ಕಳವುಗೈದ ಸೊತ್ತುಗಳು ಮರಳಿ ವಾರೀಸುದಾರರಿಗೆ ಹಸ್ತಾಂತರ

03-10-20 04:44 pm       Mangalore Correspondent   ಕರಾವಳಿ

2019-20 ರ ಸಾಲಿನಲ್ಲಿ 9.05 ಕೋಟಿ ಮೌಲ್ಯದ ಸೊತ್ತುಗಳು ಕಳವಾಗಿದ್ದು ಅದರಲ್ಲಿ 5.37 ಕೋಟಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 03 : 2019-20ರ ಸಾಲಿನಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಆರೋಪಿಗಳಿಂದ ವಶಕ್ಕೆ ಪಡೆದ ಸೊತ್ತುಗಳ ಹಸ್ತಾಂತರ ಪ್ರಕ್ರಿಯೆ ನಗರದ ಪೊಲೀಸ್ ಗ್ರೌಂಡಿನಲ್ಲಿ ನಡೆಯಿತು. 

ಬಂದರು, ಪಾಂಡೇಶ್ವರ, ಕದ್ರಿ, ಕಾವೂರು, ಕಂಕನಾಡಿ, ಉಳ್ಳಾಲ, ಬಜ್ಪೆ, ಪಣಂಬೂರು ಹೀಗೆ ನಗರ ವ್ಯಾಪ್ತಿಯ ಠಾಣೆಗಳಲ್ಲಿ ಪೊಲೀಸರು ವಶಕ್ಕೆ ಪಡೆದ ಚಿನ್ನಾಭರಣಗಳು, ಬೈಕ್, ನಗದು ಹಣ, ಇನ್ನಿತರ ಪರಿಕರಗಳನ್ನು ಆಯಾ ಪ್ರಕರಣದ ದೂರುದಾರರಿಗೆ ಹಸ್ತಾಂತರಿಸಲಾಯಿತು. ಸೊತ್ತುಗಳನ್ನು ಸಾಂಕೇತಿಕವಾಗಿ ಕಮಿಷನರ್ ವಿಕಾಸ್ ಕುಮಾರ್ ವಾರೀಸುದಾರರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕೆಲವರು ತಮ್ಮ ಚಿನ್ನದ ಆಭರಣಗಳನ್ನು ನೋಡಿ ಭಾವುಕರಾದರು. ಕಳವುಗೈದ ಆರೋಪಿಗಳ ಫೋಟೊ ಸಹಿತ ಪ್ರದರ್ಶನಕ್ಕಿಡಲಾಗಿತ್ತು.

2019-20 ರ ಸಾಲಿನಲ್ಲಿ 9.05 ಕೋಟಿ ಮೌಲ್ಯದ ಸೊತ್ತುಗಳು ಕಳವಾಗಿದ್ದು ಅದರಲ್ಲಿ 5.37 ಕೋಟಿ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕಮಿಷನರ್ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.