ಅಕ್ರಮ ಗೋಹತ್ಯೆ, ಗೋಸಾಗಾಟ ನಿಯಂತ್ರಿಸದಿದ್ದರೆ  ಬಜರಂಗದಳ ಸಹಿಸಲ್ಲ ; ಶಾಂತಿ ಕದಡಿದರೆ ಜಿಲ್ಲಾಡಳಿತವೇ ಹೊಣೆ ; ಶರಣ್ ಪಂಪ್ವೆಲ್ 

05-10-20 08:13 pm       Mangaluru Correspondent   ಕರಾವಳಿ

ಜಿಲ್ಲೆಯಲ್ಲಿ ಇನ್ನೂ ಗೋ ಕಳ್ಳತನ, ಅಕ್ರಮ ಗೋ ಹತ್ಯೆ ಮುಂದುವರಿದ್ರೆ ಬಜರಂಗದಳ ಸಹಿಸಲ್ಲ. ಜಿಲ್ಲಾಧಿಕಾರಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ. 

ಮಂಗಳೂರು, ಅಕ್ಟೋಬರ್ 5: ಜಿಲ್ಲೆಯಲ್ಲಿ ಅಕ್ರಮ ಗೋ ಕಳ್ಳತನ, ಗೋಹತ್ಯೆ ಹೆಚ್ಚುತ್ತಿದ್ದು ಜಿಲ್ಲಾಡಳಿತ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಜಿಲ್ಲಾಡಳಿತ ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ ಬಜರಂಗದಳ ಕಾರ್ಯಕರ್ತರು ರಸ್ತೆಗಿಳಿಯಬೇಕಾಗುತ್ತದೆ. ಕಾರ್ಯಕರ್ತರೇ ಗೋಹತ್ಯೆಗೆ ನಿಯಂತ್ರಣ ಹೇರಲಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಶರಣ್ ಪಂಪ್ವೆಲ್ ಎಚ್ಚರಿಸಿದ್ದಾರೆ. 

ಮಂಗಳೂರಿನ ಕದ್ರಿಯಲ್ಲಿರುವ ವಿಹಿಂಪ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಶರಣ್ ಪಂಪ್ವೆಲ್, ಜಿಲ್ಲೆಯಲ್ಲಿ ಇನ್ನೂ ಗೋ ಕಳ್ಳತನ, ಅಕ್ರಮ ಗೋ ಹತ್ಯೆ ಮುಂದುವರಿದ್ರೆ ಬಜರಂಗದಳ ಸಹಿಸಲ್ಲ. ಜಿಲ್ಲಾಧಿಕಾರಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಳೆದ ಒಂದು ತಿಂಗಳಲ್ಲಿ ಮಂಗಳೂರಿನ ವಿವಿಧ ಠಾಣೆಗಳಲ್ಲಿ ಅಕ್ರಮ ಗೋಸಾಗಾಟ ವಿಚಾರದಲ್ಲಿ ಹಲವಾರು ಪ್ರಕರಣ ದಾಖಲಾಗಿದೆ. ಹಿಂದೆಲ್ಲಾ ಟೆಂಪೋದಲ್ಲಿ ಗೋಸಾಗಾಟ ನಡೆಯುತ್ತಿತ್ತು. ಈಗ, ಸ್ವಿಫ್ಟ್ ಕಾರು, ಇನ್ನೋವಾಗಳಲ್ಲಿ ಅಕ್ರಮವಾಗಿ ಗೋವುಗಳನ್ನು ಸಾಗಿಸಲಾಗುತ್ತಿದೆ. ಗೋಸಾಗಣೆ ಮಾಫಿಯಾ ಹಿಂದೆ ದೊಡ್ಡ ಜಾಲವೇ ಇದೆ. ಇದನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ವಿಶೇಷ ರೀತಿಯ ತಂಡ ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ. 

ಅಕ್ರಮ ಗೋಸಾಗಾಟ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಎರಡು ದಿನಗಳ ಹಿಂದೆ ಟೆಂಪೋದಲ್ಲಿ ದನ ಸಾಗಾಟ ಮಾಡುತ್ತಿದ್ದಾಗ ಐದಾರು ಕರುಗಳು ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟಿದ್ದವು. ಕುದ್ರೋಳಿ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದಾಗ ಕರುಗಳು ರಸ್ತೆಗೆ ಬಿದ್ದು ನರಳಾಡಿದ್ದವು. ಇದನ್ನು ಖಂಡಿಸಿ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರೂ, ಪೊಲೀಸರು ಅವರ ವಿರುದ್ಧ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಇಂತಹ ಕೃತ್ಯಗಳು ಮುಂದುವರಿದರೆ ಬಜರಂಗದಳ ಸುಮ್ಮನಿರಲ್ಲ. ಇದರಿಂದ ಜಿಲ್ಲೆಯ ಶಾಂತಿ ಕದಡಿದರೆ ಅದಕ್ಕೆ ಜಿಲ್ಲಾಡಳಿತವೇ ಹೊಣೆಯಾಗಬೇಕು ಎಂದು ಎಚ್ಚರಿಸಿದರು. 

ಸುದ್ದಿಗೋಷ್ಟಿಯಲ್ಲಿ ಬಜರಂಗದಳ ಸಂಚಾಲಕ ಭುಜಂಗ ಕುಲಾಲ್, ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಜಿಲ್ಲಾ ಉಪಾಧ್ಯಕ್ಷ ಮನೋಹರ ಸುವರ್ಣ, ಪ್ರದೀಪ್ ಪಂಪ್ವೆಲ್, ಗುರುಪ್ರಸಾದ್ ಉಳ್ಳಾಲ್ ಉಪಸ್ಥಿತರಿದ್ದರು.