'ಕೊರೊನಾ ಔಷಧಿ'ಯೆಂದು ಜಾಹೀರಾತು ಕೊಟ್ಟಿದ್ದಕ್ಕೆ ಜಿಲ್ಲಾಧಿಕಾರಿಗೆ ದೂರು

07-10-20 05:35 pm       Mangalore Correspondent   ಕರಾವಳಿ

ಕೊರೊನಾ ಸೋಂಕಿಗೆ ಆಯುರ್ವೇದಿಕ್ ಔಷಧಿ ಇದೆಯೆಂದು ಜನರನ್ನು ದಾರಿ ತಪ್ಪಿಸುತ್ತಿರುವ ಫಾರ್ಮಸಿ ವಿರುದ್ಧ ನರೇಂದ್ರ ನಾಯಕ್ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. 

ಮಂಗಳೂರು, ಅಕ್ಟೋಬರ್ 07: ಕೊರೊನಾ ಸೋಂಕಿಗೆ ಆಯುರ್ವೇದಿಕ್ ಔಷಧಿ ಇದೆಯೆಂದು ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಿದ ಮಂಗಳೂರಿನ ಆಯುರ್ವೇದ ಫಾರ್ಮಸಿ ವಿರುದ್ಧ ವಿಚಾರವಾದಿ ನರೇಂದ್ರ ನಾಯಕ್ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. 

ಭಾರತ ಸರಕಾರದ ಡ್ರಗ್ ಏಕ್ಟ್ ಪ್ರಕಾರ ಈ ಔಷಧಿ ಕುಡಿದರೆ ಕೊರೊನಾ ಬರುವುದಿಲ್ಲ. ಕೊರೊನಾ ನಿವಾರಣೆ ಆಗಬಲ್ಲದು ಎಂದು ಜಾಹೀರಾತು ಪ್ರಕಟಿಸುವುದು ಕಾನೂನು ಉಲ್ಲಂಘನೆಯಾಗಿರುತ್ತದೆ. ಇಂತಹ ಜಾಹೀರಾತುಗಳು ಜನರನ್ನು ದಾರಿ ತಪ್ಪಿಸುತ್ತವೆ. ಕೊರೊನಾ ಬರದಂತೆ ತಡೆಗಟ್ಟುವ ಔಷಧಿ ಇದೆಯೆಂದು ಜನರನ್ನು ನಂಬಿಸುವ ಜಾಹೀರಾತು ಪ್ರಕಟ ಮಾಡುವಂತಿಲ್ಲ. ಇದನ್ನು ನಂಬಿ ಜನರು ಔಷಧಿ ತೆಗೆದುಕೊಂಡು ಸಮಸ್ಯೆ ಉದ್ಭವಿಸಿದರೆ ಯಾರು ಹೊಣೆ ? ಹೀಗೆ ಜಾಹೀರಾತು ಕೊಟ್ಟಿರುವ ಆಯುರ್ ವಿವೇಕ್ ಫಾರ್ಮಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ನರೇಂದ್ರ ನಾಯಕ್ ಆಗ್ರಹಿಸಿದ್ದಾರೆ. 

ಜಾಹೀರಾತಿನ ಪ್ರತಿಯನ್ನು ಜೊತೆಗಿಟ್ಟು ಅಪರ ಜಿಲ್ಲಾಧಿಕಾರಿಗೆ ನಾಯಕ್ ದೂರು ನೀಡಿದ್ದಾರೆ.