ಎಸ್ಡಿಪಿಐ ಮುಖಂಡ ರಿಯಾಜ್ ಪರಂಗಿಪೇಟೆ ಮನೆಗೆ ಎನ್ಐಎ ದಾಳಿ ; 'ವಿಶನ್-2047 ಇಸ್ಲಾಮಿಕ್ ಇಂಡಿಯಾ' ಪ್ರಕರಣದಲ್ಲಿ ವಿಚಾರಣೆ

08-09-22 11:54 am       Mangalore Correspondent   ಕರಾವಳಿ

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡಿನಲ್ಲಿರುವ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರ‌ಂಗಿಪೇಟೆ ಮನೆಗೆ ದಾಳಿ ನಡೆಸಿದ್ದಾರೆ.

ಮಂಗಳೂರು, ಸೆ.8 : ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡಿನಲ್ಲಿರುವ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್ ಪರ‌ಂಗಿಪೇಟೆ ಮನೆಗೆ ದಾಳಿ ನಡೆಸಿದ್ದಾರೆ. ಮಾಹಿತಿ ಪ್ರಕಾರ, ಬಿಹಾರದಲ್ಲಿ ಇತ್ತೀಚೆಗೆ ಪ್ರಧಾನಿ ಆಗಮನದ ಸಂದರ್ಭದಲ್ಲಿ ಪತ್ತೆಯಾಗಿದ್ದ 'ವಿಶನ್ - 2047' ಕರಪತ್ರ ಪ್ರಕರಣ ಸಂಬಂಧಿಸಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗುತ್ತಿದೆ. 

ಬಿಸಿ ರೋಡ್ ಬಳಿಯ ಪರ್ಲಿಯಾ ಎಂಬಲ್ಲಿರುವ ರಿಯಾಜ್ ಪರಂಗಿಪೇಟೆ ಮನೆಗೆ ಇಂದು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಅಧಿಕಾರಿಗಳು ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆಯಲ್ಲಿ ತೊಡಗಿದ್ದಾರೆ. ಇದೇ ವೇಳೆ, ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರು ಎನ್ಐಎ ಗೋ ಬ್ಯಾಕ್ ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. 

ಕಳೆದ ಜುಲೈ 12 ರಂದು ಬಿಹಾರದ ಪಾಟ್ನಾಕ್ಕೆ ಪ್ರಧಾನಿ ಭೇಟಿ ನೀಡಿದ ಎರಡೇ ದಿನದಲ್ಲಿ ಪೊಲೀಸರು ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಅತ್ತರ್ ಪರ್ವೇಜ್ ಮತ್ತು ಮಹಮ್ಮದ್ ಜಲಾಲುದ್ದೀನ್ ಎಂಬವರ ಬಂಧನ ಆಗಿತ್ತು.‌ ಅವರಿಬ್ಬರು ಕೂಡ ಪಿಎಫ್ಐ ಮತ್ತು ಎಸ್ಡಿಪಿಐನಲ್ಲಿ ಸಕ್ರಿಯವಾಗಿದ್ದರು. ದಾಳಿ ವೇಳೆ, 25 ಕ್ಕೂ ಹೆಚ್ಚು ಕರಪತ್ರಗಳು ಪತ್ತೆಯಾಗಿದ್ದವು. ವಿಶನ್ - 2047 ಎನ್ನುವ ಹೆಸರಲ್ಲಿ ಬರಹಗಳಿದ್ದು ಭಾರತವನ್ನು ಇಸ್ಲಾಮೀಕರಣ ಮಾಡುವ ಅಜೆಂಡಾವನ್ನು ಬರೆಯಲಾಗಿತ್ತು. 

ದೇಶವನ್ನು ಮತ್ತೆ ತಮ್ಮ ವಶಕ್ಕೆ ಪಡೆಯಬೇಕು. ಬ್ರಿಟಿಷರ ಕಾರಣದಿಂದ ನಮ್ಮ ಅಧಿಕಾರ ಬಿಟ್ಟು ಹೋಗಿತ್ತು.‌ ದೇಶದ ಹತ್ತು ಶೇಕಡಾ ಮುಸ್ಲಿಮರು ನಮ್ಮ ಜೊತೆಗೆ ನಿಂತರೂ, ಅಧಿಕಾರ ಮರಳಿ ಪಡೆಯಬಹುದು ಎಂದು ಏಳು ಪುಟಗಳ ಬರಹಗಳಿದ್ದ ಕರಪತ್ರಗಳು ಪತ್ತೆಯಾಗಿದ್ದವು.‌ ತನಿಖೆಯ ಬಳಿಕ ಇದರ ಹಿಂದೆ ರಾಷ್ಟ್ರ ಮಟ್ಟದ ಪ್ರಬಲ ಷಡ್ಯಂತ್ರ ಇರುವುದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆಯನ್ನು ಎನ್ಐಎ ವಹಿಸಿಕೊಂಡ ಬಳಿಕ ಉತ್ತರ ಪ್ರದೇಶ ಸೇರಿ ಹಲವೆಡೆ ದಾಳಿ ನಡೆದಿದ್ದು ಹಲವರ ವಿಚಾರಣೆ ನಡೆಸಲಾಗಿದೆ. ಇದೀಗ ಅದೇ ಪ್ರಕರಣದಲ್ಲಿ ಎಸ್ಡಿಪಿಐ ರಾಷ್ಟ್ರೀಯ ಮುಖಂಡನೆಂದು ಗುರುತಿಸಲ್ಪಟ್ಟ ರಿಯಾಜ್ ಪರ‌ಂಗಿಪೇಟೆ ಮನೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನುವ ಪ್ರಾಥಮಿಕ ಮಾಹಿತಿಗಳಿವೆ. 

ಎರಡು ದಿನಗಳ ಹಿಂದೆ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಮೈಸೂರು, ಕೊಡಗು ಸೇರಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಎನ್ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದ್ದರು. ರಿಯಾಜ್ ಪರಂಗಿಪೇಟೆ ಮೇಲಿನ ದಾಳಿ ಪ್ರವೀಣ್ ಕೊಲೆ ಪ್ರಕರಣ ಸಂಬಂಧಿಸಿದ್ದಲ್ಲ ಎಂಬುದನ್ನು ಎಸ್ಪಿ ಋಷಿಕೇಶ್ ಸೋನವಾಣೆ ದೃಢಪಡಿಸಿದ್ದಾರೆ.

Mangalore NIA Raids house of SDPI leader Riyaz Farangipete in Bantwal in connection to to Probe Alleged PFI Terror Module Links. The National Investigation Agency is conducting searches across 30 locations in Bihar in connection with its probe into a suspected terror module allegedly linked to the Popular Front of India. Officials told News18 on condition of anonymity that the outfit is alleged to be running “arms training camps under the guise of martial arts training".