ಮುಸ್ಲಿಂ ಯುವಕ- ಹಿಂದು ಯುವತಿ ಪ್ರಯಾಣ ; ಬೆಂಗಳೂರು ಬಸ್ ತಡೆದು ಸಂಘಟನೆ ಕಾರ್ಯಕರ್ತರ ಆವಾಜ್, ಪೊಲೀಸರಿಂದ ಸುಮೊಟೊ ಕೇಸ್ 

16-12-22 11:48 am       Mangalore Correspondent   ಕರಾವಳಿ

ಹಿಂದು ಹುಡುಗಿಯ ಜೊತೆ ಮುಸ್ಲಿಂ ಯುವಕ ಬೆಂಗಳೂರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಹಿಂದು ಸಂಘಟನೆ ಯುವಕರು ಬಸ್ ತಡೆದು ದಬಾಯಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. 

ಬಂಟ್ವಾಳ, ಡಿ.16 :ಹಿಂದು ಹುಡುಗಿಯ ಜೊತೆ ಮುಸ್ಲಿಂ ಯುವಕ ಬೆಂಗಳೂರು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ಕಲ್ಲಡ್ಕ ಸಮೀಪದ ದಾಸಕೋಡಿ ಎಂಬಲ್ಲಿ ಹಿಂದು ಸಂಘಟನೆ ಯುವಕರು ಬಸ್ ತಡೆದು ದಬಾಯಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ. 

ಕಾನೂನು ಪದವಿ ಮುಗಿಸಿರುವ ಭಟ್ಕಳ ಮೂಲದ ಮುಸ್ಲಿಂ ಯುವಕ ಮತ್ತು ಆತನ ಜೊತೆಗೆ ಕಾಲೇಜು ಓದಿದ್ದಳು ಎನ್ನಲಾದ ಬಂಟ ಸಮುದಾಯದ ಮಂಗಳೂರಿನ ಹುಡುಗಿ ಬೆಂಗಳೂರು ತೆರಳುತ್ತಿದ್ದ ದುರ್ಗಾಂಬಾ ಬಸ್ಸಿನಲ್ಲಿ ಜೊತೆಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಹಿಂದು ಸಂಘಟನೆ ಕಾರ್ಯಕರ್ತರು ಬಸ್ ತಡೆದಿದ್ದಾರೆ. ಬಸ್ಸನ್ನು ಬಂಟ್ವಾಳದ ದಾಸಕೋಡಿ ಎಂಬಲ್ಲಿ ತಡೆದು ನಿಲ್ಲಿಸಿದ್ದು ಒಳಗಿದ್ದ ಯುವಕ - ಯುವತಿಯನ್ನು ಕೆಳಗೆ ಇಳಿಯಲು ಹೇಳಿ ಜೋರು ಮಾಡಿದ್ದಾರೆ. ಆದರೆ ಹುಡುಗಿ, ನೀವ್ಯಾರು ಕೇಳೋರು ಅಂತ ಮರು ಪ್ರಶ್ನೆ ಹಾಕಿದ್ದಾಳೆ. ಬಳಿಕ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಬಂದು ಹುಡುಗ- ಹುಡುಗಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. 

ಠಾಣೆಯಲ್ಲಿ ದೂರು ನೀಡಲು ಸೂಚಿಸಿದಾಗ, ಯುವಕ- ಯುವತಿ ದೂರು ಬೇಡವೆಂದು ಹೇಳಿ ಹೋಗಿದ್ದಾರೆ. ಸಂಘಟನೆ ಕಾರ್ಯಕರ್ತರು ಬಸ್ ನಿಲ್ಲಿಸಿ, ಮಾತಿನ ಚಕಮಕಿ ನಡೆಸಿರುವ ವಿಡಿಯೋ ತುಣುಕು ವೈರಲ್ ಆಗಿದೆ. ಘಟನೆ ಬಗ್ಗೆ ಬಂಟ್ವಾಳ ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ಮಾಹಿತಿ ಪ್ರಕಾರ, ಯುವಕ- ಯುವತಿ ಹಿಂದೆ ಒಂದೇ ಕಾಲೇಜಿನಲ್ಲಿ ಓದಿದವರು ಎನ್ನಲಾಗುತ್ತಿದ್ದು ಬೆಂಗಳೂರಿಗೆ ಯಾವುದೋ ಸರ್ಟಿಫಿಕೇಟ್ ಪಡೆಯುವ ಸಲುವಾಗಿ ಜೊತೆಗೆ ಪ್ರಯಾಣಿಸುತ್ತಿದ್ದರು. ಆದರೆ ಸ್ಲೀಪರ್ ಕೋಚ್ ಬಸ್ಸಿನಲ್ಲಿ ಹಿಂದು ಯುವತಿ ಮತ್ತು ಮುಸ್ಲಿಂ ಯುವಕ ಜೊತೆಗಿದ್ದ ಬಗ್ಗೆ ಮಾಹಿತಿ ಪಡೆದ ಸಂಘಟನೆ ಯುವಕರು ಬಸ್ ತಡೆದು ಹೈಡ್ರಾಮಾ ನಡೆಸಿದ್ದಾರೆ. ಆದರೆ ಯುವಕರು ಯಾವುದೇ ಹಲ್ಲೆ ನಡೆಸಿಲ್ಲ ಎನ್ನುವ ಮಾಹಿತಿಯನ್ನು ಬಂಟ್ವಾಳ ಪೊಲೀಸರು ನೀಡಿದ್ದಾರೆ.

Mangalore Moral police in Private bus to bangalore, muslim youth caught with Hindu girl.