ಯಡಿಯೂರಪ್ಪರಿಗೆ ಗಂಡಸ್ತನ ಇದ್ದರೆ ಮಗನ ಕಿಕ್ ಬ್ಯಾಕ್ ಬಗ್ಗೆ ತನಿಖೆ ನಡೆಸಲಿ ; ಐವನ್ ಡಿಸೋಜ ಸವಾಲು 

05-10-20 06:32 pm       Mangaluru Correspondent   ಕರಾವಳಿ

ಭ್ರಷ್ಟಾಚಾರ ವಿಚಾರದಲ್ಲಿ ದಾಳಿ ನಡೆಸುವುದಿದ್ದರೆ ಇವರಿಗೆ ಚುನಾವಣೆ ಸಂದರ್ಭದಲ್ಲಿಯೇ ನೆನಪಾಗುವುದೇ ? ಎಂದು ಕೆಪಿಸಿಸಿ ಸದಸ್ಯ ಐವನ್ ಡಿಸೋಜಾ ಪ್ರಶ್ನೆ ಮಾಡಿದ್ದಾರೆ.

ಮಂಗಳೂರು, ಅಕ್ಟೋಬರ್ 5: ಚುನಾವಣೆ ಸಂದರ್ಭದಲ್ಲಿ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ನಡೆಸಿರುವುದನ್ನು ಕೆಪಿಸಿಸಿ ಸದಸ್ಯ ಐವನ್ ಡಿಸೋಜಾ ಪ್ರಶ್ನೆ ಮಾಡಿದ್ದಾರೆ.

ಸಿಬಿಐ ದಾಳಿ ಬಿಜೆಪಿ ರಾಜಕೀಯ ಉದ್ದೇಶ ಹೊಂದಿದೆ.‌ ಇಡಿ, ಐ ಟಿ ಬಳಿಕ ಕೇಂದ್ರ ಸರಕಾರ ಈಗ ಸಿಬಿಐಯನ್ನು ದುರ್ಬಳಕೆ ಮಾಡಿದೆ. ದ್ವೇಷ ರಾಜಕಾರಣದಿಂದ ಈ ದಾಳಿ ನಡೆಸಲಾಗಿದೆ. ಈ ದಾಳಿ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಕಟುವಾಗಿ ಟೀಕಿಸಿದ್ದಾರೆ. ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.  

ಉಪ ಚುನಾವಣೆಗೆ ಮೊದಲೇ ಬಿಜೆಪಿ ತನ್ನ ಸೋಲು ಒಪ್ಪಿಕೊಂಡಿದೆ. ಸೋಲಿನ ಭಯದಿಂದ ಸಿಬಿಐ ದಾಳಿ ನಡೆಸಿದೆ‌. ಭ್ರಷ್ಟಾಚಾರ ವಿಚಾರದಲ್ಲಿ ದಾಳಿ ನಡೆಸುವುದಿದ್ದರೆ ಇವರಿಗೆ ಚುನಾವಣೆ ಸಂದರ್ಭದಲ್ಲಿಯೇ ನೆನಪಾಗುವುದೇ ? ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸುವುದಿದ್ದರೆ ಮುಖ್ಯಮಂತ್ರಿ ತಮ್ಮ ಮಗನ ಬಗ್ಗೆ ತನಿಖೆ ನಡೆಸಲಿ. ತಾಕತ್ತಿದ್ದರೆ ತಮ್ಮ ಮಗ ಕಿಕ್ ಬ್ಯಾಕ್ ಪಡೆದ ಬಗ್ಗೆ ತನಿಖೆಗೆ ಆದೇಶಿಸಲಿ. ಯಡಿಯೂರಪ್ಪ ಅವರಿಗೆ ಗಂಡಸ್ತನ ಇದ್ರೆ ತಮ್ಮ ಮಗ 17 ಕೋಟಿ ರೂಪಾಯಿ ಕಿಕ್ ಬ್ಯಾಕ್ ಪಡೆದ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ಸವಾಲು ಹಾಕಿದ್ದಾರೆ. 

ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಆರ್ ಟಿ ಜಿ ಎಸ್ ಮುಖಾಂತರ ಲಂಚ ಪಡೆದಿದ್ದಾರೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಕಾಂಗ್ರೆಸ್ ಒತ್ತಾಯಿಸುತ್ತದೆ. ಈ ಪ್ರಕರಣದಲ್ಲಿ ಬಿಜೆಪಿಯ ಹಲವರ ಮೇಲೆ ತನಿಖೆ ಆಗಬೇಕಿದೆ ಎಂದು ಐವನ್ ಡಿಸೋಜ ಒತ್ತಾಯಿಸಿದ್ದಾರೆ.