ಚಿತ್ರಕಥೆ, ನಿರ್ದೇಶನಕ್ಕೂ ಸೈ ಎಂದ 'ಕಾಂತಾರ'ದ ಗುರುವ ಸ್ವರಾಜ್ ಶೆಟ್ಟಿ ; ಹೊಸ ಕನ್ನಡ ಚಿತ್ರಕ್ಕೆ ಮುಹೂರ್ತ 

11-12-22 04:49 pm       Mangalore Correspondent   ಕರಾವಳಿ

ಸೂಪರ್ ಹಿಟ್ ಕಾಂತಾರ ಚಿತ್ರದ ಗುರುವ ಪಾತ್ರಧಾರಿ ಖ್ಯಾತಿಯ ಸ್ವರಾಜ್ ಶೆಟ್ಟಿ ಚಿತ್ರಕಥೆ, ನಿರ್ದೇಶನದೊಂದಿಗೆ ಮ್ಯಾಕ್ಸ್ ಕ್ರಿಯೇಷನ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕನ್ನಡ‌ ಚಿತ್ರಕ್ಕೆ ಹರೇಕಳ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಭಾನುವಾರ ಮುಹೂರ್ತ ಸಮಾರಂಭ ನೆರವೇರಿತು. 

ಉಳ್ಳಾಲ, ಡಿ.11 : ಸೂಪರ್ ಹಿಟ್ ಕಾಂತಾರ ಚಿತ್ರದ ಗುರುವ ಪಾತ್ರಧಾರಿ ಖ್ಯಾತಿಯ ಸ್ವರಾಜ್ ಶೆಟ್ಟಿ ಚಿತ್ರಕಥೆ, ನಿರ್ದೇಶನದೊಂದಿಗೆ ಮ್ಯಾಕ್ಸ್ ಕ್ರಿಯೇಷನ್ ಲಾಂಛನದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ಕನ್ನಡ‌ ಚಿತ್ರಕ್ಕೆ ಹರೇಕಳ ಸಂಪಿಗೆದಡಿ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಭಾನುವಾರ ಮುಹೂರ್ತ ಸಮಾರಂಭ ನೆರವೇರಿತು. 

ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು ಹೊಸ ಚಿತ್ರಕ್ಕೆ ಕ್ಲಾಪ್ ಮಾಡಿದರು. ತುಳು ಚಲನಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಕ್ಯಾಮರಾ ಚಾಲನೆ ಮಾಡಿದರು. ಚಿತ್ರ ನಿರ್ದೇಶಕ, ನಾಯಕ ನಟ ಸ್ವರಾಜ್ ಶೆಟ್ಟಿ ಮಾತನಾಡಿ ಚಿತ್ರಕ್ಕೆ ಇನ್ನಷ್ಟೇ ಹೆಸರಿಡಬೇಕಿದೆ. ಕಾಂತಾರ ಚಿತ್ರದ ಗುರುವ ಪಾತ್ರದ ಮೂಲಕ ಕನ್ನಡಿಗರು ನನ್ನನ್ನು ಗುರುತಿಸಿದ್ದಾರೆ. ಹೊಸ ಚಿತ್ರ ಕಂಪ್ಲೀಟ್ ಫ್ಯಾಮಿಲಿ ಎಂಟರ್ ಟೈನರ್ ಆಗಿದ್ದು ಪತಿ-ಪತ್ನಿ ನಡುವಿನ ನವಿರಾದ ಪ್ರೇಮಕಥೆಯನ್ನು ಒಳಗೊಂಡಿದೆ. ಚಿತ್ರಕಥೆ, ಸಂಭಾಷಣೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯೂ ನನ್ನ ಮೇಲಿದೆ. ಮಂಗಳೂರು ಸುತ್ತಮುತ್ತಲಲ್ಲೇ 20-25 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಚಿತ್ರದಲ್ಲಿ "ಕಾಂತಾರ" ಚಿತ್ರದ ಬಹುತೇಕ ಕಲಾವಿದರು ಬಣ್ಣ ಹಚ್ಚಲಿದ್ದಾರೆ ಎಂದರು. 

ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ ಸ್ವರಾಜ್ ಶೆಟ್ಟಿ ಉತ್ತಮ ಕಲಾವಿದ. ಮೊದಲ ಬಾರಿ ಚಿತ್ರಕಥೆ ನಿರ್ದೇಶನದ ಜವಾಬ್ದಾರಿಯ ಜೊತೆಗೆ ಪೂರ್ಣ ಪ್ರಮಾಣದಲ್ಲಿ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ. ಅವರಿಗೆ ನಮ್ಮ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ ಎಂದರು.
ಸ್ವರಾಜ್ ಶೆಟ್ಟಿಗೆ ನಾಯಕಿಯಾಗಿ ಶಿವಾನಿ ರೈ ಅಭಿನಯಿಸುತ್ತಿದ್ದಾರೆ. ಶಿವಾನಿ ಅವರ ಮೊದಲ ಕನ್ನಡ ಚಿತ್ರ "ಅಭಿರಾಮ ಚಂದ್ರ" ಇನ್ನಷ್ಟೇ ಬಿಡುಗಡೆಯಾಗಲಿದೆ. ಚಿತ್ರದ ನಿರ್ಮಾಪಕರಾದ ಭಾಗ್ಯರಾಜ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಸಂಕಲನಕಾರ ಗಣೇಶ್ ನೀರ್ಚಾಲ್, ಕೆಮರಾ ಮ್ಯಾನ್ ರೂಪೇಶ್ ಷಾಜಿ, ಸಂಗೀತ ನಿರ್ದೇಶಕ ವಿನೋದ್ ರಾಜ್ ಕೋಕಿಲ, ಕಲಾ ನಿರ್ದೇಶಕ ರಾಜೇಶ್, ಸಹನಿರ್ದೇಶಕ ಮಹಾನ್ ಶೆಟ್ಟಿ, ಕಾರ್ಯಕಾರಿ ನಿರ್ಮಾಪಕ ರಾಜೇಶ್ ಕುಡ್ಲ, ರಕ್ಷಾ ರಾಜ್ ಶೆಟ್ಟಿ, ರಾಧಾಕೃಷ್ಣ, ಪ್ರತಿಮಾ ರೈ ಮೊದಲಾದವರು ಉಪಸ್ಥಿತರಿದ್ದರು.

Mangalore Muhurtam held at temple for upcoming kannada movie of Max creation.