ಪಚ್ಚನಾಡಿ ; ಗಾಂಜಾ ಮತ್ತಿನಲ್ಲಿ ತಲವಾರು ಕಾಳಗ, ಮನೆಗೆ ನುಗ್ಗಿ ದಾಂಧಲೆ ! 

04-10-20 05:41 pm       Mangaluru Correspondent   ಕರಾವಳಿ

ಗಾಂಜಾ ಮತ್ತಿನಲ್ಲಿ ಮನೆಗೆ ನುಗ್ಗಿದ ಯುವಕರ ತಂಡ ಮನೆಮಂದಿಗೆ ತಲವಾರು ತೋರಿಸಿ, ಬೆದರಿಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಪಚ್ಚನಾಡಿಯಲ್ಲಿ ನಡೆದಿದೆ. 

ಮಂಗಳೂರು, ಅಕ್ಟೋಬರ್ 4: ಗಾಂಜಾ ಮತ್ತಿನಲ್ಲಿ ಮನೆಗೆ ನುಗ್ಗಿದ ಯುವಕರ ತಂಡ ಮನೆಮಂದಿಗೆ ತಲವಾರು ತೋರಿಸಿ, ಬೆದರಿಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಪಚ್ಚನಾಡಿಯಲ್ಲಿ ನಡೆದಿದೆ. 

ಪಚ್ಚನಾಡಿಯಲ್ಲಿ ನಿನ್ನೆ ತಡರಾತ್ರಿ ಘಟನೆ ನಡೆದಿದ್ದು ಫ್ರಾನ್ಸಿಸ್ ಎಂಬವರ ಮನೆಗೆ ನುಗ್ಗಿ ತಂಡವೊಂದು ದಾಂಧಲೆ ನಡೆಸಿದೆ. ನಿತಿನ್ ಮತ್ತು ಮಹೇಶ್ ಎಂಬವರ ತಂಡ ತಲವಾರು ಹಿಡಿದು ದಾಂಧಲೆ ನಡೆಸಿರುವ ಘಟನೆ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 

ಸ್ಥಳೀಯರ ಮಾಹಿತಿ ಪ್ರಕಾರ, ನಿತಿನ್ ಎಂಬಾತ ಸ್ಥಳೀಯ ರೌಡಿಶೀಟರ್ ಆಗಿದ್ದು ಗಾಂಜಾ ಮತ್ತಿನಲ್ಲಿ ಪರಿಸರದಲ್ಲಿ ರೌಡಿಸಂ ನಡೆಸುತ್ತಿದ್ದಾನೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ರಾತ್ರಿ ವೇಳೆ ಮನೆಗೆ ನುಗ್ಗಿ ಹಲ್ಲೆ ನಡೆಸುತ್ತಾನೆ‌. ನಿನ್ನೆ ರಾತ್ರಿ ಫ್ರಾನ್ಸಿಸ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಆತನ ತಾಯಿಗೆ ತೀವ್ರ ಹಲ್ಲೆ ನಡೆಸಿದ್ದಾರೆ. ತಲವಾರು ಕಾಳಗದಲ್ಲಿ ಕಾರ್ತಿಕ್ ಎಂಬಾತನ ಕಾಲಿಗೆ ಕಡಿದಿದ್ದಾರೆ. ವಿಡಿಯೋದಲ್ಲಿ ತಲವಾರು ಹಿಡಿದು ತಳ್ಳಾಡುತ್ತಿರುವ ವಿಡಿಯೋ ಸೆರೆಯಾಗಿದೆ. ಪಚ್ಚನಾಡಿಯಲ್ಲಿ ಗಾಂಜಾ ವ್ಯಸನಿಗಳ ಗುಂಪು ಪ್ರತಿ ದಿನವೂ ರಾತ್ರಿ ವೇಳೆ ಸ್ಥಳೀಯರನ್ನು ತಲವಾರು ತೋರಿಸಿ ಬೆದರಿಸುತ್ತಿದೆ. ಪೊಲೀಸರ ನಿರ್ಲಕ್ಷ್ಯದಿಂದಲೇ ಈ ಭಾಗದಲ್ಲಿ ಗಾಂಜಾ ವ್ಯಸನಿಗಳು ಹೆಚ್ಚುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. 

ಪಚ್ಚನಾಡಿ, ಬಂದಲೆ ಪರಿಸರ ಅತ್ತ ಕಾವೂರು ಠಾಣೆ ಮತ್ತು ಕಂಕನಾಡಿ ಗ್ರಾಮಾಂತರ ವಾಮಂಜೂರು ಠಾಣೆಯ ನಡುವಲ್ಲಿ ಬರುತ್ತದೆ. ಹೀಗಾಗಿ ಪೊಲೀಸರು ಇಲ್ಲಿಗೆ ರೌಂಡ್ಸ್ ಬರುವುದಿಲ್ಲ. ಇದರಿಂದಾಗಿ ಪುಂಡು ಪೋಕರಿಗಳ ಕಾಟ ಹೆಚ್ಚಾಗಿದೆ ಎನ್ನುತ್ತಿದ್ದಾರೆ ಸ್ಥಳೀಯರು. ‌