ಸುರತ್ಕಲ್ ಟೋಲ್ ಗೇಟ್ ತೆರವಿಗೆ ನಾಲ್ಕು ದಿನ ಗಡುವಿತ್ತ ಜಿಲ್ಲಾಧಿಕಾರಿ 

23-11-22 06:45 pm       Mangalore Correspondent   ಕರಾವಳಿ

ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಮತ್ತೆ ನಾಲ್ಕು ದಿನಗಳ ಗಡುವು ನೀಡಿದ್ದಾರೆ. 

ಮಂಗಳೂರು, ನ.23 : ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವುದಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಮತ್ತೆ ನಾಲ್ಕು ದಿನಗಳ ಗಡುವು ನೀಡಿದ್ದಾರೆ. 

ಟೋಲ್ ಗೇಟ್ ಆಗ್ರಹಿಸಿ ನಡೆಯುತ್ತಿರುವ ಹಗಲು ರಾತ್ರಿ ಧರಣಿ ಒಂದು ತಿಂಗಳು ಸಮೀಪಿಸುತ್ತಿದೆ. ಟೋಲ್ ಗೇಟ್ ತೆರವು ಅಧ್ಯಾದೇಶ ಜಾರಿಗೊಂಡು ಹತ್ತು ದಿನ ದಾಟಿದರೂ ಜಿಲ್ಲಾಡಳಿತ ಟೋಲ್ ಸಂಗ್ರಹ ಸ್ಥಗಿತಗೊಳಿಸಿಲ್ಲ. ಈ ಬಗ್ಗೆ ದ.ಕ. ಜಿಲ್ಲೆಯ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ಸದಸ್ಯರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿತು. 

ನಿಯೋಗದ ಆಕ್ಷೇಪ, ಬೇಡಿಕೆಗಳನ್ನು ಆಲಿಸಿದ ಜಿಲ್ಲಾಧಿಕಾರಿ ಇನ್ನು ಮೂರರಿಂದ ನಾಲ್ಕು ದಿನಗಳಲ್ಲಿ ಪ್ರಕ್ರಿಯೆಗಳನ್ನು ಪೂರ್ತಿಗೊಳಿಸುತ್ತೇವೆ. ಹೆದ್ದಾರಿ ಇಲಾಖೆಯ ದೆಹಲಿ ಕಚೇರಿಯಿಂದ ಅಂತಿಮ ಪತ್ರ ಅಷ್ಟರಲ್ಲಿ ತಲುಪಲಿದೆ. ಅಲ್ಲಿಯ ವರೆಗೆ ಸಹಕರಿಸುವಂತೆ ವಿನಂತಿಸಿದರು ಎಂದು ಜಂಟಿ ವೇದಿಕೆಯ ಪ್ರಕಟನೆ ತಿಳಿಸಿದೆ. 

ವೇದಿಕೆಯ ಅಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ, ಸಿಪಿಎಂ ಜಿಲ್ಲಾ ಮುಖಂಡರಾದ ಯಾದವ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಪಕ್ಷದ ಶಾಲೆಟ್ ಪಿಂಟೊ, ರಾಜ್ಯ ರೈತ ಸಂಘದ ಓಸ್ವಾಲ್ಡ್ ಫೆರ್ನಾಂಡಿಸ್, ಸನ್ನಿ ಡಿಸೋಜ, ದಲಿತ ಸಂಘರ್ಷ ಸಮಿತಿಯ  ಜೆಡಿಎಸ್ ನ ವಸಂತ ಪೂಜಾರಿ, ಎಂ. ದೇವದಾಸ್ ಉಪಸ್ಥಿತರಿದ್ದರು.

Mangalore Protest over Surathkal toll gate, DC asks for 4 days time.