ಗಡಿಭಾಗದಲ್ಲಿ ಜನರು ಸಂಚರಿಸಬಹುದು, ಬಸ್ ಸಂಚರಿಸಿದರೆ ಕೊರೊನಾ ಬರುತ್ತೆ...! ವಿಕ್ಷಿಪ್ತ ನೀತಿ !  

04-10-20 07:36 pm       Mangaluru Correspondent   ಕರಾವಳಿ

ಎರಡು ರಾಜ್ಯಗಳ ನಡುವೆ ಜನರು ಪ್ರಯಾಣ ಮಾಡಬಹುದು. ಆದರೆ ಬಸ್‌ಗಳು ಅತ್ತಿತ್ತ ಸಂಚಾರ ಮಾಡುವಂತಿಲ್ಲ. ಇದು ಕೇರಳ- ಕರ್ನಾಟಕ ಗಡಿಯಲ್ಲಿ ಜಾರಿಯಲ್ಲಿರುವ ವಿಚಿತ್ರ ನೀತಿ. 

ಮಂಗಳೂರು, ಅಕ್ಟೋಬರ್ 4: ಆಡಳಿತದ ಎಡಬಿಡಂಗಿ ನೀತಿ ಅಂದ್ರೆ ಇದೇ ನೋಡಿ. ಎರಡು ರಾಜ್ಯಗಳ ನಡುವೆ ಜನರು ಪ್ರಯಾಣ ಮಾಡಬಹುದು. ಆದರೆ ಬಸ್‌ಗಳು ಅತ್ತಿತ್ತ ಸಂಚಾರ ಮಾಡುವಂತಿಲ್ಲ. ಇದು ಕೇರಳ- ಕರ್ನಾಟಕ ಗಡಿಯಲ್ಲಿ ಜಾರಿಯಲ್ಲಿರುವ ವಿಚಿತ್ರ ನೀತಿ. 

ಲಾಕ್ಡೌನ್ ಬಳಿಕದ ಅನ್‌ಲಾಕ್- 3ರಲ್ಲಿಯೇ ದೇಶದಲ್ಲಿ ಜನರು ಹಾಗೂ ಸರಕಿನ ಅಂತಾರಾಜ್ಯ ಸಂಚಾರಕ್ಕೆ ಕೇಂದ್ರ ಸರ್ಕಾರ ಅವಕಾಶ ನೀಡಿತ್ತು. ಆದರೆ ಕೇರಳ ಸರಕಾರ ಮಾತ್ರ ಮೊಂಡುವಾದ ಮುಂದಿಟ್ಟು ಆರಂಭದಲ್ಲಿ ಜನರ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಜನರನ್ನು ಬಹಳಷ್ಟು ಸತಾಯಿಸಿದ ಬಳಿಕ ಬಿಜೆಪಿ ಹೈಕೋರ್ಟ್ ಮೆಟ್ಟಿಲೇರಿದ ತರುವಾಯ ಜನರ ಅಂತಾರಾಜ್ಯ ಪ್ರಯಾಣಕ್ಕೆ ಕೇರಳ ಸರ್ಕಾರ ಅನುಮತಿ ನೀಡಿತ್ತು. ಜನರ ಮತ್ತು ಖಾಸಗಿ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿದ್ದರೂ, ಸಾರ್ವಜನಿಕ ಸಾರಿಗೆ ಬಸ್ ಗಳ ಸಂಚಾರಕ್ಕೆ ಇನ್ನೂ ಅನುಮತಿ ಕೊಟ್ಟಿಲ್ಲ. ಕೇರಳದ ಬಸ್ ಹೊರಗೆ ಹೋಗಲು ಹಾಗೂ ಹೊರ ರಾಜ್ಯದ ಬಸ್‌ಗಳು ಕೇರಳಕ್ಕೆ ತೆರಳಲು ನಿರ್ಬಂಧ ಜಾರಿಯಲ್ಲಿದೆ. 

ಇದರಿಂದಾಗಿ ಮಂಗಳೂರು ಮತ್ತು ಕಾಸರಗೋಡು ನಡುವೆ ಇನ್ನೂ ಬಸ್ ಗಳ ಸಂಚಾರ ಆರಂಭಗೊಂಡಿಲ್ಲ. ಕೆಎಸ್ಸಾರ್ಟಿಸಿ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತೆ ಎನ್ನುತ್ತಿದ್ದರೂ, ಕೇರಳ ಸರಕಾರ ಆ ಬಗ್ಗೆ ನಿರ್ಣಯ ತೆಗೆದುಕೊಂಡಿಲ್ಲ. ಆಯಾ ಭಾಗದ ಬಸ್‌ಗಳು ಗಡಿ ಪ್ರದೇಶದ ವರೆಗೆ ಬಂದು ಹಿಂತಿರುಗುತ್ತವೆ. ಗಡಿಭಾಗದ ಪ್ರಯಾಣಿಕರು ಬಸ್ ಇಳಿದು ನಡೆದುಕೊಂಡೇ ಅತ್ತಿತ್ತ ಗಡಿ ದಾಟಿ ಹೋಗಬೇಕಾಗಿದೆ. 

ಕರ್ನಾಟಕ ಮತ್ತು ಕೇರಳ ಸರ್ಕಾರಗಳ ನೀತಿಯಿಂದ ಗಡಿ ಪ್ರದೇಶದ ಬಸ್ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಅಂತಾರಾಜ್ಯ ಬಸ್ ಸಂಚಾರ ಆರಂಭಿಸದ ಕಾರಣ ಅನಿವಾರ್ಯವಾಗಿ ಎರಡೆರಡು ಬಸ್ ಹಿಡಿದು ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇದು ಎರಡು ರಾಜ್ಯ ಸರ್ಕಾರಗಳ ಮಟ್ಟದಲ್ಲಿ ತೆಗೆದುಕೊಳ್ಳಬೇಕಾದ ತೀರ್ಮಾನ. ಅಂತಾರಾಜ್ಯ ಪ್ರಯಾಣಕ್ಕೆ ಕರ್ನಾಟಕ ಸರ್ಕಾರದ ಕಡೆಯಿಂದ ಯಾವುದೇ ಆಕ್ಷೇಪಣೆ ಇದ್ದಂತಿಲ್ಲ. ಕೇರಳದ ಕಡೆಯಿಂದ ಅನುಮತಿ ದೊರೆತರೆ ಮಂಗಳೂರು- ಕಾಸರಗೋಡು ನಡುವೆ ಬಸ್ ಓಡಿಸಲು ನಾವು ಸಿದ್ದವಾಗಿದ್ದೇವೆ’ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಎಸ್.ಅರುಣ್ ಹೇಳಿದ್ದಾರೆ. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಮತ್ತೆ 144 ಸೆಕ್ಷನ್ ಜಾರಿಗೊಳಿಸಿದ್ದು ನಾಲ್ಕರಿಂದ ಹೆಚ್ಚು ಜನ ಒಂದು ಪ್ರದೇಶದಲ್ಲಿ ಸೇರಬಾರದು ಎನ್ನೋ ಸೂಚನೆ ನೀಡಲಾಗಿದೆ. ಹೀಗಾಗಿ ಅತ್ತ ಕಡೆಯಿಂದ ಸದ್ಯಕ್ಕೆ ಬಸ್ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆಯಿಲ್ಲ. ಅತ್ತಿತ್ತ ಜನ ಹೋಗಬಹುದು‌. ಖಾಸಗಿ ವಾಹನಗಳಲ್ಲಿ ಸಂಚಾರ ಮಾಡಬಹುದು. ಸಾರ್ವಜನಿಕ ಸಾರಿಗೆ ಬಸ್ ಸಂಚರಿಸಿದರೆ ಕೊರೊನಾ ಬರುತ್ತೆ ಅನ್ನುವ ಸರಕಾರದ ವಿಚಿತ್ರ ನೀತಿ ಗಡಿಭಾಗದ ಜನರಲ್ಲಿ ನಗೆಪಾಟಲಿನ ವಿಷಯವಾಗಿದೆ.