ವಿದ್ಯುತ್ ಶಾಕ್ ಗೆ ಸಾವನ್ನಪ್ಪಿದ್ದ ಸಿಬ್ಬಂದಿ ; ತಿಂಗಳಲ್ಲೇ ಅಗಲಿದ ಯುವಕನ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರ 

24-07-22 07:12 pm       Mangalore Correspondent   ಕರಾವಳಿ

ವಿದ್ಯುತ್ ಶಾಕ್ ಹೊಡೆದು ಅಕಾಲಿಕ ಸಾವನ್ನಪ್ಪಿದ್ದ ತೊಕ್ಕೊಟ್ಟು ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಯ ಉದ್ಯೋಗಿ ಇಲ್ಯಾಸ್ ಮಹಮ್ಮದ್ ಹರೇಕಳ ಸ್ಮರಣಾರ್ಥ ತಿಂಗಳೊಂದರಲ್ಲೇ ಬೃಹತ್ ರಕ್ತದಾನ ಶಿಬಿರ ತೊಕ್ಕೊಟ್ಟಿನಲ್ಲಿ ನಡೆದಿದ್ದು, ಅಗಲಿದ ಸಿಬ್ಬಂದಿಯ ಮೇಲೆ ಮಾಲಕರು ತೋರಿದ ಪ್ರೀತಿ, ಗೌರವಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಉಳ್ಳಾಲ, ಜು.24 : ವಿದ್ಯುತ್ ಶಾಕ್ ಹೊಡೆದು ಅಕಾಲಿಕ ಸಾವನ್ನಪ್ಪಿದ್ದ ತೊಕ್ಕೊಟ್ಟು ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಯ ಉದ್ಯೋಗಿ ಇಲ್ಯಾಸ್ ಮಹಮ್ಮದ್ ಹರೇಕಳ ಸ್ಮರಣಾರ್ಥ ತಿಂಗಳೊಂದರಲ್ಲೇ ಬೃಹತ್ ರಕ್ತದಾನ ಶಿಬಿರ ತೊಕ್ಕೊಟ್ಟಿನಲ್ಲಿ ನಡೆದಿದ್ದು, ಅಗಲಿದ ಸಿಬ್ಬಂದಿಯ ಮೇಲೆ ಮಾಲಕರು ತೋರಿದ ಪ್ರೀತಿ, ಗೌರವಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ತೊಕ್ಕೊಟ್ಟಿನ ಸಾಗರ್ ಕಲೆಕ್ಷನ್ ಬಟ್ಟೆ ಮಳಿಗೆಯಲ್ಲಿ ಕಳೆದ 15 ವರುಷದಿಂದ ಉದ್ಯೋಗಿಯಾಗಿದ್ದ ಇಲ್ಯಾಸ್ ಮಹಮ್ಮದ್ ಅವರು ಕಳೆದ ತಿಂಗಳ 24 ರಂದು ಸಂಜೆ ಮಾವಿನ ಮರ ಏರಿ ಕಾಯಿ ಕೀಳುತ್ತಿದ್ದ ವೇಳೆ ಹೈಟೆನ್ಷನ್ ತಂತಿ ತಗುಲಿ ಮರದಲ್ಲೇ ದಾರಣ ಸಾವನ್ನಪ್ಪಿದ್ದರು. ಅಗಲಿದ ಪ್ರೀತಿಯ ಉದ್ಯೋಗಿಯ ಸ್ಮರಣಾರ್ಥವಾಗಿ ಸಾಗರ್ ಕಲೆಕ್ಷನ್ ತೊಕ್ಕೊಟ್ಟು, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಮತ್ತು ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಯ ರಕ್ತನಿಧಿ ಸಂಸ್ಥೆಯವರು ಜೊತೆ ಸೇರಿ ಇಂದು ತೊಕ್ಕೊಟ್ಟಿನಲ್ಲಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು.  ಶಿಬಿರದಲ್ಲಿ ಅನೇಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡುವಂತೆ ಪ್ರೇರೇಪಿಸಲು ರಕ್ತದಾನಿಗಳಿಗೆ ಆಕರ್ಷಕ ಉಡುಗೊರೆಯನ್ನೂ ನೀಡಲಾಯಿತು. 

ಸಾಗರ್ ಕಲೆಕ್ಷನ್ಸ್ ಪಾಲುದಾರ ಅಬ್ದುಲ್ ರಹಿಮಾನ್ ಮಾತನಾಡಿ ಇಲ್ಯಾಸ್ ಅವರು ಸ್ನೇಹಜೀವಿಯಲ್ಲದೆ, ಪರೋಪಕಾರಿಯಾಗಿದ್ದರು. ಅವರ ಹೆಸರಲ್ಲೇ ಜಾತಿ, ಧರ್ಮ ಮೀರಿ ಸಮಾಜಕ್ಕೆ ಅತ್ಯಗತ್ಯ ಇರುವ ರಕ್ತವನ್ನ ಕ್ರೋಢೀಕರಿಸುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದರು. 

ಸ್ಥಳೀಯ ಶಾಸಕ ಯು.ಟಿ ಖಾದರ್, ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಮಂಗಳೂರು ನಗರ ಡಿಸಿಪಿ ದಿನೇಶ್ ಕುಮಾರ್, ಬಿಜೆಪಿ ಮುಖಂಡ ಚಂದ್ರಹಾಸ್ ಉಳ್ಳಾಲ್, ಸಾಗರ್ ಕಲೆಕ್ಷನ್ ಪಾಲುದಾರ ಇಸ್ಮಾಯಿಲ್, ಸಮಾಜ ಸೇವಕರಾದ ಝಾಕಿರ್ ಇಕ್ಲಾಸ್ ಮೊದಲಾವರು ಉಪಸ್ಥಿತರಿದ್ದರು.

Ullal Youth dies of electrocution, family conduct mass blood camp on the day of his death anniversary.