ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ವೈರಲ್ ; ಪಂಥ ಕಟ್ಟಿ ಕಿಸ್ಸಿಂಗ್, ಒಬ್ಬ ಹುಡುಗ ಪೊಲೀಸ್ ವಶಕ್ಕೆ, ಕಾಲೇಜಿನಿಂದ ಅಮಾನತು ಶಿಕ್ಷೆ !

21-07-22 01:29 pm       Mangalore Correspondent   ಕರಾವಳಿ

ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಕಿಸ್ಸಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ವಿಡಿಯೋ ಮಾಡಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಜುಲೈ 21: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಕಿಸ್ಸಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ವಿಡಿಯೋ ಮಾಡಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದಿದ್ದಾರೆ.

ಮಾಹಿತಿ ಪ್ರಕಾರ, ಟ್ರುತ್ ಅಂಡ್ ಡೇರ್ ಅನ್ನುವ ಗೇಮ್ ಆಡುವ ನೆಪದಲ್ಲಿ ಬಾವುಟಗುಡ್ಡೆಯ ಅಪಾರ್ಟ್ಮೆಂಟ್ ಕೊಠಡಿಯಲ್ಲಿ ಒಂದೇ ಕಾಲೇಜಿನ ಕೆಲವು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಸೇರಿದ್ದರು. ಗೇಮ್ ನಲ್ಲಿ ಸೋತವರು ಹುಡುಗ- ಹುಡುಗಿಗೆ ಬಹಿರಂಗ ಕಿಸ್ ಕೊಡಬೇಕೆಂಬ ಷರತ್ತು ಇದ್ದುದರಿಂದ ಹುಡುಗ ಕಿಸ್ ಕೊಟ್ಟಿದ್ದಾನೆ. ಈ ದೃಶ್ಯವನ್ನು ಇನ್ನೊಬ್ಬ ವಿದ್ಯಾರ್ಥಿ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು, ವಾರದ ಹಿಂದೆ ತರಗತಿ ಒಳಗಿನ ಗ್ರೂಪಲ್ಲಿ ಶೇರ್ ಮಾಡಿದ್ದಾನೆ. ಈ ಬಗ್ಗೆ ತರಗತಿಯ ಉಪನ್ಯಾಸಕರು ಗಮನಿಸಿ, ಪ್ರಾಂಶುಪಾಲರ ಗಮನಕ್ಕೆ ತಂದಿದ್ದರು. ಯಾರೆಲ್ಲ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅವರನ್ನು ಗುರುತಿಸಿ ಕಾಲೇಜಿನ ಶಿಸ್ತು ಸಮಿತಿ ಅಮಾನತು ಮಾಡಿದೆ.

ಪೊಲೀಸರ ತನಿಖೆಯ ಸಂದರ್ಭದಲ್ಲಿ ಈ ಕೃತ್ಯ ಜನವರಿ ತಿಂಗಳಲ್ಲಿ ನಡೆದಿದ್ದು, ಐದು ತಿಂಗಳ ಹಿಂದಿನ ಘಟನೆಯಾಗಿತ್ತು. ಬಾವುಟಗುಡ್ಡೆಯ ಅಪಾರ್ಟ್ಮೆಂಟ್ ಒಂದರಲ್ಲಿ ಕೊಠಡಿ ಪಡೆದಿದ್ದ ಕೆಲವು ವಿದ್ಯಾರ್ಥಿಗಳು, ಅಲ್ಲಿದ್ದಾಗ ಗೇಮ್ ಆಡುವ ನೆಪದಲ್ಲಿ ವಿದ್ಯಾರ್ಥಿನಿಯರನ್ನು ಕರೆಸಿ ಈ ಕೃತ್ಯ ಎಸಗಿದ್ದರು. ಆನಂತರ, ಕೊಠಡಿಯಲ್ಲಿ ಅನುಚಿತ ವರ್ತನೆ ತೋರುತ್ತಾರೆ ಮತ್ತು ಬೇರೆ ವಿದ್ಯಾರ್ಥಿಗಳು ಬರುತ್ತಾರೆಂದು ಗಮನಿಸಿ ಅದರ ಮಾಲೀಕರು ವಿದ್ಯಾರ್ಥಿಗಳನ್ನು ಅಲ್ಲಿಂದ ಬಿಡಿಸಿದ್ದರು.

ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದರಿಂದ ವಿಡಿಯೋದಲ್ಲಿರುವ ವಿದ್ಯಾರ್ಥಿನಿ ಮತ್ತು ಇತರ ವಿದ್ಯಾರ್ಥಿಗಳನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುವುದು. ವಿಡಿಯೋ ಚಿತ್ರೀಕರಿಸಿದ್ದ ಒಬ್ಬ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಮಂಗಳೂರಿನ ಮತ್ತು ಹೊರಭಾಗದ ವಿದ್ಯಾರ್ಥಿಗಳು ಕೂಡ ಇದ್ದಾರೆ. ಇವರೆಲ್ಲ 18 ವರ್ಷದ ಒಳಗಿನವರೇ ಅಥವಾ ಆ ಕೊಠಡಿಯಲ್ಲಿ ಮಾದಕ ದ್ರವ್ಯ ಸೇವಿಸಿ ಬೇರೆ ಏನಾದರೂ ಲೈಂಗಿಕ ಕಿರುಕುಳದ ಕೃತ್ಯ ನಡೆದಿತ್ತೇ ಎನ್ನುವ ಬಗ್ಗೆ ತನಿಖೆ ನಡೆಸಲಾಗುವುದು. ವಿದ್ಯಾರ್ಥಿನಿ ಕಡೆಯಿಂದ ದೂರು ಬಂದಲ್ಲಿ ಪ್ರಕರಣ ದಾಖಲಿಸಲಾಗುವುದು. ಸದ್ಯಕ್ಕೆ ಪ್ರಕರಣ ದಾಖಲಾಗಿಲ್ಲ. ಯಾವ ಉದ್ದೇಶಕ್ಕಾಗಿ ವಿಡಿಯೋ ಮಾಡಿದ್ದರು ಮತ್ತು ಅದನ್ನು ಜಾಲತಾಣದಲ್ಲಿ ಹರಿಯಬಿಟ್ಟಿದ್ದರು ಅನ್ನುವುದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

Mangalore Aloysius college kissing video of students goes viral, one taken to custody by police. The video was taken five months ago which has now gone viral on social media. All the students are said to be minors. One who shot the video has been taken to custody by Mangalore Police.