ಕೊಣಾಜೆಯಲ್ಲಿ ಯುವಕ ಆತ್ಮಹತ್ಯೆ ; ತಾಯಿ ಮದುವೆಗೆ ಹೋಗಿದ್ದಾಗ ಸೀರೆಗೆ ನೇಣು ! 

14-12-22 02:18 pm       Mangalore Correspondent   ಕರಾವಳಿ

ಮುಂಜಾನೆ ಜಾಗಿಂಗ್ ತೆರಳಿದ್ದ ಯುವಕನೋರ್ವ ಮನೆಗೆ ಮರಳಿದ ಬಳಿಕ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಅಸೈಗೋಳಿ ಸೈಟ್ ಎಂಬಲ್ಲಿ ನಡೆದಿದೆ. 

ಉಳ್ಳಾಲ, ಡಿ.14 : ಮುಂಜಾನೆ ಜಾಗಿಂಗ್ ತೆರಳಿದ್ದ ಯುವಕನೋರ್ವ ಮನೆಗೆ ಮರಳಿದ ಬಳಿಕ ಕೋಣೆಯಲ್ಲಿ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಅಸೈಗೋಳಿ ಸೈಟ್ ಎಂಬಲ್ಲಿ ನಡೆದಿದೆ. 

ಅಸೈಗೋಳಿ ಸೈಟ್ ಅಯ್ಯಪ್ಪ ಮಂದಿರದ ಬಳಿಯ ನಿವಾಸಿ ಅಭಿಲಾಷ್ ಶೆಟ್ಟಿ(36) ಆತ್ಮ‌ಹತ್ಯೆಗೈದ ಯುವಕ. ಅಭಿಲಾಷ್ ಈ ಹಿಂದೆ ಮೆಡಿಕಲ್ ರೆಫ್ ಆಗಿ ಕೆಲಸ ಮಾಡುತ್ತಿದ್ದು ಕೆಲ ತಿಂಗಳಿಂದ ಕೆಲಸಕ್ಕೆ ತೆರಳದೆ ಮನೆಯಲ್ಲೇ ಉಳಿದಿದ್ದರೆನ್ನಲಾಗಿದೆ. ಹೀಗಾಗಿ ಕೆಲವು ದಿನಗಳಿಂದ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. 

ಇಂದು ಮುಂಜಾನೆ ಎಂದಿನಂತೆ ಜಾಗಿಂಗ್ ಗೆ ತೆರಳಿ ಮನೆಗೆ ಹಿಂದಿರುಗಿದ್ದಾರೆ. ಬೆಳಗ್ಗೆ 10 ಗಂಟೆಯ ವೇಳೆ ಅಭಿಲಾಷ್ ತಾಯಿ ಮತ್ತು ಮನೆ ಮಂದಿ ಮದುವೆ ಸಮಾರಂಭಕ್ಕೆ ತೆರಳಿದ್ದು ಈ ವೇಳೆ ಅಭಿಲಾಷ್ ತನ್ನ ಕೋಣೆಯ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ. ಮದುವೆಗೆ ತೆರಳದೆ ಮನೆಯಲ್ಲೇ ಉಳಿದಿದ್ದ ಅಭಿಲಾಷ್ ತಂದೆ, ಮಗ ಕೋಣೆಯಿಂದ ಹೊರ ಬಾರದೇ ಇದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದಿದೆ. ಕೊಣಾಜೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಭಿಲಾಷ್ ಮೊಬೈಲನ್ನ ವಶಕ್ಕೆ ಪಡೆದು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೃತ ಅಭಿಲಾಷ್ ತಂದೆ, ತಾಯಿ, ಸಹೋದರ, ಸಹೋದರಿಯನ್ನ ಅಗಲಿದ್ದಾರೆ.

36 year old man commits Suicide at Konaje in Mangalore.