ಮುಡಿಪು ಗುಡ್ಡಕ್ಕೇ ಕನ್ನ ; ಮಣ್ಣಿನ ದಂಧೆ ಬಲುಜೋರು, ಪ್ರಭಾವಿಗಳ ಕಾರುಬಾರು !

06-10-20 07:49 pm       Mangalore Correspondent   ಕರಾವಳಿ

ವಿಚಿತ್ರ ಅಂದ್ರೆ, ಯಾವುದೇ ಲಗಾಮಿಲ್ಲದೆ ಮಣ್ಣನ್ನು ಮಾರಾಟ ಮಾಡುತ್ತಿರುವುದು. ಇಲ್ಲಿನ ದಂಧೆಗೆ ಯಾರ ತಡೆಯೂ ಇಲ್ಲ. ಕಳೆದ ಲಾಕ್ಡೌನ್ ಸಂದರ್ಭದಲ್ಲಿಯೂ ಜೆಸಿಬಿಗಳ ಮೊರೆತ ನಿರಂತರವಾಗಿತ್ತು. ಗುಡ್ಡವನ್ನು ಸಮತಟ್ಟು ಮಾಡುವ ನೆಪದಲ್ಲಿ ಖಾಸಗಿ ಮತ್ತು ಸರಕಾರಿ ಜಾಗವನ್ನು ಲೀಸ್ ಪಡೆದು ಮಣ್ಣನ್ನೇ ಮಾರಲಾಗುತ್ತಿದೆ.

ಮಂಗಳೂರು, ಅಕ್ಟೋಬರ್ 6: ಅದು ಅಂತಿಂಥ ದಂಧೆಯಲ್ಲ. ಪ್ರಕೃತಿಯಲ್ಲಿ ಸಿಗುವ ಖನಿಜ ಸಂಪತ್ತನ್ನೇ ಅಕ್ರಮವಾಗಿ ಮಾರಾಟ ಮಾಡುತ್ತಿರುವ ದಂಧೆ. ಆದರೆ, ಏನಿದು ಖನಿಜ, ಎಲ್ಲಿಗೆ ಒಯ್ಯುತ್ತಿದ್ದಾರೆ ಅನ್ನೋದ್ರ ಬಗ್ಗೆ ಖಚಿತ ಮಾಹಿತಿ ಯಾರಲ್ಲೂ ಇಲ್ಲ. ಬೃಹತ್ ಕಂಟೇನರ್ ಗಳಲ್ಲಿ ಮಣ್ಣನ್ನು ರಾತ್ರಿ ಹಗಲೆನ್ನದೆ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿರುವ ಅಕ್ರಮ.  

ಮಂಗಳೂರು ಹೊರವಲಯದ ಕೊಣಾಜೆ ಬಳಿಯ ಮುಡಿಪು ಆಸುಪಾಸಿನ ನೂರಾರು ಎಕ್ರೆ ವ್ಯಾಪ್ತಿಯಲ್ಲಿ ಗುಡ್ಡವನ್ನು ಅಗೆಯಲಾಗುತ್ತಿದ್ದು, ಮಣ್ಣನ್ನು ಜೆಸಿಬಿಯಲ್ಲಿ ತುಂಬಿಸಿ ಸಾಗಿಸಲಾಗುತ್ತಿದೆ. ನೇರವಾಗಿ ಕಂಟೇನರ್ ಲಾರಿಗಳಿಗೆ ಸುರಿದು ಬಿಗಿಯಾಗಿ ಹೊರಭಾಗದಿಂದ ಕಟ್ಟಲಾಗುತ್ತದೆ. ಒಳಗೇನಿದೆ ಅನ್ನುವುದೇ ಗೊತ್ತಾಗದ ಹಾಗೆ ಬಿಲ್ಡಪ್ ಮಾಡಿ, ಹೊರ ರಾಜ್ಯಗಳಿಗೆ ಕಳಿಸಲಾಗುತ್ತದೆ.

ಕೆಲವರ ಮಾಹಿತಿ ಪ್ರಕಾರ, ಈ ಮಣ್ಣನ್ನು ಆಂಧ್ರ ಪ್ರದೇಶ, ತಮಿಳ್ನಾಡಿಗೆ ಕಳಿಸಲಾಗುತ್ತದೆ. ಅಲ್ಲಿನ ಸಿಮೆಂಟ್ ತಯಾರಿಕಾ ಕಂಪನಿಗಳು ಈ ಮಣ್ಣನ್ನು ಖರೀದಿಸುತ್ತಿವೆ ಎನ್ನಲಾಗುತ್ತಿದೆ. ಸಿಮೆಂಟ್ ತಯಾರಿ ವೇಳೆ ಮಿಕ್ಸರ್ ಆಗಿ ಬಳಸಲು ಈ ಮಣ್ಣನ್ನು ಬಳಸಲಾಗುತ್ತಿದೆಯಂತೆ. ಮಣ್ಣಿನಲ್ಲಿ ಕಬ್ಬಿಣ ಮತ್ತು ಅಲ್ಯುಮಿನಿಯಂ ಅಂಶ ಇದ್ದು ಸಿಮೆಂಟ್ ತಯಾರಿಗೆ ಬಳಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿಮೆಂಟ್ ಗಟ್ಟಿಯಾಗುವುದಕ್ಕೆ ಒಂದು ರೀತಿಯ ಮಣ್ಣಿನ ಅಗತ್ಯವಿದೆ. ಅಂಥ ಮೌಲಿಕವಾದ ಮಣ್ಣು ಮುಡಿಪು ಗುಡ್ಡದಲ್ಲಿ ಇದೆ ಎನ್ನುತ್ತಾರೆ, ಭೂಗರ್ಭ ಶಾಸ್ತ್ರಜ್ಞರು.  

ವಿಚಿತ್ರ ಅಂದ್ರೆ, ಯಾವುದೇ ಲಗಾಮಿಲ್ಲದೆ ಮಣ್ಣನ್ನು ಮಾರಾಟ ಮಾಡುತ್ತಿರುವುದು. ಇಲ್ಲಿನ ದಂಧೆಗೆ ಯಾರ ತಡೆಯೂ ಇಲ್ಲ. ಕಳೆದ ಲಾಕ್ಡೌನ್ ಸಂದರ್ಭದಲ್ಲಿಯೂ ಜೆಸಿಬಿಗಳ ಮೊರೆತ ನಿರಂತರವಾಗಿತ್ತು. ಗುಡ್ಡವನ್ನು ಸಮತಟ್ಟು ಮಾಡುವ ನೆಪದಲ್ಲಿ ಖಾಸಗಿ ಮತ್ತು ಸರಕಾರಿ ಜಾಗವನ್ನು ಲೀಸ್ ಪಡೆದು ಮಣ್ಣನ್ನೇ ಮಾರಲಾಗುತ್ತಿದೆ. ಸರಕಾರಕ್ಕೆ ನಯಾ ಪೈಸೆಯ ಶುಲ್ಕವನ್ನು ಭರಿಸದೆ ಮಣ್ಣನ್ನು ಮಾರುತ್ತಿರುವುದು ಕಾನೂನು ಉಲ್ಲಂಘನೆ ಆಗಿದ್ದರೂ, ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಈ ಬಗ್ಗೆ ಕುರುಡು ನೀತಿ ಅನುಸರಿಸುತ್ತಿದೆ.

ಟನ್ ಮಣ್ಣಿಗೆ 2500 ರೂ.ಗೆ ಮಾರಾಟ !

ಮುಡಿಪಿನ ಮಣ್ಣಿಗೆ ತಮಿಳ್ನಾಡು, ಆಂಧ್ರಪ್ರದೇಶದ ಸಿಮೆಂಟ್ ಫ್ಯಾಕ್ಟರಿಗಳಲ್ಲಿ ಭಾರೀ ಬೇಡಿಕೆಯಿದೆ. ಒಂದು ಟನ್ ಮಣ್ಣನ್ನು 2500ರಿಂದ 3000 ರೂಪಾಯಿ ಬೆಲೆಗೆ ಖರೀದಿಸಲಾಗುತ್ತಿದೆ ಎನ್ನುವ ಮಾಹಿತಿಯಿದೆ. 40 ಟನ್ ಸಾಮರ್ಥ್ಯದ ಕಂಟೇನರ್ ಗಳಲ್ಲಿ ಮಣ್ಣು ತುಂಬಿಸಿ ಪ್ರತಿದಿನ ಒಯ್ಯಲಾಗುತ್ತಿದೆ. ಸಾಗಣೆ ವೆಚ್ಚ ಕಳೆದರೂ, 70 ಶೇಕಡಾ ಭರಪೂರ ಲಾಭ ದಂಧೆಯಲ್ಲಿದೆ ಎನ್ನುತ್ತಾರೆ ಈ ಬಗ್ಗೆ ತಿಳಿದವರು.

ವಿಶೇಷ ಅಂದ್ರೆ, ಹೀಗೆ ಮಣ್ಣು ಸಾಗಣೆಗೆ ಬರುವ ಕಂಟೇನರ್ ಲಾರಿಗಳೆಲ್ಲವೂ ತಮಿಳ್ನಾಡು, ಆಂಧ್ರಪ್ರದೇಶ ರಿಜಿಸ್ಟ್ರೇಶನ್ ಹೊಂದಿರುವಂಥವು. ದಂಧೆಯಲ್ಲಿ ತಮಿಳ್ನಾಡು ಮತ್ತು ಆಂಧ್ರ ಮೂಲದ ಗುತ್ತಿಗೆದಾರರು ಕೂಡ ಇದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸಿನ ಪ್ರಭಾವಿಗಳು ಶಾಮೀಲಾತಿ ಹೊಂದಿದ್ದಾರೆ. ಹೀಗಾಗಿ ರಾಜಕೀಯ ಬದಿಗಿಟ್ಟು ಐದಾರು ವರ್ಷಗಳಿಂದಲೂ ಈ ದಂಧೆ ರಾಜಾರೋಷವಾಗಿ ನಡೀತಿದೆ. ಈ ಬಗ್ಗೆ ಮಂಗಳೂರಿನ ಗಣಿ ಇಲಾಖೆ ಬಳಿ ಕೇಳಿದರೆ, ಕಲ್ಲು ಗಣಿಗಾರಿಕೆಗೆಂದು ಐದು ಮಂದಿ ಲೈಸನ್ಸ್ ಪಡೆದಿದ್ದಾರೆ. ಮಣ್ಣು ಸಾಗಾಟಕ್ಕೆ ಲೈಸನ್ಸ್ ಇಲ್ಲ ಎನ್ನುತ್ತಾರೆ.

ಕೇರಳದಲ್ಲಿ ಕಾನೂನು ಅಡ್ಡಿ

ಈ ಬಗ್ಗೆ ತಜ್ಞರ ಅಭಿಪ್ರಾಯ ಕೇಳಿದರೆ, ಇಂಥ ಮಣ್ಣು ಪಶ್ಚಿಮ ಘಟ್ಟಗಳ ತಪ್ಪಲು ಭಾಗದ ಉದ್ದಕ್ಕೂ ಇದೆಯಂತೆ. ಕೇರಳ- ಕರ್ನಾಟಕದ ಎರಡೂ ರಾಜ್ಯಗಳಲ್ಲಿ ಈ ಮಣ್ಣು ಇದೆ. ಹಿಂದೆ ಕೇರಳದಲ್ಲಿ ಇಂಥ ಮಣ್ಣಿನ ದಂಧೆ ಆಗ್ತಾ ಇತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಅಲ್ಲಿ ಕಾನೂನನ್ನು ಬಿಗಿಗೊಳಿಸಲಾಗಿದ್ದು, ಹೊರ ರಾಜ್ಯಗಳಿಗೆ ಮಣ್ಣು ಸಾಗಿಸಲು ಅವಕಾಶ ಇಲ್ಲ. ಹೀಗಾಗಿ ತಮಿಳ್ನಾಡು, ಆಂಧ್ರ ಮೂಲದ ದಂಧೆಕೋರರು ಕರ್ನಾಟಕದ ಕರಾವಳಿಗೆ ಬಂದಿದ್ದಾರೆ. ಈ ಭಾಗದ ಕೆಲವು ಪ್ರಭಾವಿಗಳನ್ನು ಮುಂದಿಟ್ಟು ದಂಧೆ ನಡೆಸುತ್ತಿದ್ದಾರೆ. ಒಟ್ಟು ದಂಧೆಯಲ್ಲಿ ಅಧಿಕಾರಿ ವರ್ಗದ ಜೊತೆಗೆ ಜನಪ್ರತಿನಿಧಿಗಳು, ಸ್ಥಳೀಯ ಪುಢಾರಿಗಳಿಂದ ತೊಡಗಿ ನೂರಾರು ಕೈಗಳ ಗಟ್ಟಿ ಹಿಡಿತ ಇದೆ.