ಅ.15ರ ಬಳಿಕ ಕೊರೊನಾ ನಿರ್ಬಂಧ ಸಡಿಲ, ಸಿನಿಮಾ, ಶಾಲೆ, ಕಾಲೇಜಿಗೆ ಅನುಮತಿ ಸಾಧ್ಯತೆ !

06-10-20 11:45 am       Mangalore Correspondent   ಕರಾವಳಿ

ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಚಟುವಟಿಕೆಗಳಿಗೆ ಅ.15ರ ನಂತರ ಹಂತ-ಹಂತವಾಗಿ ಅನುಮತಿ ಸಿಗಲಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ. 

ಮಂಗಳೂರು, ಅಕ್ಟೋಬರ್ 06: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ಕೊರೊನಾ ಸೋಂಕು ಎಲ್ಲೆಂದರಲ್ಲಿ ಹರಡುತ್ತಿದೆ. ಆದರೆ, ಜಿಲ್ಲಾಡಳಿತ ಕೆಲವೊಂದು ಚಟುವಟಿಕೆಗಳಿಗೆ ಅ.15ರ ಬಳಿಕ ಮುಕ್ತ ಅವಕಾಶ ನೀಡುವ ಸುಳಿವು ನೀಡಿದೆ. 

ಅ.15ರ ಬಳಿಕ ಕೆಲವೊಂದು ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುವುದು. ಆದರೆ ಕೋವಿಡ್ ನಿಯಮಗಳಲ್ಲಿ ಯಾವುದೇ ಸಡಿಲಿಕೆ ಇರುವುದಿಲ್ಲ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಇತ್ಯಾದಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಪ್ರಮುಖವಾಗಿ ಶಾಲೆ, ಕಾಲೇಜು ಸೇರಿದಂತೆ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳ ಚಟುವಟಿಕೆಗಳಿಗೆ ಅ.15ರ ನಂತರ ಹಂತ-ಹಂತವಾಗಿ ಅನುಮತಿ ಸಿಗಲಿದೆ. ಕಂಟೈನ್ಮೆಂಟ್‌ ವಲಯ ಹೊರತುಪಡಿಸಿ ಇತರೆಡೆ ಈಜುಕೊಳ, ಸಿನೆಮಾ ಮಂದಿರ/ ರಂಗಮಂದಿರ/ ಮಲ್ಟಿಪ್ಲೆಕ್ಸ್‌ಗಳನ್ನು, ಮನೋರಂಜನಾ ಉದ್ಯಾನಗಳು ಮತ್ತು ಇನ್ನಿತರ ಚಟುವಟಿಕೆಗೆ ಷರತ್ತು ಸಹಿತ ಅನುಮತಿ ನೀಡಲಾಗುತ್ತದೆ. ಒಳಾಂಗಣ ಸ್ಥಳಗಳಲ್ಲಿ 200 ಜನರ ಪರಿಮಿತಿಗೆ ಒಳಪಟ್ಟು ಸಭಾಭವನದ ಒಟ್ಟು ಸಾಮರ್ಥ್ಯದ ಗರಿಷ್ಠ ಶೇ. 50ರಷ್ಟಕ್ಕೆ ಅನುಮತಿ ದೊರೆಯಲಿದೆ.

ಜಿಲ್ಲೆಯೊಳಗೆ ಹಾಗೂ ಜಿಲ್ಲೆಯ ಹೊರಗೆ ಓಡಾಟಕ್ಕೆ ಯಾವುದೇ ನಿರ್ಬಂಧವಿರುವುದಿಲ್ಲ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಮೇಲೆ ನಿರ್ಬಂಧ ಮುಂದುವರಿಯಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.