ಅಧಿಕಾರಿಗಳಿಗೆ ಕೋರ್ಟ್ ದಂಡ ; ಮಂಗಳೂರು ಪಾಲಿಕೆಯ ಖರ್ಚಿನಲ್ಲಿ ಕೋರ್ಟ್ ಮೆಟ್ಟಿಲೇರಿದ ಅಧಿಕಾರಿಗಳು, ಆಮ್ ಆದ್ಮಿ ಆಕ್ಷೇಪ, ಕ್ರಮಕ್ಕೆ ಆಗ್ರಹ 

10-12-22 05:29 pm       Mangalore Correspondent   ಕರಾವಳಿ

ನಗರದಲ್ಲಿ ಒಳಚರಂಡಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಆಡಳಿತದ ಗಮನಕ್ಕೆ ತರುವುದಕ್ಕಾಗಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಕೆ. ಸಂತೋಷ್ ಕಾಮತ್ ನೇತೃತ್ವದಲ್ಲಿ ಪಕ್ಷದ ನಿಯೋಗ ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. 

ಮಂಗಳೂರು, ಡಿ.10 : ನಗರದಲ್ಲಿ ಒಳಚರಂಡಿ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳ ಬಗ್ಗೆ ಆಡಳಿತದ ಗಮನಕ್ಕೆ ತರುವುದಕ್ಕಾಗಿ ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಕೆ. ಸಂತೋಷ್ ಕಾಮತ್ ನೇತೃತ್ವದಲ್ಲಿ ಪಕ್ಷದ ನಿಯೋಗ ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತು. 

ಮಂಗಳೂರು ನಗರದ ಬಿಜೈ – ಆನೆಗುಂಡಿ ಪ್ರದೇಶದಲ್ಲಿ ಒಳಚರಂಡಿ(ಯುಜಿಡಿ) ಸಮಸ್ಯೆ ಹಲವಾರು ವರ್ಷಗಳಿಂದ ಪರಿಹಾರವಾಗದೆ ಸ್ಥಳೀಯರಿಗೆ ದುರ್ನಾತ ಮಾತ್ರವಲ್ಲದೆ, ಆರೋಗ್ಯ ಸಮಸ್ಯೆಗೂ ಕಾರಣವಾಗಿತ್ತು. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾ ಕಾಯಿಲೆಗಳು ಈ ಪ್ರದೇಶದಳಲ್ಲಿ ಹೆಚ್ಚಿವೆ. ಸ್ಥಳೀಯ ನಾಗರಿಕರು ಆಮ್ ಆದ್ಮಿ ಪಕ್ಷದ ಮುಖಂಡರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪಾಲಿಕೆ ಆಯುಕ್ತರ ಗಮನ ಸೆಳೆಯಲಾಗಿತ್ತು. ಬಿಜೈ– ಆನೆಗುಂಡಿ ಪ್ರದೇಶದಲ್ಲಿ ಒಳಚರಂಡಿ ಸಮಸ್ಯೆ ಬಗ್ಗೆ ಆಮ್ ಆದ್ಮಿ ಪಾರ್ಟಿ ವತಿಯಿಂದ ಅ.12ರಂದು ಆಯುಕ್ತರಿಗೆ ಜನರಿಗಾಗುವ ತೊಂದರೆ ಬಗ್ಗೆ ವಿವರಿಸಲಾಗಿತ್ತು. ಒಳಚರಂಡಿಯ ಕೊಳಚೆ, ಮಳೆ ನೀರು ಚಂರಡಿಯಲ್ಲಿ ಹರಿದು ಹೋಗುತ್ತಿರುವುದು ಸಮಸ್ಯೆಯಾಗಿದೆ.

ಆಮ್ ಆದ್ಮಿ ಪಾರ್ಟಿ ವತಿಯಿಂದ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ನಿರಂತರ ಫಾಲೋ ಅಪ್ ಮಾಡುತ್ತಿದ್ದರೂ ಪರಿಹಾರ ಆಗಿರಲಿಲ್ಲ. ಡಿ. 9ರಂದು ಈ ಬಗ್ಗೆ ಮತ್ತೊಮ್ಮೆ ಗಮನ ಸೆಳೆದಾಗ ಸಂಬಂಧಪಟ್ಟ ಎಂಜಿನಿಯರಿಗೆ ಕಾರಣ ಕೇಳಿ ನೊಟೀಸು ನೀಡುವುದಾಗಿ  ಮಹಾನಗರ ಪಾಲಿಕೆಯ ಆಯುಕ್ತರು ನಿಯೋಗಕ್ಕೆ ಭರವಸೆ ನೀಡಿದ್ದಾರೆ. 

ಪಾಲಿಕೆ ವ್ಯಾಪ್ತಿಯ ಕೆಲರಾಯ್ ಬಡಾವಣೆಯ ದಾರಿ ಸಮಸ್ಯೆ ಹಲವು ವರ್ಷಗಳಿಂದ ಪರಿಹಾರ ಆಗಿಲ್ಲ. ಖಾಸಗಿಯವರು ದಾರಿಗೆ ಜಮೀನು ಬಿಡಬೇಕಾಗುವ ಕಾನೂನು ತೊಡಕುಗಳನ್ನು ನಿವಾರಿಸಿದ ನಂತರ ಕೌನ್ಸಿಲ್ ಮೀಟಿಂಗ್ ಅನುಮೋದನೆ ಪಡೆದು ಸಮಸ್ಯೆ ಪರಿಹಾರ ಮಾಡಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. 

ಅಧಿಕಾರಿಗಳ ಲೋಪ, ಪಾಲಿಕೆಗೆ ನಷ್ಟ 

ಜೆಪ್ಪು- ಮಜಿಲ ಪ್ರದೇಶದಲ್ಲಿ  ಒಳಚರಂಡಿ(ಯುಜಿಡಿ) ಸಮಸ್ಯೆಯ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾನಗರ ಪಾಲಿಕೆಯ ಏಳು ಮಂದಿ ಅಧಿಕಾರಿಗಳಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆ 2014ರಲ್ಲಿ ದಂಡ ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಅಧಿಕಾರಿಗಳು ಮಹಾನಗರಪಾಲಿಕೆಯ ವೆಚ್ಚದಲ್ಲಿ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿರುವುದು ಸರಿಯಲ್ಲ ಎಂದು ಜೆಪ್ಪು- ಮಜಿಲ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಬದಲು ಪಾಲಿಕೆಯು ಸಾರ್ವಜನಿಕರ ತೆರಿಗೆ ಹಣವನ್ನು ವೆಚ್ಚ ಮಾಡಿ ಅಧಿಕಾರಿಗಳ ಪರವಾಗಿ ವಕಾಲತ್ತು ನಡೆಸುತ್ತಿರುವುದು ಅಸಂಬದ್ಧ. 

ಜೆಪ್ಪು- ಮಜಿಲ ಪ್ರದೇಶದಲ್ಲಿ ಯುಜಿಡಿ ಪೈಪುಗಳು ಒಡೆದು ಕೊಳಚೆ ನೀರು ಸಾರ್ವಜನಿಕರ ಬಾವಿಯಲ್ಲಿ ತುಂಬಿತ್ತು. ಇದರ ವಿರುದ್ಧ ಸಾರ್ವಜನಿಕರು, ಪಾಲಿಕೆ ಆಯುಕ್ತರು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿ 35 ಮಂದಿ ನಾಗರಿಕರು ದೂರು ನೀಡಿದ್ದರು. ವಿಚಾರಣೆ ನಡೆಸಿದ ಗ್ರಾಹಕರ ಕೋರ್ಟ್, ಇದೊಂದು ಗಂಭೀರ ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ 2014ರಲ್ಲಿ ತೀರ್ಪು ನೀಡಿ ತೊಂದರೆಗೀಡಾದ ನಾಗರಿಕರಿಗೆ ಪ್ರತಿ ದಿನಕ್ಕೆ ತಲಾ 50 ರೂ.ನಂತೆ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ತಪ್ಪಿತಸ್ಥ ಅಧಿಕಾರಿಗಳು ಆ ತೀರ್ಪಿನ ವಿರುದ್ಧ ಹೈಕೋರ್ಟಿಗೆ ಅಪೀಲು ಸಲ್ಲಿಸಿದ್ದಾರೆ. 

ಗ್ರಾಹಕರ ವೇದಿಕೆಯ ತೀರ್ಪಿನ ವಿರುದ್ಧ ಅಪೀಲು ಸಲ್ಲಿಸಲು ಮಹಾನಗರ ಪಾಲಿಕೆಯು ಸಾರ್ವಜನಿಕರ ಹಣವನ್ನು ಉಪಯೋಗಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಅಪೀಲು ಹಾಕಿದ ಹಣವನ್ನು ತಪ್ಪಿತಸ್ಥ ಅಧಿಕಾರಿಗಳಿಂದಲೇ ಭರಿಸುವಂತೆ ಕ್ರಮ ಕೈಗೊಳ್ಳಲು ಎಎಪಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್ ಆಯುಕ್ತರನ್ನು ಒತ್ತಾಯಿಸಿದರು. ಈ ಬಗ್ಗೆ ಕಡತವನ್ನು ತರಿಸಿ ಪರಿಶೀಲಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ. 

ಆಮ್ ಆದ್ಮಿ ಪಾರ್ಟಿ ನಿಯೋಗದಲ್ಲಿ ಜಿಲ್ಲಾ ಅಧ್ಯಕ್ಷ ಸಂತೋಷ್ ಕಾಮತ್, ಎಎಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಪ್ಝರ್ ರಝಾಕ್, ಗ್ರಿವೆನ್ಸ್ ವೆಬ್ ಸೈಟ್ ಸಂಯೋಜಕ ಸನಾನ್ ಪಿಂಟೋ, ಜಯದೇವ ಕಾಮತ್,   ಹಬೀಬ್ ಖಾದರ್, ಹಮೀದ್, ರೋನಿ ಕ್ರಾಸ್ತ, ಪ್ರಕರಣಕ್ಕೆ ಸಂಬಂಧಪಟ್ಟ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.

Mangalore AAP demands action for using court fees from Corporation account to fight the case.