ಸುರತ್ಕಲ್ ಟೋಲ್ ಸುಲಿಗೆ ಬಿಜೆಪಿ ಆಡಳಿತದ ಜನದ್ರೋಹಕ್ಕೆ ಸಾಕ್ಷಿ ; ಮುನೀರ್ ಕಾಟಿಪಳ್ಳ 

13-10-22 08:22 pm       Mangalore Correspondent   ಕರಾವಳಿ

ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಸ್ತದ ಜ‌ನಸಮೂಹದ ಹೋರಾಟವಾಗಿ ಪರಿವರ್ತನೆಗೊಂಡಿದೆ.

ಮಂಗಳೂರು, ಅ.13 : ಸುರತ್ಕಲ್ ಅಕ್ರಮ ಟೋಲ್ ಗೇಟ್ ವಿರೋಧಿ ಹೋರಾಟ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಸ್ತದ ಜ‌ನಸಮೂಹದ ಹೋರಾಟವಾಗಿ ಪರಿವರ್ತನೆಗೊಂಡಿದೆ. ಟೋಲ್ ಗೇಟ್ ತೆರವಿನ ನಿರ್ಧಾರದ ಹೊರತಾಗಿಯೂ ಟೋಲ್ ಸಂಗ್ರಹ ಮುಂದುವರಿದಿರುವುದು ಬಿಜೆಪಿ ಸಂಸದ, ಶಾಸಕರು ನವಯುಗ್ ನಂತಹ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿರುವುದರ ಫಲ. ಒಟ್ಟಾರೆ ಬಿಜೆಪಿ ಆಡಳಿತದ ಜನದ್ರೋಹಿ ಧೋರಣೆಯನ್ನು ಸುರತ್ಕಲ್ ಟೋಲ್ ಸುಲಿಗೆ ಬಹಿರಂಗಗೊಳಿಸಿದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದ್ದಾರೆ. ‌

ಗುರುವಾರ ಬಂದರು ಶ್ರಮಿಕರ ಸಂಘದ ನೇತೃತ್ವದಲ್ಲಿ ಹಳೇಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಅಕ್ಟೋಬರ್ 18 ರ ಟೋಲ್ ಗೇಟ್ ಮುತ್ತಿಗೆ ಬೆಂಬಲಿಸಿ ನಡೆಸಿದ ಮೆರವಣಿಗೆಯ‌ನ್ನು ಉದ್ದೇಶಿಸಿ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೋಗ್ಯ, ಶಿಕ್ಷಣ ಎರಡನ್ನೂ ಮಾರಾಟಕ್ಕಿಟ್ಟಿರುವ, ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸದ, ಟೋಲ್ ಮಾಫಿಯಾಗಳ ರಕ್ಷಣೆಗೆ ನಿಲ್ಲುವ ಬಿಜೆಪಿ ಸರಕಾರ, ಇಲ್ಲಿನ ಶಾಸಕರು ಶ್ರಮಜೀವಿ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಾರೆ. ಜನತೆ ಇಂತಹ ಪಿತೂರಿಗಳಿಗೆ ಬಲಿಯಾಗದೆ ಜನಪರ ಹೋರಾಟಗಳನ್ನು ಬೆಂಬಲಿಸಬೇಕು ಎಂದು ವಿನಂತಿಸಿದರು. 

ಸ್ಥಳೀಯ ನಗರಪಾಲಿಕೆ ಸದಸ್ಯ ಅಬ್ದುಲ್ ಲತೀಫ್ ಕಂದಕ್, ಬಂದರು ಶ್ರಮಿಕರ ಸಂಘದ ಅಧ್ಯಕ್ಷರಾದ ವಿಲ್ಲಿ ವಿಲ್ಸನ್, ಪ್ರಧಾನ ಕಾರ್ಯದರ್ಶಿ ಬಿ.ಕೆ ಇಮ್ತಿಯಾಜ್ ಮಾತನಾಡಿದರು. ಡಿವೈಎಫ್ಐ ಮುಖಂಡ ರಫೀಕ್ ಹರೇಕಳ, ಗ್ರಾಮ ಪಂಚಾಯತ್ ಸದಸ್ಯ ಅಶ್ರಫ್ ಹರೇಕಳ, ಶ್ರಮಿಕರ ಸಂಘದ ಮುಖಂಡರಾದ ಫಾರೂಕ್ ಉಳ್ಳಾಲ, ಮಜೀದ್ ಯು.ಬಿ, ಮಾಧವ ಕಾವೂರ್, ಸಿದ್ದಿಕ್ ಬೆಂಗರೆ, ಪಿ.ಟಿ ಮೊಹಮ್ಮದ್, ಪುತ್ತುಂಜಿ ಮಂಜನಾಡಿ, ಟೆಂಪೋ ಚಾಲಕರ ಸಂಘದ ಪ್ರಮುಖರಾದ ದೇವದಾಸ್, ಒಣ ಮೀನು ಕಾರ್ಮಿಕರ ವಿಭಾಗದ ಮೊಹಮ್ಮದ್ ಮೋನು, ರಫೀಕ್ ನಂದಾವರ, ಮಯ್ಯದ್ದಿ ಬೆಂಗರೆ, ಹಕೀಮ್ ಬೆಂಗರೆ, ರಫೀಕ್ ಬೆಂಗ್ರೆ ಉಪಸ್ಥಿತರಿದ್ದರು.

Muneer katipalla slams BJP for not keeping it's promise in vacating Surathkal toll plaza.