ಕಾಂಗ್ರೆಸ್ ಕಚೇರಿಯಲ್ಲಿ ರಾಖಿ ಹಬ್ಬ ; ಕೋವಿಡ್ ನಿಯಮ ಉಲ್ಲಂಘಿಸಿದ ನಾಯಕರು !! 

03-08-20 04:39 pm       Mangalore Reporter   ಕರಾವಳಿ

ಎರಡು ದಿನಗಳ ಹಿಂದಷ್ಟೇ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೊರೊನಾ ಪಾಸಿಟಿವ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕಿತರೆಲ್ಲ ಸೆಲ್ಫ್ ಕ್ವಾರಂಟೈನ್ ಆಗುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದರೆ, ಇತ್ತ ಯುವ ಕಾಂಗ್ರೆಸ್ ನಾಯಕರು ಕೋವಿಡ್ ನಿಯಮ ತಮಗೆ ಅನ್ವಯ ಆಗೋದೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. 

ಮಂಗಳೂರು, ಆಗಸ್ಟ್ 3: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನಾಯಕರು ಮತ್ತೆ ಜವಾಬ್ದಾರಿ ಮರೆತು ವರ್ತಿಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಮಾಜಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಕೊರೊನಾ ಪಾಸಿಟಿವ್ ಆಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸಂಪರ್ಕಿತರೆಲ್ಲ ಸೆಲ್ಫ್ ಕ್ವಾರಂಟೈನ್ ಆಗುವಂತೆ ಜಿಲ್ಲಾಡಳಿತ ಮನವಿ ಮಾಡಿದ್ದರೆ, ಇತ್ತ ಯುವ ಕಾಂಗ್ರೆಸ್ ನಾಯಕರು ಕೋವಿಡ್ ನಿಯಮ ತಮಗೆ ಅನ್ವಯ ಆಗೋದೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ. 

ದ.ಕ‌. ಜಿಲ್ಲಾ ಮಹಿಳಾ ಕಾಂಗ್ರೆಸ್ ವತಿಯಿಂದ ಮಂಗಳೂರಿನ ಕದ್ರಿಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಇಂದು ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.  ಕಾರ್ಯಕ್ರಮದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಸಸ್ಯಗಳ ಬೀಜವುಳ್ಳ ಪರಿಸರ ಸ್ನೇಹಿ ರಾಖಿ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ 50ಕ್ಕೂ ಹೆಚ್ಚು ಮಂದಿ ಮಹಿಳಾ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು. 

ಜುಲೈ 31ರಂದು ಡಿಕೆ ಶಿವಕುಮಾರ್ ಮಂಗಳೂರಿಗೆ ಬಂದಿದ್ದಾಗ, ಐವನ್ ಡಿಸೋಜ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಮರುದಿನ ಐವನ್ ಗೆ ಕೋವಿಡ್ ಪಾಸಿಟಿವ್ ಆದಕಾರಣ ರಮಾನಾಥ ರೈ, ಯು.ಟಿ ಖಾದರ್ ಸೇರಿ ಜಿಲ್ಲೆಯ ಬಹುತೇಕ ನಾಯಕರು ಸೆಲ್ಫ್ ಕ್ವಾರಂಟೈನ್ ಆಗಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ಶಾಲೆಟ್ ಪಿಂಟೋ ಮತ್ತು ಮಿಥುನ್ ರೈ ಕೂಡ ಐವನ್ ಡಿಸೋಜ ನಿಕಟ ಸಂಪರ್ಕದಲ್ಲಿ ಓಡಾಡಿಕೊಂಡಿದ್ದರು. ಆದರೆ, ಇವರಿಬ್ಬರು ಕ್ವಾರಂಟೈನ್ ಒಳಗಾಗದೆ ಇಂದು ಸಾರ್ವಜನಿಕ ಕಾರ್ಯಕ್ರಮ ನಡೆಸುವ ಮೂಲಕ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಎರಡು ದಿನಗಳಿಂದ ಕಾಂಗ್ರೆಸ್ ಕಚೇರಿಯನ್ನು ಬಂದ್ ಮಾಡಿದ್ದರೂ ಮಿಥುನ್ ರೈ ಬಲವಂತವಾಗಿ ಬಾಗಿಲು ತೆರೆಸಿ ಕಾರ್ಯಕ್ರಮ ಮಾಡಿದ್ದಾರೆಂದು ಅಲ್ಲಿನ ಮೂಲಗಳು ಹೇಳಿವೆ. 

ಇಂದಿನ ಕಾರ್ಯಕ್ರಮದಲ್ಲಿ ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ವಿಶ್ವಾಸ್ ದಾಸ್, ಮನಪಾ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ, ಕೇಶವ ಮರೋಳಿ, ಝೀನತ್ ಬಂದರ್, ಅಶ್ರಫ್ ಬಜಾಲ್, ಮಾಜಿ ಸದಸ್ಯರಾದ ಪ್ರಕಾಶ್ ಸಾಲ್ಯಾನ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಹೈಲ್ ಕಂದಕ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿಗಳಾದ ಶಾಂತಲಾ ಗಟ್ಟಿ, ಮಂಜುಳಾ ನಾಯಕ್, ಶಶಿಕಲಾ ಪದ್ಮನಾಭ್, ನಮಿತಾ ರಾವ್, ಜೆಸಿಂತಾ ಆಲ್ಫ್ರೆಡ್, ರೂಪಾ ಚೇತನ್, ಚಂದ್ರಕಲಾ, ವಸಂತಿ, ಚೇತನ್, ಗಿರೀಶ್ ಶೆಟ್ಟಿ, ಅನ್ಸಾರುದ್ದೀನ್ ಸಾಲ್ಮರ, ಸಮರ್ಥ್ ಭಟ್, ಸವಾದ್ ಸುಳ್ಯ ಉಪಸ್ಥಿತರಿದ್ದರು. 

ಅಂದಹಾಗೆ, ಹಿಂದೆಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಇರಲಿಲ್ಲ. ಕಳೆದ ವರ್ಷದಿಂದ ರಾಖಿ ಹಬ್ಬ ನಡೆಸಲಾಗುತ್ತಿದೆ. ಈ ಬಾರಿ ಮಾತ್ರ ಗಡದ್ದಾಗಿಯೇ ಮಾಡಿದ್ದಾರೆ !