡಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ರಮಾನಾಥ ರೈ ಆಗ್ರಹಿಸಿದ್ದಾರೆ. ಉ. ಪ್ರದೇಶದ ಹತ್ರಾಸ್ ನಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ರೈ ಈ ಆಗ್ರಹ ಮಾಡಿದ್ದಾರೆ. 

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ಉತ್ತರ ಪ್ರದೇಶ ಸೇರಿದಂತೆ ದೇಶದಲ್ಲಿ ಹಲವೆಡೆ ದುರ್ಬಲರ ಮೇಲೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಕಾನೂನು ವ್ಯವಸ್ಥೆ ಬರಗೆಟ್ಟು ಹೋಗಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ದುರ್ಬಲ ವರ್ಗದವರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಹೆಚ್ಚಿದ್ದು ದೇಶದ ದುರವಸ್ಥೆಯನ್ನು ತೋರಿಸುತ್ತಿದೆ. ಇವರ ಅಧಿಕಾರ ಅವಧಿಯಲ್ಲಿ ಪ್ರಬಲ ವರ್ಗದವರು ಅಪಾಯಕಾರಿಯಾಗುತ್ತಿದ್ದಾರೆ ಸಂಘ ಪರಿವಾರ ಅಧಿಕಾರದಲ್ಲಿರುವ ಕಡೆಯಲ್ಲಿ ಅಲ್ಲಿನ ಆಡಳಿತ ಪ್ರಬಲರ ರಕ್ಷಣೆಗೆ ಮುಂದಾಗುತ್ತಿದೆ. ಇದು ದುರಂತಕ್ಕೆ ಕಾರಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ದೇಶದಲ್ಲಿ ಕಾನೂನು  ಸುವ್ಯವಸ್ಥೆ ಹದಗೆಟ್ಟಿದೆ, ಜೊತೆಗೆ ಆರ್ಥಿಕತೆಯೂ ಸಂಪೂರ್ಣ ಕುಸಿದಿದೆ. ಉತ್ತರ ಪ್ರದೇಶದಲ್ಲಿ ಪದೇ ಪದೇ ಇಂತಹ ಪ್ರಕರಣಗಳು ಮರುಕಳಿಸುತ್ತಿರುವುದು ಅಲ್ಲಿನ ಆಡಳಿತ ವ್ಯವಸ್ಥೆಯನ್ನು ತೋರಿಸುತ್ತದೆ. ಆದಿತ್ಯನಾಥ್ ಸರಕಾರ ಬಂದ ಮೇಲೆ ಉತ್ತರ ಪ್ರದೇಶದ ಸ್ಥಿತಿ ಅಧೋಗತಿಗೆ ಹೋಗಿದೆ ಎಂದು ರೈ ಹೇಳಿದರು. 

ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಜಿ ಸಚಿವ ಯು.ಟಿ.ಖಾದರ್, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮತ್ತಿತರ ಮುಖಂಡರು ಇದ್ದರು.