ಸಾಗರ ಕವಚ ; ಭಯೋತ್ಪಾದಕ ದಾಳಿ ಬಗ್ಗೆ ಕಾರ್ಯಾಚರಣೆ

07-10-20 08:48 pm       Headline Karnataka News Network   ಕರಾವಳಿ

ನಗರದ ವಿವಿಧೆಡೆ ಬುಧವಾರ 'ಸಾಗರ ಕವಚ' ಅಣಕು ಕಾರ್ಯಾಚರಣೆ ಹಮ್ಮಿಕ್ಕೊಳ್ಳಲಾಗಿದ್ದು, ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರವಾರ, ಅಕ್ಟೋಬರ್ 07 : ಭಯೋತ್ಪಾದಕರ ದಾಳಿ, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಿಶೀಲಿಸಲು ನಗರದ ವಿವಿಧೆಡೆ ಬುಧವಾರ  'ಸಾಗರ ಕವಚ'  ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಯಿತು. 

ವಿದ್ವಂಸಕ ಕೃತ್ಯಗಳನ್ನು ತಡೆಗಟ್ಟುವ  ಮುಂಜಾಗ್ರತಾ ಕ್ರಮಗಳನ್ನು ಯಾವ ರೀತಿ ಅನುಸರಿಸಬೇಕು ಮತ್ತು ಭದ್ರತಾ ದೃಷ್ಟಿಯಿಂದ ಪ್ರಸ್ತುತ ರಕ್ಷಣಾ ಕ್ರಮಗಳು ಹಾಗೂ ಸಿದ್ಧತೆಗಳು ಯಾವ ರೀತಿ ಸಮರ್ಥವಾಗಿವೆ ಎಂಬುದನ್ನು  ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವ ಉದ್ದೇಶದಿಂದ ರಾಜ್ಯ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪೊಲೀಸ್, ಭಾರತೀಯ ತಟ ರಕ್ಷಣಾ ದಳ ಹಾಗೂ ಭಾರತೀಯ ನೌಕಸೇನೆ ಜಂಟಿಯಾಗಿ ಅಕ್ಟೋಬರ್ 7 ಹಾಗೂ 8 ರಂದು ಸಾಗರ ಕವಚ ಅಣುಕು ಕಾರ್ಯಾಚರಣೆಯನ್ನು ನಡೆಸುತ್ತಿದೆ.

ಕಾರ್ಯಾಚರಣೆಯ ಭಾಗವಾಗಿ ಪೊಲೀಸರು ಕಾಳಿ ನದಿ ಸೇತುವೆಯ ಬಳಿ, ಬೈತಖೋಲ್ ಬಂದರಿಗೆ ಹೋಗುವ ದಾರಿಯಲ್ಲಿ, ರೈಲು ನಿಲ್ದಾಣ, ಕಡಲತೀರಗಳು, ಚರ್ಚ್, ಮಸೀದಿ, ದೇವಸ್ಥಾನಗಳಲ್ಲಿ ಹಾಗೂ ನಗರದ ವಿವಿಧ ಕಡೆಗಳಲ್ಲಿ ತಪಾಸಣೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ವಾಹನಗಳನ್ನು ಪರಿಶೀಲನೆ ಮಾಡಿದರು.

ಈ ಕಾರ್ಯಾಚರಣೆ ಗುರುವಾರವೂ ಮುಂದುವರಿಯಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು, ಜಿಲ್ಲಾಡಳಿತದ ಅಧಿಕಾರಿಗಳು ಮನವಿ ಮಾಡಿದ್ದಾರೆ.