ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದರೆ ಮಸಿ ಬಳಿಯುತ್ತೇವೆ ; ಮಿಥುನ್ ರೈ

08-10-20 04:18 pm       Mangalore Correspondent   ಕರಾವಳಿ

ಉತ್ತರ ಪ್ರದೇಶ ಎಂಬ ರಾಜ್ಯ ಭಾರತ ದೇಶದಲ್ಲಿ ಇದೆ ಎನ್ನುವುದಕ್ಕೆ ನಾಚಿಕೆ ಪಡುವ ಸ್ಥಿತಿ ಎದುರಾಗಿದ್ದು, ಯೋಗಿ ಆದಿತ್ಯನಾಥ್ ಮಂಗಳೂರಿಗೆ ಕಾಲಿಟ್ಟರೆ ಅವರಿಗೆ  ಕಪ್ಪು ಮಸಿ ಬಳಿಯುತ್ತೇವೆ ಎಂದು ಮಿಥುನ್ ರೈ ಕಿಡಿಕಾರಿದ್ದಾರೆ.

ಉಳ್ಳಾಲ, ಅಕ್ಟೋಬರ್ 08: ಹತ್ರಾಸ್ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮನೀಷಾ ವಾಲ್ಮೀಕಿಗೆ ನ್ಯಾಯ ಕೊಡಲು ಅಸಮರ್ಥರಾದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಖಾವಿ ಹಾಕಲು ಅಯೋಗ್ಯರಾಗಿದ್ದಾರೆ ಎಂದು ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಿಡಿಕಾರಿದ್ದಾರೆ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಸಮಿತಿ ಮಂಗಳೂರು ವಿದಾನಸಭಾ ಕ್ಷೇತ್ರ ವತಿಯಿಂದ ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ, ರೈತವಿರೋಧಿ ಮತ್ತು ಮಹಿಳಾ ದೌರ್ಜನ್ಯದ ವಿರುದ್ಧ ಗುರುವಾರ ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿ ಉದ್ದೇಶಿಸಿ ಅವರು ಮಾತನಾಡಿದರು.

ಹತ್ರಾಸ್ ಅತ್ಯಾಚಾರ ಘಟನೆಯ ಕುರಿತಂತೆ ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ ಹೇಳಲು ತೆರಳಿದ ರಾಹುಲ್ ಗಾಂಧಿ ಮೇಲೆ ಉತ್ತರ ಪ್ರದೇಶದ ಪೊಲೀಸರು ಹಲ್ಲೆಗೆ ಮುಂದಾಗಿದ್ದರು. ಹತ್ರಾಸ್ ಘಟನೆಯಲ್ಲಿ ಮಾಧ್ಯಮದ ಹಕ್ಕನ್ನು ಕಸಿಯುವ ಕಾರ್ಯವೂ ಯೋಗಿ ಸರಕಾರದಿಂದ ನಡೆದಿದೆ. ಉತ್ತರ ಪ್ರದೇಶ ಎಂಬ ರಾಜ್ಯ ಭಾರತ ದೇಶದಲ್ಲಿ ಇದೆ ಎನ್ನುವುದಕ್ಕೆ ನಾಚಿಕೆ ಪಡುವ ಸ್ಥಿತಿ ಎದುರಾಗಿದ್ದು, ಯೋಗಿ ಆದಿತ್ಯನಾಥ್ ಮಂಗಳೂರಿಗೆ ಕಾಲಿಟ್ಟರೆ ಅವರಿಗೆ  ಕಪ್ಪು ಮಸಿ ಬಳಿಯುವ ಕಾರ್ಯ ಯೂತ್ ಕಾಂಗ್ರೆಸ್ ನಡೆಸುತ್ತೆ ಎಂದು ಎಚ್ಚರಿಸಿದರು. 

ಇಷ್ಟೆಲ್ಲ ಆದರೂ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ. ಸರ್ವಾಧಿಕಾರಿ ಧೋರಣೆಗೆ ಜೀವಂತ ಉದಾಹರಣೆ ಮೋದಿ. ಹಿಟ್ಲರ್ ನಂತರ ನಮ್ಮ ದೇಶದ ಮೋದಿ ಸರ್ವಾಧಿಕಾರಿ ಆಗಿದ್ದಾರೆ. ಇಂದಿರಾ ಗಾಂಧಿಯವರು ಉಳುವವನೇ ಒಡೆಯನೆಂಬ ಕಾನೂನು ಜಾರಿ ಮಾಡಿದರೆ, ಉಳ್ಳವನೇ ಭೂಮಿಯ ಒಡೆಯ ಎಂಬ ನೀತಿ ಜಾರಿ ಮಾಡಿ ರೈತರ ಬೆನ್ನಿಗೆ ಚೂರಿ ಹಾಕುವ ಕೆಲಸ ಕೇಂದ್ರ ಸರಕಾರ ನಡೆಸುತ್ತಿದೆ ಎಂದು ಆರೋಪಿಸಿದರು. 

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಹತ್ರಾಸ್ ಅತ್ಯಾಚಾರ ಘಟನೆಯನ್ನು ಕಂಡ ದೇಶದ ಮಹಿಳೆಯರು ಕಣ್ಣಿಗೆ ಬಟ್ಟೆ ಕಟ್ಟಿ ಕುಳಿತಿದ್ದಾರೆ. ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಬೇಕು. ಅತ್ಯಾಚಾರಿಗಳನ್ನು ಸಾರ್ವಜನಿಕ ಗಲ್ಲಿಗೇರಿಸಬೇಕೆಂದು ಆಗ್ರಹಿಸಿದರು.

ಇಂಟಕ್ ರಾಷ್ಟ್ರೀಯ ಪ್ರ.ಕಾ. ರಾಕೇಶ್ ಮಲ್ಲಿ, ಮುಖಂಡರಾದ ದಿನಕರ್ ಶೆಟ್ಟಿ, ಮನೋಹರ್ ಶೆಟ್ಟಿ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಹಿಮಾನ್ ಕೋಡಿಜಾಲ್, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು, ಮುಖಂಡರಾದ ಎನ್.ಎಸ್ ಕರೀಂ, ಮಹಮ್ಮದ್ ಮುಸ್ತಾಫ ಹರೇಕಳ,ಪದ್ಮನಾಭ ನರಿಂಗಾನ, ತಾ.ಪಂ ಸದಸ್ಯೆ ಸುರೇಖ ಚಂದ್ರಹಾಸ್ ,ಮಾಜಿ ಉಳ್ಳಾಲ ನಗರ ಸದಸ್ಯ ದಿನೇಶ್ ರೈ ಮೊದಲಾದವರು ಇದ್ದರು.