ಬೆಂಗ್ಳೂರಲ್ಲಿ ಕೆರೆ, ಕಾಲುವೆ ಕಬ್ಜಾ ಮಾಡಿದ ಅಶೋಕ್ ಗೆ ಕಡಲ್ಕೊರೆತ ಬಗ್ಗೆ ಏನ್ಗೊತ್ತು? ಎಡಿಬಿ ಕಾಮಗಾರಿ ಭ್ರಷ್ಟಾಚಾರ ತನಿಖೆ ನಡೆಸಿ ! 

19-07-22 10:39 pm       Mangalore Correspondent   ಕರಾವಳಿ

ಕೆರೆ, ಕಾಲುವೆಗಳನ್ನೇ ಕಬ್ಜಾ ಮಾಡಿ ಬೆಂಗಳೂರಿನ ರಸ್ತೆಗಳಲ್ಲಿ ನದಿ ಹರಿಯುವಂತೆ ಮಾಡಿದ ಸಚಿವ ಆರ್.ಅಶೋಕ್ ಗೆ ಕಡಲ್ಕೊರೆತದ ಬಗ್ಗೆ ಏನ್ ಗೊತ್ತಿದೆ ಎಂದು ವಿದಾನ ಪರಿಷತ್ನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. 

ಉಳ್ಳಾಲ, ಜು.19 : ಕೆರೆ, ಕಾಲುವೆಗಳನ್ನೇ ಕಬ್ಜಾ ಮಾಡಿ ಬೆಂಗಳೂರಿನ ರಸ್ತೆಗಳಲ್ಲಿ ನದಿ ಹರಿಯುವಂತೆ ಮಾಡಿದ ಸಚಿವ ಆರ್.ಅಶೋಕ್ ಗೆ ಕಡಲ್ಕೊರೆತದ ಬಗ್ಗೆ ಏನ್ ಗೊತ್ತಿದೆ ಎಂದು ವಿದಾನ ಪರಿಷತ್ನ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದ್ದಾರೆ. 

ಅವರಿಂದು ಸೋಮೇಶ್ವರ, ಉಚ್ಚಿಲ ಬಟ್ಟಪ್ಪಾಡಿ ಮತ್ತು ಉಳ್ಳಾಲ ಸೀ ಗ್ರೌಂಡ್ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು. ಕಳೆದ 60 ವರುಷಗಳಿಂದ ಕಡಲೂ ಇತ್ತು, ಕೊರೆತನೂ ಇತ್ತು, ಆವಾಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಏನು ಪರಿಹಾರ ನೀಡಿದ್ರು ಎಂದು ಹೇಳಿಕೆ ನೀಡಿದ್ದ ಸಚಿವ ಆರ್.ಅಶೋಕ್ ಪ್ರಶ್ನೆಗೆ ಟಾಂಗ್ ನೀಡಿ ಅವರು ಮಾತನಾಡಿದರು. 

ಬೆಂಗಳೂರಿನ ಜಮೀನು, ಕೆರೆ, ಕಾಲುವೆಗಳನ್ನ ಕಬ್ಜಾ ಮಾಡಿದ ಅಶೋಕ್ ಅವರು ಕಾಂಗ್ರೇಸು, ಕಡಲ್ಕೊರೆತದ ಬಗ್ಗೆ ಮಾತನಾಡುವುದು ಬೇಡ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಡಲ್ಕೊರೆತ ತಡೆಯಲು ಸಾಕಷ್ಟು ಕಾಮಗಾರಿ ನಡೆಸಿದೆ. ಈಗಿನ‌ ಬಿಜೆಪಿ ಸರಕಾರಕ್ಕೆ ಅದನ್ನ ನಿರ್ವಹಣೆ ಮಾಡಲು ಪುರುಸೊತ್ತಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಜನರನ್ನ ಅವರ ಪಾಡಿಗೆ ಬಿಟ್ಟರೆ ಸಮಸ್ಯೆ ಎದುರಾಗುವುದು ಸಹಜ. ಈ ಭಾಗಕ್ಕೆ ಮುಖ್ಯಮಂತ್ರಿಗಳು ಭೇಟಿ ನೀಡಿದ್ದರೂ ಸಹ ಕಡಲ್ಕೊರೆತ ಸಂತ್ರಸ್ತರಿಗೆ ಇನ್ನೂ ತುರ್ತು ಪರಿಹಾರ ಸಿಕ್ಕಿಲ್ಲ. ತುರ್ತು ಕಾಮಗಾರಿಯನ್ನೂ ನಡೆಸಿಲ್ಲ. ಮಳೆ, ಸಮುದ್ರ ಕೊರೆತದಿಂದ ಅಪಾರ ನಷ್ಟ ಉಂಟಾಗಿದ್ದು ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಆಗ್ರಹಿಸಿದರು. 

ಕಡಲ್ಕೊರೆತ ತಡೆಯ ಎಡಿಬಿ ಕಾಮಗಾರಿಯನ್ನು ಗಮನಿಸುವಾಗ ಭ್ರಷ್ಟಾಚಾರ ಕಂಡುಬರುತ್ತಿದ್ದು ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಎಡಿಬಿ ಕಾಮಗಾರಿಗೆ ಮೊದಲು ಆಳವಾಗಿ ಯೋಚಿಸಿ ತಾಂತ್ರಿಕ ಕಾಮಗಾರಿ ನಿರ್ವಹಿಸುತ್ತದೆ. ಆದರೆ ಇಲ್ಲಿ ಅದೆಲ್ಲವನ್ನೂ ಮೀರಿ ಕೆಲಸ ನಡೆದಿದ್ದು ಭ್ರಷ್ಟಾಚಾರ ಜೋರಾಗಿ ನಡೆದಿರುವುದು ಕಂಡುಬರುತ್ತದೆ. ಇವೆಲ್ಲದರ ಬಗ್ಗೆ ಸಮಗ್ರ ತನಿಖೆಯಾದಾಗ ಕಾಮಗಾರಿಯ ಹುಳುಕು ಹೊರಬರುತ್ತದೆ ಎಂದರು.
ಉಳ್ಳಾಲ‌ ಭಾಗದಲ್ಲಿ ಅಕ್ರಮ ಮರಳು ಮಾಫಿಯಾ ಇದ್ದು ಸ್ವಚ್ಛ ಸರ್ಕಾರ ಎಂದು ಹೇಳಿಕೊಳ್ಳುತ್ತಿರುವ ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕಿತ್ತು, ಆದರೆ 40 ಶೇ. ಕಮಿಷನ್ ನಲ್ಲಿರುವ ಸರ್ಕಾರ ಅಕ್ರಮ ಮರಳು ಮಾಫಿಯಾಕ್ಕೆ ಉತ್ತೇಜನ ನೀಡುತ್ತಿದೆ ಎಂದು ಆರೋಪಿಸಿದರು. 

ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕರಾದ ಯು.ಟಿ ಖಾದರ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಜೊತೆಗಿದ್ದರು.

What does R Ashok know about sea erosion slams B K Prasad at Ullal in Mangalore.