ತಾಲೂಕು ಕಚೇರಿಗೆ ಪೀಠೋಪಕರಣ ಕೊಟ್ಟರೂ, ತಹಶೀಲ್ದಾರ್ ಕಾಟ ತಪ್ಪಿಲ್ಲ! ವಿಪಕ್ಷ ನಾಯಕರ ಮುಂದೆ ರೆಸಾರ್ಟ್ ಮಾಲಕರ ಅಳಲು 

20-07-22 06:06 pm       Mangalore Correspondent   ಕರಾವಳಿ

ಸೋಮೇಶ್ವರ, ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ಅಬ್ಬರಕ್ಕೆ ತೀರದಲ್ಲಿರುವ ರೆಸಾರ್ಟ್ ಕೊಚ್ಚಿ ಹೋಗುವ ಭೀತಿಯಲ್ಲಿದೆ. ಈ ಮಧ್ಯೆ, ರೆಸಾರ್ಟ್ ಮಾಲಕರೊಬ್ಬರು ಕಡಲ್ಕೊರೆತ ವೀಕ್ಷಣೆಗೆ ಬಂದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರಲ್ಲಿ ತಹಸೀಲ್ದಾರ್ ಬಗ್ಗೆ ದೂರು ಹೇಳಿಕೊಂಡಿದ್ದಾರೆ. 

ಉಳ್ಳಾಲ, ಜು.20 : ಸೋಮೇಶ್ವರ, ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ಅಬ್ಬರಕ್ಕೆ ತೀರದಲ್ಲಿರುವ ರೆಸಾರ್ಟ್ ಕೊಚ್ಚಿ ಹೋಗುವ ಭೀತಿಯಲ್ಲಿದೆ. ಈ ಮಧ್ಯೆ, ರೆಸಾರ್ಟ್ ಮಾಲಕರೊಬ್ಬರು ಕಡಲ್ಕೊರೆತ ವೀಕ್ಷಣೆಗೆ ಬಂದ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಅವರಲ್ಲಿ ತಹಸೀಲ್ದಾರ್ ಬಗ್ಗೆ ದೂರು ಹೇಳಿಕೊಂಡಿದ್ದಾರೆ. 

ತಾನು ತಾಲೂಕು ಕಚೇರಿಗೆ ಮೂರು ಕಂಪ್ಯೂಟರ್, ಟೇಬಲ್, ಝೆರಾಕ್ಸ್ ಮೆಷಿನ್ ಇತ್ಯಾದಿ ಕೊಡಿಸಿದ್ರೂ ತಹಶೀಲ್ದಾರ್ ಮಾತ್ರ ಗೆಸ್ಟ್ ಹೌಸ್ ರಕ್ಷಿಸಲು ಅಡ್ಡಿಯಾಗಿದ್ದಾರೆ ಎಂದು ರೆಸಾರ್ಟ್ ಮಾಲಕ ಅಬ್ದುಲ್ಲ ಎಂಬವರು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಅವರಲ್ಲಿ ಅಲವತ್ತು ತೋಡಿಕೊಂಡಿದ್ದಾರೆ. ಮಂಗಳವಾರ ಬಿ.ಕೆ.ಹರಿಪ್ರಸಾದ್ ಅವರು ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದ ಕಡಲ್ಕೊರೆತ ವೀಕ್ಷಣೆಗೆ ಬಂದಾಗ ಗೆಸ್ಟ್ ಹೌಸ್ ಮಾಲಕ ಅಬ್ದುಲ್ಲ ಈ ರೀತಿ ದೂರು ಹೇಳಿಕೊಂಡಿದ್ದಾರೆ.

ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತದ ತೀವ್ರತೆಗೆ ಬೀಚ್ ರಸ್ತೆಯೇ ಇಲ್ಲದಂತಾಗಿದ್ದು ಅನೇಕ ಮನೆಗಳು ಕೊಚ್ಚಿ ಹೋಗುವ ಸ್ಥಿತಿಯಲ್ಲಿದೆ. ಈ ಮಧ್ಯೆ ಇಲ್ಲಿನ‌ ವಿಟಮಿನ್ ಸೀ (vitamin sea) ಎಂಬ ರೆಸಾರ್ಟ್ ಕಟ್ಟಡವೂ ಬಹುತೇಕ ಸಮುದ್ರ ಪಾಲಾಗುವ ಭೀತಿಯಲ್ಲಿದ್ದು ಅದರ ಮಾಲಕರು ಸಮುದ್ರ ತೀರಕ್ಕೆ ಕಲ್ಲು, ಮರಳು ಮೂಟೆಗಳನ್ನಿರಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಸಿ ಆರ್ ಝೆಡ್ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ನಡೆಸುವುದು, ರಕ್ಷಣೆಗೆ ಕಾಮಗಾರಿ ನಡೆಸುತ್ತಿರುವುದರ ವಿರುದ್ಧ ಸ್ಥಳೀಯರಾದ ಸುಕೇಶ್ ಉಚ್ಚಿಲ್ ಎಂಬವರು ಅನೇಕ ಬಾರಿ‌ ಉಳ್ಳಾಲ ತಹಶೀಲ್ದಾರ್ ಗುರುಪ್ರಸಾದ್ ಅವರಿಗೆ ದೂರು ನೀಡಿದ್ದಾರೆ. ತಹಶೀಲ್ದಾರ್ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರಂತೆ. ಆದರೆ ರೆಸಾರ್ಟ್ ಸಿಬಂದಿ ಆಬಳಿಕವೂ ರಕ್ಷಣಾ ಗೋಡೆ ಕಟ್ಟುವ ಕಾರ್ಯ ಮುಂದುವರಿಸಿದ್ದರು. ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ತಹಶೀಲ್ದಾರ್ ರೆಸಾರ್ಟ್ ಮಾಲಕರ ಕಡೆ ನಿಲ್ಲುವುದಕ್ಕೂ ಆಗದ ಸ್ಥಿತಿಯಲ್ಲಿದ್ದಾರೆ. 

ಈ ಬೆಳವಣಿಗೆಯಿಂದ ರೆಸಾರ್ಟ್ ಮಾಲಕ ಕಂಗೆಟ್ಟಿದ್ದು ಕೊನೆಗೆ ಬಿ.ಕೆ ಹರಿಪ್ರಸಾದ್ ಎದುರಲ್ಲಿ ಅಲವತ್ತು ತೋಡಿಕೊಂಡಿದ್ದು ಮಾತ್ರ ತಹಸೀಲ್ದಾರ್ ಕುರಿತು ಸ್ಥಳೀಯರು ಪ್ರಶ್ನೆ ಮಾಡುವಂತಾಗಿದೆ. ಉಚ್ಚಿಲ ಪ್ರದೇಶಗಳಲ್ಲಿ ಅನಧಿಕೃತ ರೆಸಾರ್ಟ್ ಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು ಅಧಿಕಾರಿ ವರ್ಗದ ಬೆಂಬಲವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದರು. ಇದೀಗ ರೆಸಾರ್ಟ್ ಮಾಲಕನೇ ತಾನು ತಾಲೂಕು ಕಚೇರಿಗೆ ಸವಲತ್ತುಗಳನ್ನು ಕೊಟ್ಟಿರುವುದಾಗಿ ಬಹಿರಂಗವಾಗಿ ಹೇಳಿರುವುದು ತಹಶೀಲ್ದಾರ್ ಬಗ್ಗೆ ಜನರು ಪ್ರಶ್ನೆ ಮಾಡುವಂತಾಗಿದೆ.

Mangalore Resorts in Uchila in fear of collapsing due to heavy sea erosion.