ಜನವರಿ 15ರೊಳಗೆ 150 ಸ್ಥಾನಗಳಿಗೆ ಅಭ್ಯರ್ಥಿ ಪಟ್ಟಿ, 11ರಿಂದ ರಾಜ್ಯದಾದ್ಯಂತ ಬಸ್ ಯಾತ್ರೆ ; ಸಲೀಂ ಅಹ್ಮದ್

26-12-22 10:32 pm       Mangalore Correspondent   ಕರಾವಳಿ

ಜನವರಿ 15ರೊಳಗೆ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗುವುದು. ಅಂದಿನಿಂದಲೇ ಅಭ್ಯರ್ಥಿಗಳನ್ನು ಪ್ರಚಾರ ಕಾರ್ಯಕ್ಕೆ ಇಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಮಂಗಳೂರು, ಡಿ.26: ಜನವರಿ 15ರೊಳಗೆ 150 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್ ಮಾಡಲಾಗುವುದು. ಅಂದಿನಿಂದಲೇ ಅಭ್ಯರ್ಥಿಗಳನ್ನು ಪ್ರಚಾರ ಕಾರ್ಯಕ್ಕೆ ಇಳಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ನಗರದ ಕಾಂಗ್ರೆಸ್ ಭವನದಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ದಿನವಿಡೀ ಮಾಜಿ ಸಚಿವ ರೆಹ್ಮಾನ್ ಖಾನ್ ಮತ್ತು ಸಲೀಂ ಅಹ್ಮದ್ ಚರ್ಚೆ ನಡೆಸಿದ್ದು, ಪಕ್ಷದ ನಾಯಕರ ಅಹವಾಲು ಕೇಳಿದ್ದಾರೆ. ಸಂಜೆ ವೇಳೆಗೆ ಸುದ್ದಿಗೋಷ್ಟಿ ನಡೆಸಿದ ಸಲೀಂ ಅಹ್ಮದ್, ಈಗಾಗಲೇ ಮೂರು ಬಾರಿ ಆಂತರಿಕ ಸಭೆಯನ್ನು ಮಾಡಿದ್ದೇವೆ. ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ತಲಾಶ್ ನಡೆಸಿದ್ದೇವೆ. ನಮಗೆ 150 ಸೀಟು ಗೆಲ್ಲುವುದು ರಾಹುಲ್ ಗಾಂಧಿ ಕೊಟ್ಟ ಟಾರ್ಗೆಟ್. ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಂಡಿದ್ದೇವೆ ಎಂದರು.

ಜನವರಿ 11ರಿಂದ ಬೆಳಗಾವಿಯಿಂದ ಬಸ್ ಯಾತ್ರೆ ಆರಂಭಿಸಲಾಗುವುದು. ಪಕ್ಷದ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಸೇರಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಪ್ರಮುಖ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಬಸ್ ಯಾತ್ರೆ ಸಂಚರಿಸಲಿದ್ದು, ಪ್ರಮುಖವಾಗಿ 20 ಜಿಲ್ಲೆಗಳಲ್ಲಿ ಬೃಹತ್ ಸಭೆಗಳನ್ನು ನಡೆಸಲಾಗುವುದು. ಆಮೂಲಕ ಜನವರಿ ಒಂದು ತಿಂಗಳಲ್ಲಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆ ಏಳುವಂತೆ ಮಾಡುತ್ತೇವೆ. ಜನವರಿ 22ರಂದು ಮಂಗಳೂರಿಗೆ ಬಸ್ ಯಾತ್ರೆ ಬರಲಿದ್ದು, ಇಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು. ಪಕ್ಷದ ಎಲ್ಲ ನಾಯಕರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಬಿಜೆಪಿ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದು, ಮೂರು ವರ್ಷಗಳಿಂದ ಜನರ ಬಳಿ ಹೋಗದವರು ಈಗ ಯಾಕಾಗಿ ಜನರ ಬಳಿ ಹೋಗುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ಪಡೆದಿರುವುದನ್ನು ಜನರಿಗೆ ಹೇಳುವುದಕ್ಕಾ ಅಥವಾ ಅಭಿವೃದ್ಧಿಯೇ ಭ್ರಷ್ಟಾಚಾರ ಎಂಬುದನ್ನು ತಿಳಿಸುವುದಕ್ಕಾ ಎಂದು ಸಲೀಂ ಅಹ್ಮದ್ ಪ್ರಶ್ನೆ ಮಾಡಿದರು. ಕಾಟಿಪಳ್ಳದ ಜಲೀಲ್ ಹತ್ಯೆ ನಡೆದಿರುವುದು ಸರಕಾರದ ವೈಫಲ್ಯವನ್ನು ತೋರಿಸುತ್ತದೆ. ಕರಾವಳಿಯಲ್ಲಿ ಸರಣಿ ಹತ್ಯೆಗಳಾಗುತ್ತಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿ. ಜಲೀಲ್ ಹತ್ಯೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಜೊತೆಗೆ ಆ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕೆಂದು ಕಾಂಗ್ರೆಸ್ ಆಗ್ರಹಿಸುತ್ತದೆ. ಕಳೆದ ಬಾರಿ ರಾಜ್ಯ ಸರಕಾರ ಗಲಭೆಯಲ್ಲಿ ಸತ್ತ ಶಿವಮೊಗ್ಗದ ಹರ್ಷ, ಸುಳ್ಯದ ಪ್ರವೀಣ್ ನೆಟ್ಟಾರು ಕುಟುಂಬಕ್ಕೆ 25 ಲಕ್ಷ ಪರಿಹಾರ ಕೊಟ್ಟಿದೆ. ಅದೇ ರೀತಿ, ಹತ್ಯೆ ಆಗಿರುವ ಮಸೂದ್, ಫಾಜಿಲ್ ಗೆ ಪರಿಹಾರ ಯಾಕೆ ಕೊಟ್ಟಿಲ್ಲ. ಗದಗದಲ್ಲಿಯೂ ಇಬ್ಬರು ಹತ್ಯೆಯಾಗಿದ್ದಾರೆ. ರಾಜ್ಯದ ಸರ್ವ ಜನರು ಕಟ್ಟಿರುವ ತೆರಿಗೆಯ ಹಣವನ್ನು ಒಂದು ವರ್ಗಕ್ಕೆ ಮಾತ್ರ ಮೀಸಲಿಡುವುದು ಸರಿಯಲ್ಲ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವ ಬಗ್ಗೆ ಆಂತರಿಕ ಸಮೀಕ್ಷೆಗಳ ಮಾಹಿತಿಯಿದೆ. ನಾವು ಎಂಟಕ್ಕೆ ಎಂಟು ಗೆಲ್ಲಬೇಕು ಎಂಬ ಗುರಿ ಇಟ್ಟಿದ್ದೇವೆ ಎಂದು ಸಲೀಂ ಅಹ್ಮದ್ ಪ್ರಶ್ನೆಯೊಂದಕ್ಕೆ ತಿಳಿಸಿದರು. ಮಾಜಿ ಸಚಿವ ರೆಹ್ಮಾನ್ ಖಾನ್, ರಮಾನಾಥ ರೈ, ಅಭಯಚಂದ್ರ ಜೈನ್, ಮಧು ಬಂಗಾರಪ್ಪ ಮತ್ತಿತರರಿದ್ದರು.

150 candidate list of Congress sure by Jan 15th says Saleem in Mangalore.