ಕಲಾವಿದರ ಕೈಚಳಕ ; ಗೋಡೆಯಲ್ಲಿ ಎದ್ದು ಕುಳಿತ ಮೀನು ವ್ಯಾಪಾರಿ ಮಹಿಳೆ !

03-10-20 12:27 pm       Mangalore Correspondent   ಕರಾವಳಿ

ಮೀನು ವ್ಯಾಪಾರದ ವೃತ್ತಿ ಮಾಡುವ ಮಹಿಳೆಯ ಚಿತ್ರವನ್ನು ಕಲಾವಿದರು ಉರ್ವ ಮೀನು ಮಾರ್ಕೆಟ್ ಗೋಡೆಯಲ್ಲಿ ಚಿತ್ರಿಸಿದ್ದು ಈಗ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ. 

ಮಂಗಳೂರು, ಅಕ್ಟೋಬರ್ 03: ತಮ್ಮ ಜೀವ ಪಣಕ್ಕಿಟ್ಟು ಸಮುದ್ರದಲ್ಲಿ ಮೀನು ಹಿಡಿಯುವುದನ್ನೇ ವೃತ್ತಿಯಾಗಿಸಿಕೊಂಡವರು ಬೆಸ್ತರು. ಮೊಗವೀರ ಸಮುದಾಯದ ಶ್ರಮ ಜೀವನಕ್ಕೆ ಯಾವುದೇ ರೀತಿಯಲ್ಲು ಬೆಲೆ ಕಟ್ಟಲಾಗದು. ಇದೇ ಆಶಯದ ಹಿನ್ನೆಲೆಯಲ್ಲಿ ಮೀನು ವ್ಯಾಪಾರದ ವೃತ್ತಿ ಮಾಡುವ ಮಹಿಳೆಯ ಚಿತ್ರವನ್ನು ಕಲಾವಿದರು ಉರ್ವ ಮೀನು ಮಾರ್ಕೆಟ್ ಗೋಡೆಯಲ್ಲಿ ಚಿತ್ರಿಸಿದ್ದು ಈಗ ಸಾರ್ವಜನಿಕರ ಆಕರ್ಷಣೆಗೆ ಕಾರಣವಾಗಿದೆ. 

ಮಂಗಳೂರಿನ ಪಿಕ್ಸಿನ್ಸಿಲ್ ಎನ್ನುವ ಕಲಾವಿದರ ತಂಡ, ಮೊಗವೀರ ಸಮುದಾಯದ ಶ್ರಮ ಜೀವನವನ್ನು ನಾಗರಿಕ ಜಗತ್ತಿಗೆ ಸಾರುವ ನಿಟ್ಟಿನಲ್ಲಿ ಉರ್ವ ಮೀನು ಮಾರುಕಟ್ಟೆಯ ಗೋಡೆಯಲ್ಲಿ ಅಲ್ಲಿಯೇ ಮೀನು ಮಾರಾಟ ಮಾಡುವ ಮಹಿಳೆಯ ಚಿತ್ರವನ್ನು ರಚಿಸಿ ಗಮನ ಸೆಳೆದಿದ್ದಾರೆ. 

ಉರ್ವದಲ್ಲಿ ಮೀನು ಮಾರಾಟ ಮಾಡುವ ಹಿರಿಯ ಮಹಿಳೆಯೊಬ್ಬರ ಚಿತ್ರ ಇದಾಗಿದ್ದು, ಮೊಬೈಲ್‌ನಲ್ಲಿ ಫೋಟೊ ತೆಗೆದು ಅದನ್ನು ನೋಡಿಯೇ ಗೋಡೆಯಲ್ಲಿ ಚಿತ್ರಿಸಲಾಗಿದೆ. ತನ್ನ ಚಿತ್ರವನ್ನು ನೋಡಿದ ಆ ಮಹಿಳೆ ಕೂಡ ಸಂಭ್ರಮಿಸಿದ್ದಾರೆ. ಚಿತ್ರದಲ್ಲಿ ಮೀನು ಕಾರ್ಮಿಕ ಮಹಿಳೆಯ ಬಗ್ಗೆ ಕಾಳಜಿ ಹಾಗೂ ಮೀನಿನ ಬಗ್ಗೆ ಜಾಗೃತಿಯನ್ನು ಬಣ್ಣಗಳಲ್ಲಿ ಚಿತ್ರಿಸಲಾಗಿದೆ.  

ಇದೇ ರೀತಿ ಹಿರಿಯ ನಾಗರಿಕರೊಬ್ಬರ ಫೋಟೋ ತೆಗೆದು, ಅದನ್ನು ಉರ್ವಾ ಚಿಲಿಂಬಿಯಲ್ಲಿ ರಸ್ತೆ ಬದಿಯ ಗೋಡೆಯಲ್ಲಿ ಚಿತ್ರಿಸಲಾಗಿದೆ. ಇದರಲ್ಲಿ ಯುವ ಜನರನ್ನು ಉದ್ದೇಶಿಸಿ, ‘ಇಟ್ಸ್ ಯೂ ಟುಮಾರೊ’ ಎಂದು ಸಂದೇಶ ಬರೆಯಲಾಗಿದೆ. ಯಾರೂ ಹಿರಿಯರನ್ನು ಕಡೆಗಣಿಸದಿರಿ, ನಾಳೆ ನೀವೂ ಹಿರಿಯರ ಸ್ಥಾನಕ್ಕೆ ಹೋಗಲಿದ್ದೀರಿ ಎಂಬ ಚಿತ್ರಣವನ್ನು ಕೊಡಲಾಗಿದೆ. ಪೃಥ್ವಿರಾಜ್ ಮರೋಳಿ ನೇತೃತ್ವದ ಕಲಾವಿದರ ತಂಡದಲ್ಲಿ ಅಜೇಶ್ ಸಜಿಪ, ನಿತೇಶ್ ಕನ್ಯಾಡಿ, ವಿನೋದ್ ಚಿಲಿಂಬಿ ಹಾಗೂ ಅಭಿಜಿತ್ ದೇವಾಡಿಗ ಇದ್ದಾರೆ. ಈ ಚಿತ್ರಗಳನ್ನು ವೀಕ್ಷಿಸಿದ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ. 

ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ಅಲ್ಲಲ್ಲಿ ರಚಿಸುತ್ತಿದ್ದೇವೆ. ಉರ್ವದಲ್ಲಿ ಮೀನು ಮಾರುವ ಮಹಿಳೆಯ ಚಿತ್ರವನ್ನು ಮೂರು ದಿನದಲ್ಲಿ ಪೂರ್ಣಗೊಳಿಸಿದ್ದೇವೆ. ಒಂದೊಂದು ಕಡೆ ಹೊಸ ಪರಿಕಲ್ಪನೆಯೊಂದಿಗೆ ಚಿತ್ರ ಮಾಡುತ್ತಿದ್ದೇವೆ ಎಂದು ಕಲಾವಿದ ಪೃಥ್ವಿರಾಜ್ ತಿಳಿಸಿದ್ದಾರೆ.

Video:

For More Photos: Photo Gallery: