ಉಡುಪಿ ಕಾಂಗ್ರೆಸ್ ಪ್ರತಿಭಟನೆ ; ಡಿಕೆಶಿ ಬಳಿ 57 ಲಕ್ಷ ಸಿಕ್ಕಿದ್ದಲ್ಲವೇ, ಬಿಜೆಪಿ ನಾಯಕರ ಬಳಿ ಕೋಟಿ ಸಿಗುತ್ತಿತ್ತು !

06-10-20 04:04 pm       Udupi Correspondent   ಕರಾವಳಿ

ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ದಾಳಿ ನಡೆಸಿದ್ದನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಿದ್ದಾರೆ. 

ಉಡುಪಿ, ಅಕ್ಟೋಬರ್ 06: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಸಿಬಿಐ ದಾಳಿ ನಡೆಸಿದ್ದನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಿದ್ದಾರೆ. 

ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಿಂದ ಮೆರವಣಿಗೆ ಹೊರಟ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಅಜ್ಜರಕಾಡಿನ ಸೈನಿಕ ಸ್ಮಾರಕದ ಬಳಿ ಪ್ರತಿಭಟನೆ ನಡೆಸಿದರು. ಅಲ್ಲಿ ಸುಮಾರು ಅರ್ಧ ಗಂಟೆ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. 

ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬಿಜೆಪಿಯವರು ಕಾಂಗ್ರೆಸ್ ಮುಖಂಡರ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ. ಪದೇ ಪದೇ ಸಿಬಿಐ ದಾಳಿ ನಡೆಸುವ ಮೂಲಕ ಕಾಂಗ್ರೆಸ್ ಮುಖಂಡರ ಧೈರ್ಯ ಕುಂದಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಆದರೆ ಬಿಜೆಪಿಯ ಈ ಪ್ರಯತ್ನ ಫಲ ನೀಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಡಿ.ಕೆ ಶಿವಕುಮಾರ್ ನಮ್ಮ ಮುಖಂಡರು. ಅವರ ಪರವಾಗಿ ನಾವೆಲ್ಲ ಇದ್ದೇವೆ, ಡಿ.ಕೆ ಶಿವಕುಮಾರ್ ಯಾವತ್ತಿದ್ದರೂ ಬಂಡೆಯೇ. ಅವರ ಅಷ್ಟೂ ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅವರಿಗೆ ಸಿಕ್ಕಿದ್ದು ಕೇವಲ 57 ಲಕ್ಷ ರುಪಾಯಿ ಮಾತ್ರ. ದೆಹಲಿ, ಬೆಂಗಳೂರು, ಮುಂಬೈ ಎಲ್ಲ ಸೇರಿ ಇಷ್ಟೇ ಸಿಕ್ಕಿದ್ದು ಅಲ್ಲವೇ ಎಂದು ಪ್ರಶ್ನೆ ಮಾಡಿದ್ರು. 

ಒಂದ್ವೇಳೆ ಇದೇ ರೀತಿ ಬಿಜೆಪಿ ಪಕ್ಷದ ಶಾಸಕರು ಮತ್ತು ಮಂತ್ರಿಗಳ ಮನೆ ಮೇಲೆ ದಾಳಿ ನಡೆಸಿದರೆ ಕೋಟ್ಯಂತರ ರೂ. ಸಿಗುತ್ತದೆ. ತಾಕತ್ತಿದ್ದರೆ ಆ ಕೆಲಸ ಮಾಡಿ ಎಂದು ಉಡುಪಿ ಕಾಂಗ್ರೆಸ್ ಮುಖಂಡರು ಸವಾಲು ಹಾಕಿದರು. ಅರ್ಧ ತಾಸು ರಸ್ತೆ ತಡೆ ನಡೆಸಿದ ಪ್ರತಿಭಟನಕಾರರನ್ನು ಬಳಿಕ ಪೊಲೀಸರು ಬಂಧಿಸಿ, ಪೊಲೀಸ್ ವ್ಯಾನ್ ನಲ್ಲಿ ಕರೆದೊಯ್ದರು. 

ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ , ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ, ಹರೀಶ ಕಿಣಿ, ಯತೀಶ್ ಕರ್ಕೇರ, ನವೀನ್ಚಂದ್ರ ಶೆಟ್ಟಿ, ಗೀತಾ ವಾಗ್ಲೆ, ಮುರಳಿ ಶೆಟ್ಟಿ, ವೆರೊನಿಕಾ ಕಾರ್ನೆಲಿಯೊ, ಜ್ಯೋತಿ ಹೆಬ್ಬಾರ್, ರೋಶನಿ ಓಲಿವರ್ ಮತ್ತಿತರರು ಇದ್ದರು.