ಢೋಂಗಿ ಹಿಂದುತ್ವವಾದಿಗಳ ವಿರುದ್ಧ ಸ್ಪರ್ಧೆ, ಹಿಂದು ಕಾರ್ಯಕರ್ತರೇ ಬಿಜೆಪಿಯನ್ನು ಸೋಲಿಸಲಿದ್ದಾರೆ ; ಮುತಾಲಿಕ್ 

17-12-22 09:43 pm       Udupi Correspondent   ಕರಾವಳಿ

ಹಿಂದು ಸಂಘಟನೆ ಕಾರ್ಯಕರ್ತರ ರಕ್ಷಣೆಗಾಗಿ, ಢೋಂಗಿ ಹಿಂದುತ್ವವಾದಿಗಳ ವಿರುದ್ಧ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಉಡುಪಿ, ಡಿ.17 : ಹಿಂದು ಸಂಘಟನೆ ಕಾರ್ಯಕರ್ತರ ರಕ್ಷಣೆಗಾಗಿ, ಢೋಂಗಿ ಹಿಂದುತ್ವವಾದಿಗಳ ವಿರುದ್ಧ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. 

ಶನಿವಾರ ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಐದಾರು ಬಾರಿ ಪ್ರವಾಸ ಮಾಡಿದ್ದೇನೆ. ಕಾರ್ಯಕರ್ತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಇಲ್ಲಿಂದಲೇ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು. 

ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ಹಿಂದು ಕಾರ್ಯಕರ್ತರನ್ನು ಬೆದರಿಸುವ, ಸುಳ್ಳು ಪ್ರಕರಣಗಳನ್ನು ದಾಖಲಿಸುವ ಕೆಲಸ ನಡೆಯುತ್ತಿದೆ. ಇಂತಹ ಕಾರ್ಯಗಳು ಸಚಿವರಿಗೆ ಶೋಭೆ ತರುವುದಿಲ್ಲ ಎಂದು ವಿ.ಸುನಿಲ್ ಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

BJP is 'people-centric' unlike Congress being 'person-centric': Minister  Sunil Kumar | udayavani

ಹಿಂದುತ್ವದ ಆಧಾರದಲ್ಲಿ ಗೆದ್ದ ಬಿಜೆಪಿ ಸರ್ಕಾರ ಹಿಂದು ಕಾರ್ಯಕರ್ತರನ್ನು ಕಡೆಗಣಿಸಿದೆ. ಮೂರು ಸಾವಿರ ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಮುಂಬರುವ ಚುನಾವಣೆಯಲ್ಲಿ ಆಕ್ರೋಶಿತ ಕಾರ್ಯಕರ್ತರೇ ಬಿಜೆಪಿಯನ್ನು ಸೋಲಿಸಲಿದ್ದಾರೆ ಎಂದರು.

ಕಾರ್ಕಳ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿ ಅಡ್ಡಿಪಡಿಸಿದರೆ ಎಲ್ಲ ಕ್ಷೇತ್ರಗಳಲ್ಲಿ ಹಿಂದು ಕಾರ್ಯಕರ್ತರು ಒಕ್ಕೂಟವಾಗಿ ಬಿಜೆಪಿ ವಿರುದ್ಧ ಕೆಲಸ ಮಾಡಲಿದ್ದಾರೆ. ಕಾರ್ಕಳದಲ್ಲಿ ಹಿಂದೂ ಕಾರ್ಯಕರ್ತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸದಿದ್ದರೆ ಡಿ.20ರಂದು ರಾಜ್ಯದಾದ್ಯಂತ ಶ್ರೀರಾಮಸೇನೆ ಹಾಗೂ ಹಿಂದೂ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಕಳದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧ, ಗೋಹತ್ಯೆ ತಡೆಯಲು ಚುನಾವಣಾ ಕಣಕ್ಕಿಳಿಯುತ್ತಿದ್ದೇನೆ. ಹಿಂದುತ್ವಕ್ಕಾಗಿ ಮನೆ ಮನೆಗೂ ತೆರಳಿ ಜೋಳಿಗೆ ಹಿಡಿದು ಮತಭಿಕ್ಷೆ ಬೇಡುತ್ತೇನೆ. ಆರ್ಥಿಕ ನೆರವು ಕೇಳುತ್ತೇನೆ ಎಂದರು.‌

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಮುಖಂಡರಾದ ಜಯರಾಮ್ ಅಂಬೆಕಲ್ಲು, ಆನಂದ್ ಶೆಟ್ಟಿ ಅಡ್ಯಾರ್‌, ಗಂಗಾಧರ್ ಕುಲಕರ್ಣಿ, ವಕೀಲ ಹರೀಶ್‌ ಇದ್ದರು.

Pramod Muthalik to contest from Karkala, says will destory fake Hindus after holding a press meet in Udupi.