ಹಾಸ್ಟೆಲ್ ತೊರೆದು ಓಡಿ ಹೋಗಿದ್ದ ವಿದ್ಯಾರ್ಥಿನಿಯರು ಸುರಕ್ಷಿತ ವಾಪಸ್ ; ಚೆನ್ನೈ, ಪಾಂಡಿಚೇರಿ ತಿರುಗಾಡಿ ಸುಸ್ತಾಗಿ ಪೊಲೀಸರಿಗೆ ಶರಣು ಶರಣೆಂದರು !

24-09-22 09:16 pm       Mangalore Correspondent   ಕರಾವಳಿ

ಹಾಸ್ಟೆಲ್ ಕಿಟಕಿ ಮುರಿದು ಓಡಿ ಹೋಗಿ ಆತಂಕ ಮೂಡಿಸಿದ್ದ ಮೂವರು ವಿದ್ಯಾರ್ಥಿನಿಯರು ಕಡೆಗೂ ಸುರಕ್ಷಿತವಾಗಿ ಮರಳಿದ್ದಾರೆ.

ಮಂಗಳೂರು, ಸೆ.24: ಹಾಸ್ಟೆಲ್ ಕಿಟಕಿ ಮುರಿದು ಓಡಿ ಹೋಗಿ ಆತಂಕ ಮೂಡಿಸಿದ್ದ ಮೂವರು ವಿದ್ಯಾರ್ಥಿನಿಯರು ಕಡೆಗೂ ಸುರಕ್ಷಿತವಾಗಿ ಮರಳಿದ್ದಾರೆ. ದೂರದ ಚೆನ್ನೈನಲ್ಲಿದ್ದ ಮೂವರು ವಿದ್ಯಾರ್ಥಿನಿಯರನ್ನು ಮರಳಿ ಮಂಗಳೂರಿಗೆ ಪೊಲೀಸರು ಕರೆತಂದಿದ್ದಾರೆ. ಇಷ್ಟಕ್ಕೂ ಎರಡೇ ದಿನದಲ್ಲಿ ಇವರು ಮರಳಿ ಬರುವಂತಾಗಲು ಬಸ್ಸು, ರೈಲಿನಲ್ಲಿ ತಿರುಗಾಡಿ ಸುಸ್ತು ಹೊಡೆದಿದ್ದೇ ಕಾರಣವಂತೆ.

ಎರಡು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ಕೊಠಡಿಯಿಂದ ಕಿಟಕಿ ಮುರಿದು ಹೊರಗೆ ತೆರಳಿದ್ದ ವಿದ್ಯಾರ್ಥಿನಿಯರು ಭಾರೀ ಆತಂಕಕ್ಕೆ ಕಾರಣವಾಗಿದ್ದರು. ಯುವತಿಯರು ನಸುಕಿನ ಮೂರು ಗಂಟೆ ಸುಮಾರಿಗೆ ಲಗ್ಗೇಜು, ಬ್ಯಾಗ್ ಹೊತ್ತುಕೊಂಡು ರಸ್ತೆಯಲ್ಲಿ ನಡೆದುಕೊಂಡು ಸಾಗಿದ್ದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಬೆಳಗ್ಗಿನ ಹೊತ್ತಿಗೆ ಮೂವರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು ತಿಳಿಯುತ್ತಲೇ ಪೊಲೀಸರು ಟ್ರೇಸಿಂಗ್ ಆರಂಭಿಸಿದ್ದರು. ಆದರೆ, ಮೊಬೈಲ್ ಕೂಡ ಇಲ್ಲದೆ ತೆರಳಿದ್ದ ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ಇರಲಿಲ್ಲ. ರೈಲು ನಿಲ್ದಾಣ ತಲುಪಿದ್ದರು ಅನ್ನೋದಷ್ಟೇ ಮಾಹಿತಿಗಳಿದ್ದವು.

ಎರಡು ದಿನ ಕಳೆಯುತ್ತಲೇ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಇರುವ ಬಗ್ಗೆ ಮಂಗಳೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಮಂಗಳೂರಿನಿಂದ ಕೊಯಂಬತ್ತೂರಿಗೆ ರೈಲಿನಲ್ಲಿ ತೆರಳಿದ್ದ ವಿದ್ಯಾರ್ಥಿನಿಯರು ಅಲ್ಲಿಂದ ಬಸ್ ಹಿಡಿದು ಚೆನ್ನೈಗೆ ತೆರಳಿ, ಪಾಂಡಿಚೇರಿ ಹೋಗಿದ್ದರು. ಒಬ್ಬಾಕೆಯ ಸಂಬಂಧಿಕರ ಮನೆ ಚೆನ್ನೈನಲ್ಲಿದ್ದು ಅಲ್ಲಿಗೆ ತೆರಳುವ ಬಗ್ಗೆ ಪ್ಲಾನ್ ಹಾಕಿದ್ದರು. ಆದರೆ, ಅದು ಸಾಧ್ಯವಾಗದೇ ಎರಡು ದಿನ ಪೂರ್ತಿ ಅಲೆದಾಡಿದ್ದಾರೆ. ಬಸ್, ಆಟೋ ಎಂದು ಚೆನ್ನೈ ಸುತ್ತಿದ್ದಾರೆ. ಕೈಯಲ್ಲಿದ್ದ ಹಣವೂ ಖಾಲಿಯಾಗಿದೆ. ಮನೆಯವರ ಬಗ್ಗೆಯೂ ಚಿಂತೆಯಾಗಿದೆ. ನಾವು ಓಡಿ ಬಂದಿದ್ದರಿಂದ ಮನೆಯವರು ಗಾಬರಿ ಆಗಿರಬೇಕು ಎಂದು ಆಟೋ ಚಾಲಕನಿಗೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಚೆನ್ನೈ ಪೊಲೀಸರು ಬಳಿಕ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ವಿದ್ಯಾರ್ಥಿನಿಯರನ್ನು ಮರಳಿ ಮಂಗಳೂರಿಗೆ ಕರೆತರಲಾಗಿದೆ.

ಮಾಹಿತಿ ಪ್ರಕಾರ, ಕಾಲೇಜಿನಲ್ಲಿ ಇತ್ತೀಚೆಗೆ ಇಂಟರ್ನಲ್ ಪರೀಕ್ಷೆ ನಡೆದಿದ್ದು ಅದರಲ್ಲಿ ಕಡಿಮೆ ಅಂಕ ಬಂದಿತ್ತು. ಇದರಿಂದ ಮನೆಯವರಿಗೆ ಹೇಗೆ ತಿಳಿಸುವುದು ಎಂದು ಆತಂಕದಲ್ಲಿದ್ದ ವಿದ್ಯಾರ್ಥಿನಿಯರು ಹಾಸ್ಟೆಲ್ ತೊರೆದಿದ್ದರು. ಆದರೆ ಹೊರ ಜಗತ್ತಿನ ಪರಿವೇ ಇಲ್ಲದೆ ಹೊರಟಿದ್ದವರು ಎರಡೇ ದಿನದಲ್ಲಿ ಸುಸ್ತಾಗಿದ್ದಾರೆ. ಇತ್ತ ವಿದ್ಯಾರ್ಥಿನಿಯರ ನಾಪತ್ತೆ ವಿಚಾರ ಪೋಷಕರಿಂದ ಹೆಚ್ಚು ಕಾಲೇಜು ಆಡಳಿತಕ್ಕೆ ತಲೆನೋವಿಗೆ ಕಾರಣವಾಗಿತ್ತು. ಚಿಂತೆಗೊಳಗಾಗಿದ್ದ ಕಾಲೇಜು ಆಡಳಿತ ವಿದ್ಯಾರ್ಥಿನಿಯರು ಸುರಕ್ಷಿತ ಮರಳುತ್ತಿದ್ದಂತೆ ನಿಟ್ಟಿಸಿರು ಬಿಟ್ಟಿದೆ. ಪರೀಕ್ಷೆಯ ಭಯದಿಂದ ಹಾಸ್ಟೆಲ್ ಬಿಟ್ಟು ತೆರಳಿದ್ದಾರೆ. ಅವರಿಗೆ ಸೂಕ್ತ ಕೌನ್ಸೆಲಿಂಗ್ ನಡೆಸಲಾಗುವುದು. ಅಲ್ಲದೆ, ಹಾಸ್ಟೆಲ್ ಭದ್ರತೆಯನ್ನೂ ಹೆಚ್ಚಿಸಲಾಗುವುದು ಎಂದು ಕಾಲೇಜಿನ ಪ್ರಿನ್ಸಿಪಾಲ್ ಹೇಳಿದ್ದಾರೆ.

Three private college girl students, who were missing from the college hostel, were found in Chennai on September 23. Addressing media on Saturday September 24, police commissioner N Shashi Kumar said, “The three girls, one from Chitradurga and two from Bengaluru, went missing from their hostel on September 21. In a CCTV footage, the trio was found walking on the street with luggage. A missing complaint was filed.