ಅಕ್ರಮ ಗೋಸಾಗಾಟ ಸೃಷ್ಟಿಸಿದ ಅವಾಂತರ ; ಟೆಂಪೋ ಧಾವಂತಕ್ಕೆ ರಸ್ತೆಗೆ ಎಸೆಯಲ್ಪಟ್ಟ ಗೋವುಗಳು ! 

04-10-20 11:26 am       Mangaluru Correspondent   ಕರಾವಳಿ

ಗೋವುಗಳನ್ನು ಟೆಂಪೋದಲ್ಲಿ ಅಮಾನುಷವಾಗಿ ತುಂಬಿಸಿಕೊಂಡು ಸಾಗಿಸುತ್ತಿದ್ದ ವೇಳೆ ಗೋವುಗಳು ಒಂದೊಂದೇ ರಸ್ತೆಗೆ ಎಸೆಯಲ್ಪಟ್ಟು ಅವಾಂತರ ಸೃಷ್ಟಿಯಾದ ಘಟನೆ ನಗರದಲ್ಲಿ ನಡೆದಿದೆ. 

ಮಂಗಳೂರು, ಅಕ್ಟೋಬರ್ 4: ಗೋವುಗಳನ್ನು ಟೆಂಪೋದಲ್ಲಿ ಅಮಾನುಷವಾಗಿ ತುಂಬಿಸಿಕೊಂಡು ಸಾಗಿಸುತ್ತಿದ್ದ ವೇಳೆ ಗೋವುಗಳು ಒಂದೊಂದೇ ರಸ್ತೆಗೆ ಎಸೆಯಲ್ಪಟ್ಟು ಅವಾಂತರ ಸೃಷ್ಟಿಯಾದ ಘಟನೆ ನಗರದಲ್ಲಿ ನಡೆದಿದೆ. 

ಸುರತ್ಕಲ್ ಕಡೆಯಿಂದ ನಸುಕಿನ ವೇಳೆ ಅಕ್ರಮವಾಗಿ ಗೋವುಗಳನ್ನು ಕುದ್ರೋಳಿ ಕಸಾಯಿಖಾನೆಯತ್ತ ತರಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳ ಕಾರ್ಯಕರ್ತರು ಕೊಟ್ಟಾರ ಬಳಿ ತಡೆಯಲು ಯತ್ನಿಸಿದ್ದಾರೆ. ಆದರೆ, ಕಾರ್ಯಕರ್ತರನ್ನು ಲೆಕ್ಕಿಸದೆ ಟೆಂಪೋ ವೇಗವಾಗಿ ಧಾವಿಸಿದ್ದು ಈ ವೇಳೆ ಅಪಾಯಕಾರಿಯಾಗಿ ತುಂಬಿಸಿದ್ದ ಗೋವುಗಳು ಹಿಂಭಾಗದ ಬಾಗಿಲು ಓಪನ್ ಆಗಿ ರಸ್ತೆಗೆ ಎಸೆಯಲ್ಪಟ್ಟಿದೆ. ಕೊಟ್ಟಾರ, ಕುಂಟಿಕಾನ ಜಂಕ್ಷನ್, ಮಣ್ಣಗುಡ್ಡೆ ಬಳಿ ಒಂಬತ್ತು ಗೋವುಗಳು ಹೀಗೆ ರಸ್ತೆಗೆ ಬಿದ್ದು ನರಳಾಡಿವೆ. ಇಷ್ಟಾದರೂ, ಆರೋಪಿಗಳು ಟೆಂಪೋವನ್ನು ನಿಲ್ಲಿಸದೆ ಪರಾರಿಯಾಗಿದ್ದಾರೆ. 

ಕೊನೆಗೆ, ಬಜರಂಗದಳ ಕಾರ್ಯಕರ್ತರು ಮಣ್ಣಗುಡ್ಡೆ ಬಳಿ ರಸ್ತೆಗೆ ಬಿದ್ದ ಗೋವುಗಳನ್ನು ರಸ್ತೆಯಲ್ಲೇ ಕಟ್ಟಿ ಪ್ರತಿಭಟನೆ ನಡೆಸಿದ್ದಾರೆ.‌ ಕಾರ್ಯಕರ್ತರು ಬೆಳ್ಳಂಬೆಳಗ್ಗೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದು ಸ್ಥಳಕ್ಕಾಗಮಿಸಿದ ಬರ್ಕೆ ಠಾಣೆ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. 

ಟೆಂಪೋವನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸಬೇಕು, ಅದರಲ್ಲಿದ್ದ 30ಕ್ಕೂ ಹೆಚ್ಚು ಗೋವುಗಳನ್ನು ವಶಕ್ಕೆ ಪಡೆಯಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.‌ ಬಳಿಕ ಪೊಲೀಸರು ಟೆಂಪೋ ಮತ್ತು ಅದರಲ್ಲಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಅಲ್ಲಲ್ಲಿ ರಸ್ತೆಗೆ ಬಿದ್ದ ಒಂಬತ್ತು ಗೋವುಗಳನ್ನು ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಿದ್ದಾರೆ‌. 

ಹೀಗೆ ನೆಲಕ್ಕೆ ಬಿದ್ದ ಗೋವುಗಳಲ್ಲಿ ಹೆಚ್ಚಿನವು ಸಣ್ಣ ಪ್ರಾಯದ ಕರುಗಳು. ಕರುಗಳನ್ನು ಮಾಂಸ ಮಾಡಿ, ಮಟನ್ ಜೊತೆಗೆ ಬೆರೆಸುತ್ತಾರೆಂಬ ದೂರುಗಳಿವೆ. ಇದೇ ಕಾರಣಕ್ಕೆ ಗಂಡು ಕರುಗಳಿಗೆ ಭಾರೀ ಬೇಡಿಕೆ ಇದೆ. ನಿಯಮಿತವಾಗಿ ಮಟನ್ ಪೂರೈಕೆ ಆಗುವಲ್ಲಿ ಕರುಗಳ ಮಾಂಸವನ್ನು ಮಿಕ್ಸ್ ಮಾಡಲಾಗುತ್ತಿದೆ ಎನ್ನುವ ವಿಚಾರವನ್ನು ಅಲ್ಲಿನ ವ್ಯಾಪಾರಿಗಳೇ ಹೇಳುತ್ತಾರೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಆಹಾರ ಇಲಾಖೆ ಅಧಿಕಾರಿಗಳು ತಪಾಸಣೆಗೆ ಬರದೇ ಇರುವುದು ದಂಧೆಕೋರರಿಗೆ ಭಯ ಇಲ್ಲದಾಗಿದೆ. ದಿನವೂ ನಸುಕಿನ ವೇಳೆ ಅಕ್ರಮ ಗೋಸಾಗಾಟ ನಡೆಯುತ್ತಿದ್ದರೂ, ಕಡಿವಾಣ ಇಲ್ಲದಾಗಿದೆ.