ಎನ್ಐಎ, ಇಡಿ ಮೊದಲ ದಿನದಿಂದ್ಲೇ ತನಿಖೆ, ಮನೆ ರೆಂಟ್ ಕೊಡುವಾಗ ಐಡಿ ಚೆಕ್ ಮಾಡಿಕೊಳ್ಳಿ ; ಡಿಜಿಪಿ ಪ್ರವೀಣ್ ಸೂದ್

23-11-22 05:39 pm       Mangalore Correspondent   ಕರಾವಳಿ

ಕುಕ್ಕರ್ ಬಾಂಬ್ ಸ್ಫೋಟ ಘಟನೆ ಸಂಬಂಧಿಸಿ ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಕೊಟ್ಟಿದ್ದೇವೆ. ಕೇಂದ್ರ ತನಿಖಾ ತಂಡ ಮೊದಲ ದಿನದಿಂದಲೇ ತನಿಖೆ ಆರಂಭಿಸಿದ್ದಾರೆ.

ಮಂಗಳೂರು, ನ.23: ಕುಕ್ಕರ್ ಬಾಂಬ್ ಸ್ಫೋಟ ಘಟನೆ ಸಂಬಂಧಿಸಿ ಈಗಾಗಲೇ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಕೊಟ್ಟಿದ್ದೇವೆ. ಕೇಂದ್ರ ತನಿಖಾ ತಂಡ ಮೊದಲ ದಿನದಿಂದಲೇ ತನಿಖೆ ಆರಂಭಿಸಿದ್ದಾರೆ. ಯಾವುದೇ ಕಡೆ ದೇಶದ್ರೋಹದ ಕೇಸು ದಾಖಲಾದರೂ ನಾವು ಕೇಂದ್ರಕ್ಕೆ ವರದಿ ನೀಡುತ್ತೇವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಹೇಳಿದ್ದಾರೆ.

ಬಾಂಬ್ ಸ್ಫೋಟ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಎನ್ಐಎ ತನಿಖೆಗೆ ಒಪ್ಪಿಸ್ತೀರಾ ಎಂಬ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ಎನ್ಐಎಗೆ ವರದಿಯನ್ನು ನೀಡಿದ್ದೇವೆ. ಆದರೆ, ಕೇಂದ್ರ ತನಿಖಾ ತಂಡಗಳು ಸ್ಫೋಟದ ಬಗ್ಗೆ ತಿಳಿಯುತ್ತಲೇ ತನಿಖೆ ಆರಂಭಿಸಿವೆ. ಇಡಿ ಅಧಿಕಾರಿಗಳು ಹಣಕಾಸು ವಹಿವಾಟಿನ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ. ನಾವು ಎಲ್ಲ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಒಂದೆರಡು ದಿನದಲ್ಲಿ ಎನ್ಐಎ ಅಧಿಕೃತವಾಗಿ ಕೇಸನ್ನು ಹ್ಯಾಂಡಲ್ ಮಾಡುತ್ತದೆ ಎಂದರು.

NIA files charge sheet against six accused in targeted killing case |  Deccan Herald

ಬಾಂಬ್ ಸ್ಫೋಟಕ್ಕೆ ನಕಲಿ ಆಧಾರ್ ಕಾರ್ಡ್ ಬಳಕೆ ಬಗ್ಗೆ ಪ್ರಶ್ನಿಸಿದಾಗ, ಯಾರೇ ಆಗಲಿ ತಮ್ಮ ಐಡಿ ಪ್ರೂಫ್ ಕಳೆದುಹೋದಲ್ಲಿ ಅದರ ಬಗ್ಗೆ ದೂರು ಕೊಡಬೇಕು. ಪ್ರೇಮರಾಜ್ ಎರಡು ಬಾರಿ ಆಧಾರ್ ಕಳಕೊಂಡಿದ್ದರೂ, ದೂರು ಕೊಟ್ಟಿರಲಿಲ್ಲ. ಇಂಥ ಸಂದರ್ಭದಲ್ಲಿ ಸಂಶಯ ತೋರಬೇಕಾಗುತ್ತದೆ. ಇದಕ್ಕಾಗಿ ಸಾರ್ವಜನಿಕರು, ಮನೆಗಳನ್ನು ಬಾಡಿಗೆ ಕೊಡುವ ಸಂದರ್ಭದಲ್ಲಿಯೂ ಸೂಕ್ತ ಐಡಿ ಕೇಳಿ ತಿಳಿದುಕೊಳ್ಳಬೇಕು. ಇದು ಪೊಲೀಸರ ಕೆಲಸ ಆಗಿರುವುದಿಲ್ಲ. ಸಾರ್ವಜನಿಕರು ಈ ಬಗ್ಗೆ ಜಾಗ್ರತೆ ವಹಿಸಬೇಕು. ಮೈಸೂರಿನಲ್ಲಿ ಮನೆ ಕೊಟ್ಟಿದ್ದಾಗ ಕನಿಷ್ಠ ಆಧಾರ್ ಕಾರ್ಡ್ ಕೇಳಿದ್ದರು. ಅದು ನಕಲಿಯಾಗಿತ್ತು ಅಷ್ಟೇ. ಆದರೆ ಹೆಚ್ಚಿನ ಕಡೆ ಮನೆಗಳನ್ನು ರೆಂಟ್ ಕೊಡುವಾಗ ಐಡಿ ಕೇಳಲು ಮುಂದಾಗುವುದಿಲ್ಲ. ಇದರಿಂದ ದೇಶದ್ರೋಹದ ಪ್ರಕರಣ ದಾಖಲಾದಲ್ಲಿ ಸಿಕ್ಕಿಬೀಳುವ ಸ್ಥಿತಿ ಬರುತ್ತದೆ ಎಂದರು.

ಹಿಂದು ಸೋಗಿನಲ್ಲಿ ಸ್ಫೋಟಕ್ಕೆ ಮುಂದಾಗಿದ್ದನೇ ?  

ಹಿಂದುಗಳ ಸೋಗಿನಲ್ಲಿ ಬಾಂಬ್ ಸ್ಫೋಟ ನಡೆಸಲು ಉದ್ದೇಶ ಹೊಂದಿದ್ದನೇ ಎಂದು ಕೇಳಿದ ಪ್ರಶ್ನೆಗೆ, ಆ ಸಾಧ್ಯತೆ ಇದ್ದಿರಲೂ ಬಹುದು. ಅಂದರೆ, ಅವರು ಪ್ರಮುಖ ಉದ್ದೇಶ ದೇಶದಲ್ಲಿ ಸಾಮರಸ್ಯ ಕದಡುವುದು, ಆಂತರಿಕ ಭದ್ರತೆಗೆ ಧಕ್ಕೆ ತರುವುದು. ಇಂಥ ದುರಂತಗಳಾದ ಸಂದರ್ಭದಲ್ಲಿ ಸಾವು- ನೋವಿನ ಜೊತೆಗೆ ಆಂತರಿಕ ಭದ್ರತೆಗೆ ಸವಾಲು ಎದುರಾಗುತ್ತದೆ. ಜನರ ನಡುವೆ ದ್ವೇಷದ ವಾತಾವರಣ ಬರುತ್ತದೆ. ಇಂಥ ಉದ್ದೇಶದಿಂದಲೇ ವಿಧ್ವಂಸಕ ಕೃತ್ಯಕ್ಕೆ ತೊಡಗುತ್ತಾರೆ ಎಂದು ಡಿಜಿಪಿ ಪ್ರವೀಣ್ ಸೂದ್ ಹೇಳಿದರು. ಮೊಹಮ್ಮದ್ ಶಾರೀಕ್, ಪ್ರೇಮರಾಜ್ ಎನ್ನುವ ಹೆಸರಿನಲ್ಲಿ ಐಡಿ ಕಾರ್ಡ್ ಇಟ್ಟುಕೊಂಡಿದ್ದು ಮತ್ತು ಮೈಸೂರಿನಲ್ಲಿ ಹಿಂದು ಹೆಸರಲ್ಲಿಯೇ ಗುರುತಿಸಿಕೊಂಡಿದ್ದು, ಮೊಬೈಲ್ ಡಿಪಿಯಲ್ಲಿ ಶಿವನ ಫೋಟೋ ಹಾಕ್ಕೊಂಡಿದ್ದು ಹಿಂದು ಹೆಸರಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ಹೂಡಿದ್ದ ಎನ್ನುವುದಕ್ಕೆ ಸಾಕ್ಷಿ ಒದಗಿಸಿದೆ.

ಶಿವಮೊಗ್ಗದ ಬಾಂಬ್ ಟ್ರಯಲ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದರೂ, ಯಾಕೆ ನಿಗಾ ವಹಿಸಿಲ್ಲ ಎಂಬ ಪ್ರಶ್ನೆಗೆ, ನಮ್ಮ ತನಿಖಾ ತಂಡಗಳನ್ನು ಆತನ ಬಗ್ಗೆ ನಿಗಾ ಇಟ್ಟಿದ್ದವು. ತನಿಖೆಯ ಬಗ್ಗೆ ಎಲ್ಲ ಮಾಹಿತಿಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

DGP Praveen Sood in Mangalore over Autorickshaw bomb blast, says check ID before giving the house for rent. The case has been clearly handed over to NIA for further investigations.