ಪೆರ್ಮುದೆಗೆ ಬಂದ ಎರಡು ಚಿರತೆಗಳು ; ಮನೆಯಂಗಳದಲ್ಲಿ ರಾಜಾರೋಷ ನಡಿಗೆ, ನಾಯಿ ಅಟ್ಟಿಸಿದ್ದ ವಿಡಿಯೋ ಸಿಸಿಯಲ್ಲಿ ಸೆರೆ 

21-12-22 05:56 pm       Mangalore Correspondent   ಕರಾವಳಿ

ಕಟೀಲು ಬಳಿಯ ಪೆರ್ಮುದೆಯ ಹುಣ್ಸೆಕಟ್ಟೆ ಎಂಬಲ್ಲಿ ಜೆರೋಮ್ ಸಿಕ್ವೇರಾ ಎಂಬವರ ಮನೆಗೆ ನಿನ್ನೆ ರಾತ್ರಿ ಎರಡು ಚಿರತೆಗಳು ಆಗಮಿಸಿದ್ದು ನಾಯಿಯನ್ನು ಅಟ್ಟಿಸಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. 

ಮಂಗಳೂರು, ಡಿ.21 : ಕಟೀಲು ಬಳಿಯ ಪೆರ್ಮುದೆಯ ಹುಣ್ಸೆಕಟ್ಟೆ ಎಂಬಲ್ಲಿ ಜೆರೋಮ್ ಸಿಕ್ವೇರಾ ಎಂಬವರ ಮನೆಗೆ ನಿನ್ನೆ ರಾತ್ರಿ ಎರಡು ಚಿರತೆಗಳು ಆಗಮಿಸಿದ್ದು ನಾಯಿಯನ್ನು ಅಟ್ಟಿಸಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. 

ಪೆರ್ಮುದೆಯಿಂದ ಹುಣ್ಸೆಕಟ್ಟೆ ದಾರಿಯಲ್ಲಿ ಶಿಬರೂರಿಗೆ ತೆರಳುವ ರಸ್ತೆ ಪಕ್ಕದಲ್ಲಿ ಮನೆ ಹೊಂದಿರುವ ಜೆರೋಂ ಸಿಕ್ವೇರಾ ಮನೆಯ ಅಂಗಳಕ್ಕೆ ಮಂಗಳವಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಎರಡು ಚಿರತೆಗಳು ಬಂದಿದ್ದವು. ರಾತ್ರಿ ಹೊತ್ತು ನಾಯಿ ಜೋರಾಗಿ ಬೊಗಳಿರುವುದರಿಂದ ಬುಧವಾರ ಬೆಳಗ್ಗೆ ಮನೆಯ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ಎರಡು ಚಿರತೆಗಳು ಏಕಕಾಲಕ್ಕೆ ಮನೆಯ ಅಂಗಳದಲ್ಲಿ ನಡೆದಾಡಿರುವುದು ಗಮನಕ್ಕೆ ಬಂದಿದೆ. ಎರಡು ಮೂರು ವರ್ಷಗಳ ಹಿಂದೆ ಇದೇ  ಹುಣ್ಸೆಕಟ್ಟೆ ಬೇಡಪದವು ಪರಿಸರದಲ್ಲಿ ಚಿರತೆಗಳನ್ನು ಕಂಡವರಿದ್ದಾರೆ. ಆದರೆ ಜೆರೋಂ ಸಿಕ್ವೇರಾ ಅವರು ಸಿಸಿ ಕೆಮರಾ ಹಾಕಿ ನಾಲ್ಕು ತಿಂಗಳಷ್ಟೇ ಆಗಿದೆ. ನಿನ್ನೆಯಷ್ಟೇ ಮೊದಲ ಬಾರಿಗೆ ಕೆಮರಾದಲ್ಲಿ ಚಿರತೆಯ ನೋಟ ದಾಖಲಾಗಿರುವುದರಿಂದ ಚಿರತೆ ಬಂದಿರುವುದು ಖಚಿತವಾಗಿದೆ. ಅದೂ ಒಂದಲ್ಲ, ಎರಡು ಚಿರತೆಗಳಿದ್ದವು ಎಂದು ಕೃಷಿಕ ಜೆರೊಂ ಸಿಕ್ವೇರ ತಿಳಿಸಿದ್ದಾರೆ.  

ಕಳೆದ ವರ್ಷ ಎಕ್ಕಾರು ಪರಿಸರದಲ್ಲಿ ಚಿರತೆಯ ಓಡಾಟ, ದನವನ್ನು ತಿಂದಿರುವುದು ಸುದ್ದಿಯಾಗಿತ್ತು ಇದೀಗ ಪಕ್ಕದ ಪೆರ್ಮುದೆ ಪರಿಸರದಲ್ಲಿ ಚಿರತೆಗಳು ಭಯದ ವಾತಾವರಣ ಸೃಷ್ಟಿಸಿವೆ.

Leopards spotted at Permude in Mangalore to attack dogs, watch video.