ಕಾರ್ಗಿಲ್ ಮೀನು ಬಂದೈತೆ ಕಣ್ಲಾ...! ಬೂತಾಯಿ, ಬಂಗ್ಡೇನ್ ನುಂಗಿಹಾಕ್ತು ನೋಡ್ಲಾ..!

02-10-20 03:32 pm       Mangalore Correspondent   ಕರಾವಳಿ

ಮೀನುಗಾರಿಕೆ ರಜೆ ಕಳೆದು ಸುದೀರ್ಘ 5 ತಿಂಗಳ ಬಳಿಕ ಮೀನುಗಾರಿಕೆ ಶುರುವಾಗಿತ್ತು. ಹೀಗಾಗಿ ಭರಪೂರ ಮೀನು ಸಿಗಬಹುದೆಂಬ ನಿರೀಕ್ಷೆಯನ್ನು ಕಾರ್ಗಿಲ್ ಮೀನು ಹುಸಿಗೊಳಿಸಿದೆ.

ಮಂಗಳೂರು, ಅಕ್ಟೋಬರ್ 2: ಅರೇ, ಪಾಕಿಸ್ಥಾನದ ಗಡಿಭಾಗ ಕಾರ್ಗಿಲ್ ಈಗ ನಮ್ಮ ಬಂದರಿಗೂ ಬಂದಿವೆಯಾ..? ಅಲ್ಲಾ ಅಲ್ಲಿನ ಜನ ಬಂದಿದ್ದಾರೆಯೇ..? ಎರಡೂ ಅಲ್ಲ.. ಕರಾವಳಿಯ ಮೀನುಗಾರರಿಗೆ ಮಾತ್ರ ಈಗ ಈ ಕಾರ್ಗಿಲ್ ಹೆಸರು ಕೇಳಿದ್ರೆ ಭಯ ಹುಟ್ಟುವಂತೆ ಮಾಡಿದೆ. ಇದಕ್ಕೆ ಕಾರಣ ಕಾರ್ಗಿಲ್ ಅನ್ನೋ ಹೆಸರಿನ ಮೀನು ಕರಾವಳಿಗೆ ದಾಳಿ ಇಟ್ಟಿರುವುದು.. 

ಹೌದು.. ಕಳೆದ ವರ್ಷ ಭಾರಿ ಸುದ್ದಿ ಮಾಡಿದ್ದ ಈ ಕಾರ್ಗಿಲ್ ಮೀನು ಅಥವಾ ಟ್ರಿಗ್ಗರ್ ಫಿಶ್ ಈ ಬಾರಿ ಮತ್ತೆ ಮೀನುಗಾರರ ಬಲೆಗೆ ಬೀಳತೊಡಗಿದ್ದು ಚಿಂತೆಗೀಡುಮಾಡಿದೆ. ಈ ಮೀನುಗಳನ್ನು ಜನ ತಿನ್ನುವುದಕ್ಕೆ ಬಳಸುವುದಿಲ್ಲ. ಕೇವಲ ಗೊಬ್ಬರಕ್ಕೆ ಮಾತ್ರ ಇದನ್ನು ಬಳಸಲಾಗುತ್ತದೆ. ಈ ಬಾರಿ ಕೊರೊನಾ ಲಾಕ್ಡೌನ್, ಮೀನುಗಾರಿಕೆ ರಜೆ ಕಳೆದು ಸುದೀರ್ಘ 5 ತಿಂಗಳ ಬಳಿಕ ಮೀನುಗಾರಿಕೆ ಶುರುವಾಗಿತ್ತು. ಹೀಗಾಗಿ ಭರಪೂರ ಮೀನು ಸಿಗಬಹುದೆಂಬ ನಿರೀಕ್ಷೆಯಲ್ಲಿ ಮೀನುಗಾರರು ಇದ್ದರು. ಆದರೆ, ಆಳ ಸಮುದ್ರ ಮೀನು ಬೇಟೆಗೆ ತೆರಳಿದ್ದ ಮೀನುಗಾರರಿಗೆ ಈಗ  ಆತಂಕ ಎದುರಾಗಿದೆ. ಇದಕ್ಕೆ ಕಾರಣ, ಕಾರ್ಗಿಲ್ ಮೀನುಗಳು. ಕಾರ್ಗಿಲ್ ಫಿಶ್ ಒಂದು ಕಡೆ ಎದುರಾಯ್ತು ಅಂದರೆ ಆ ಭಾಗದಲ್ಲಿ ಇತರೇ ಮೀನುಗಳೇ ಸುಳಿಯಲ್ಲ. ಉಳಿಯೋದೂ ಇಲ್ಲ.‌ ಹೀಗಾಗಿ ರಾಶಿ ರಾಶಿ ರೂಪದಲ್ಲಿ ಎದುರಾಗುತ್ತಿರುವ ಈ ಕಾರ್ಗಿಲ್ ಮೀನುಗಳು ಮೀನುಗಾರಿಕೆಗೆ ಅಡ್ಡಿಯಾಗಿದೆ. 

ಈ ಕಾರ್ಗಿಲ್ ಮೀನು ಹೆಚ್ಚಾಗಿ ಹವಳದ ದಿಬ್ಬಗಳು ಮತ್ತು  ಲಕ್ಷದ್ವೀಪದಂಥ ಪ್ರದೇಶಗಳಲ್ಲಿ ಇರುತ್ತವೆ. ಅವು ಈಗ ಕರಾವಳಿಯತ್ತ ಬಂದಿದ್ದು ಜನ ಸಾಮಾನ್ಯವಾಗಿ ಬಳಸುವ ಬೂತಾಯಿ, ಬಂಗುಡೆ, ಅಂಜಲ್ ಮೀನುಗಳ ಲಭ್ಯತೆಗೆ ಅಡ್ಡಿಯಾಗುತ್ತಿದೆ. ಕಪ್ಪು ಬಣ್ಣದಿಂದ ಕೂಡಿರುವ ಈ ಮೀನುಗಳು, ಮನುಷ್ಯರಂತೆ ಹಲ್ಲುಗಳನ್ನು ಹೊಂದಿದ್ದು ವಾಸನೆಯುಕ್ತವಾಗಿವೆ. ಈ ಮೀನುಗಳನ್ನು ಕಂಡರೆ ಇತರೇ ಸಣ್ಣ ಮೀನುಗಳು ದೂರಕ್ಕೆ ಓಡುತ್ತವೆ. ಹೀಗಾಗಿ ಈ ಮೀನುಗಳು ಬಲೆಗೆ ಬಿದ್ದರೆ, ಬೇರೆ ಯಾವುದೇ ಮೀನು ಸಿಗಲ್ಲ. ಮೀನುಗಾರರು ಇವನ್ನು ಫಿಶ್ ಮೀಲ್ ಗಳಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡಬೇಕಾಗುತ್ತದೆ.  

ಮೀನಿಗೆ ಕಾರ್ಗಿಲ್ ಹೆಸರು ಬಂದಿದ್ದೇಗೆ..? 

ರಾಜ್ಯದ ಕರಾವಳಿಯಲ್ಲಿ 1999 ರಲ್ಲಿ ಈ ಮೀನುಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದವು. ಆಗ ಈ ಮೀನುಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಅದೇ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ನಡೆಯುತ್ತಿತ್ತು. ಬಲೆಗೆ ಬಿದ್ದ ಮೀನುಗಳ ಮೈ ಬಣ್ಣವೂ ಸೈನಿಕರ ಸಮವಸ್ತ್ರದ ಹಾಗೆ ಕಪ್ಪಗೆ ಇತ್ತು. ಹಾಗಾಗಿ, ಮೀನುಗಾರರು ಕೂಡ ಇದನ್ನ ಕಾರ್ಗಿಲ್ ಮೀನು ಎಂದು ಕರೆದಿದ್ದಾರೆ ಎನ್ನಲಾಗ್ತಿದೆ. ಪ್ರತಿ ಬಾರಿಯೂ ಆಳಸಮುದ್ರದಲ್ಲಿ ಈ ಮೀನುಗಳು ಸಿಗುತ್ತವೆ. ಇವು ರಾಶಿ ರಾಶಿಯಾಗಿ ಬಲೆಗೆ ಬಿದ್ದುವಂದ್ರೆ ಮೀನುಗಾರರಿಗೆ ದೊಡ್ಡ ಹೊಡೆತ. ಈ ಬಾರಿ ಆಳ ಸಮುದ್ರಕ್ಕೆ ಹೋದ ಬೋಟ್ ಗಳಿಗೆ 60 ಶೇ.ಕ್ಕಿಂತ ಹೆಚ್ಚು ಇದೇ ಮೀನು ಸಿಕ್ಕಿದ್ದು ಇದರಿಂದ ದೊಡ್ಡ ನಷ್ಟವಾಗಿದೆ ಎನ್ನುತ್ತಿದ್ದಾರೆ. ದಿನಕ್ಕೆ ಏನಿಲ್ಲಾಂದ್ರೂ 60-70 ಟನ್ ಕಾರ್ಗಿಲ್ ಮೀನು ಮಂಗಳೂರು ಬಂದರಿಗೆ ಬರುತ್ತೆ ಅಂದ್ರೆ ಮಲ್ಪೆ, ಕಾರವಾರ ಕಡೆಗೆ ಎಷ್ಟಿರಾಕಿಲ್ಲ ಈ ಮೀನುಗಳ ರಾಡಿ.. ಕರಾವಳಿಯ ಉದ್ದಕ್ಕೂ ಈ ಮೀನುಗಳ ದಾಳಿಯಿಂದಾಗಿ ಇತರೇ ಮೀನು ಸಿಗೋದು ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಹಿಂದೆಲ್ಲಾ ಅಕ್ಟೋಬರ್, ನವಂಬರ್ ಬಂತೂಂದ್ರೆ ಬೂತಾಯಿ, ಬಂಗುಡೆ ರಾಶಿ ರಾಶಿ ಬರುತ್ತೆ.. ಈ ಬಾರಿ ಇನ್ನೂ ಆ ಪರಿ ಮೀನು ಬಂದಿಲ್ಲ ! ಬಂದರಿನಲ್ಲಿ ಬರೀಯ ಕಾರ್ಗಿಲ್ ಫಿಶ್ ಮಾತ್ರ ಕಾಣಿಸತ್ತೆ..!