ಸೌಜನ್ಯಾ, ಸಫೀರಾ ತೋಳಿನಲ್ಲಿ ಅಕ್ಷರ ಅರಳಿಸಿದ ಫಾತಿಮಾ ; ಬಡತನ, ವೈಕಲ್ಯ ಮೆಟ್ಟಿ ನಿಂತ ನಿಶಾಗೆ ಶಿಕ್ಷಕರು, ಸಹಪಾಠಿ ವಿದ್ಯಾರ್ಥಿನಿಯರೇ ಬದುಕು ! 

25-01-23 05:44 pm       Mangalore Correspondent   ಕರಾವಳಿ

ಆಕೆ ಹುಟ್ಟು ಅಂಗವಿಕಲೆ. ಸೊಂಟದ ಕೆಳಭಾಗದಲ್ಲಿ ಬಲಹೀನವಾಗಿರುವ ಆಕೆ ನಡೆದಾಡುವುದಕ್ಕೂ ಇನ್ನೊಬ್ಬರನ್ನು ಆಶ್ರಯಿಸುತ್ತಾಳೆ. ಅತ್ತಿಂದಿತ್ತ ಏನೇ ಮಾಡಬೇಕಿದ್ದರೂ, ಮನೆಯವರೇ ಆಗಬೇಕು.

ಮಂಗಳೂರು, ಜ.25 : ಆಕೆ ಹುಟ್ಟು ಅಂಗವಿಕಲೆ. ಸೊಂಟದ ಕೆಳಭಾಗದಲ್ಲಿ ಬಲಹೀನವಾಗಿರುವ ಆಕೆ ನಡೆದಾಡುವುದಕ್ಕೂ ಇನ್ನೊಬ್ಬರನ್ನು ಆಶ್ರಯಿಸುತ್ತಾಳೆ. ಅತ್ತಿಂದಿತ್ತ ಏನೇ ಮಾಡಬೇಕಿದ್ದರೂ, ಮನೆಯವರೇ ಆಗಬೇಕು. ಆದರೆ ಆ ಹುಡುಗಿಯ ಛಲಗಾರಿಕೆ, ಶಾಲೆ ಕಲಿಯಬೇಕೆಂಬ ತುಡಿತ ಆಕೆಯನ್ನು ಬಹು ಎತ್ತರಕ್ಕೇರಿಸಿದೆ. ಇನ್ನೊಬ್ಬರ ತೋಳಿನಲ್ಲಿಯೇ ಬದುಕು ಕಟ್ಟಿಕೊಂಡ ಆಕೆಯದು ಅದಮ್ಯ ಚೇತನ.  

ಅಂಗವೈಕಲ್ಯ, ಬಡತನ, ಶಾಲೆ ಕಲಿಯಲಾಗದು ಎಂಬ ಕೊರಗು ತೋರುವವರ ನಡುವೆಯೇ ಕೊಣಾಜೆ ಪದವು ಸರಕಾರಿ ಪ್ರೌಢ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ನಿಶಾ ನಮಗೆಲ್ಲ ಆದರ್ಶವಾಗಿ ನಿಂತಿದ್ದಾಳೆ. ಆಕೆಯೀಗ ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದು ಶಾಲೆಯಲ್ಲಿ ಟಾಪರ್ ಆಗಿದ್ದಾಳೆ.‌ ಇದಕ್ಕೆಲ್ಲ ಕಾರಣ ಆ ಶಾಲೆಯ ಶಿಕ್ಷಕರು ಮತ್ತು ಸಹಪಾಠಿ ಗೆಳತಿಯರು. 

ನಿಶಾ ಮೂರನೇ ತರಗತಿ ಕಲಿಯೋ ವರೆಗೂ ತಾಯಿಯೇ ಎತ್ತಿಕೊಂಡು ಶಾಲೆಗೆ ಬರುತ್ತಿದ್ದರು. ಹಾಗೆಯೇ ಎತ್ತಿಕೊಂಡೇ ಶಾಲೆಯಿಂದ ಮನೆಗೆ ಒಯ್ಯುತ್ತಿದ್ದರು. ಆದರೆ, ಮಗಳು ನಾಲ್ಕನೇ ಕ್ಲಾಸ್ ಬರೋ ಹೊತ್ತಿಗೆ ಇನ್ನು ತನ್ನಿಂದ ಹೊತ್ತುಕೊಂಡು ಬರಲು ಆಗಲ್ಲ ಎಂದು ತಾಯಿ ಕೈಚೆಲ್ಲಿದ್ದಳು. ಅಷ್ಟೇ ಅಲ್ಲ, ಇನ್ನು ಶಾಲೆ ಸಾಕು, ಬಡತನ. ತನ್ನಿಂದ ರಿಕ್ಷಾದಲ್ಲಿ ಕಳಿಸಲು ಸಾಧ್ಯವಿಲ್ಲ ಎಂದು ನಿರ್ಧಾರಕ್ಕೆ ಬಂದಿದ್ದರು.‌ ಆದರೆ, ನಿಶಾ ಕಲಿಯುವುದರಲ್ಲಿ ಮುಂದಿದ್ದ ಕಾರಣಕ್ಕೆ ಶಾಲೆ ನಿಲ್ಲಿಸುವುದಕ್ಕೆ ಶಿಕ್ಷಕರು ಒಪ್ಪಲಿಲ್ಲ. ಆಟೋ ವ್ಯವಸ್ಥೆ ಮಾಡಿ, ಶಾಲೆಗೆ ಮುಟ್ಟಿಸುವ ಹೊಣೆಯನ್ನು ಶಿಕ್ಷಕರು ಮಾಡಿದ್ದರು. ಅಷ್ಟಕ್ಕೇ‌ ಮುಗಿದು ಹೋಗಲ್ಲ. ಕಾಲು ಊರಿ ನಡೆಯೋದಕ್ಕೇ ಆಗದ ನಿಶಾ ಅತ್ತಿತ್ತ ಚಲಿಸೋದಕ್ಕೂ ಇನ್ನೊಬ್ಬರ ಆಸರೆಯೇ ಬೇಕು. ಆಗ ಜೊತೆಗಿದ್ದ ಸಹಪಾಠಿ ವಿದ್ಯಾರ್ಥಿನಿಯರೇ ಆಕೆಗೆ ಆಸರೆಯಾಗಿದ್ದರು. ಕೊನೆಗೆ, ಏಳನೇ ಕ್ಲಾಸ್ ನಂತರ ಶಾಲೆ ನಿಲ್ಲಿಸಲು ತಾಯಿ ನಿರ್ಧಾರಕ್ಕೆ ಬಂದಾಗಲೂ ಬಿಡದೆ ಆಸರೆಯಾಗಿದ್ದು ಶಿಕ್ಷಕರು ಮತ್ತು ಸಹಪಾಠಿ ವಿದ್ಯಾರ್ಥಿನಿಯರು.‌ ರಿಕ್ಷಾದಲ್ಲಿ ಶಾಲೆ ತಲುಪಿಸುವ ಜವಾಬ್ದಾರಿಯನ್ನು ಶಿಕ್ಷಕರೇ ಹೊತ್ತುಕೊಂಡರೆ, ಶಾಲೆಗೆ ತಲುಪಿದ ಆಕೆಯನ್ನು ಮೆಟ್ಟಿಲು ಹತ್ತಿಸುವುದರಿಂದ ತೊಡಗಿ ಟಾಯ್ಲೆಟ್ ಹೋಗುವುದಕ್ಕೆ, ಊಟ, ತಿಂಡಿ ಮಾಡಿಸುವುದಕ್ಕೆ ಎಲ್ಲದಕ್ಕೂ ಬೆನ್ನೆಲುಬಾಗಿ ನಿಂತಿದ್ದು ಆ ಮೂರು ಸಹಪಾಠಿ ವಿದ್ಯಾರ್ಥಿನಿಯರು. 

ಬಾಲ್ಯದಿಂದಲೂ ಜೊತೆಗೇ ಕಲಿತು ಬಂದಿದ್ದ ಸೌಜನ್ಯಾ, ನಫೀಸತ್ ಸಮ್ರೀನಾ ಮತ್ತು ಫಾತಿಮತ್ ಸಫೀರಾ ಎಂಬ ಮೂವರು ವಿದ್ಯಾರ್ಥಿನಿಯರು ನಿಶಾ ಪಾಲಿಗೆ ಕೈಹಿಡಿದು ನಡೆಸುವಷ್ಟರ ಮಟ್ಟಿಗೆ ಜೊತೆಯಾಗಿದ್ದಾರೆ. ಬೆಳಗ್ಗೆ ನಿಶಾ ಆಟೋ ರಿಕ್ಷಾದಲ್ಲಿ ಶಾಲೆಗೆ ತಲುಪುವ ಮೊದಲೇ ಈ ಮೂವರು ಬಾಲಕಿಯರು ಶಾಲೆ ಮುಂದುಗಡೆ ಕಾದು ನಿಲ್ಲುತ್ತಾರೆ. ನಿಶಾ ಬಂದೊಡನೇ ಅವಳನ್ನು ರಿಕ್ಷಾದಿಂದ ಎತ್ತಿ ಗಾಲಿ ಕುರ್ಚಿಯಲ್ಲಿ ಕುಳ್ಳಿರಿಸಿ ತರಗತಿಗೆ ಒಯ್ಯುತ್ತಾರೆ. ಶಾಲೆಯಲ್ಲಿ ಆಕೆಯ ಬೇಕು, ಬೇಡಗಳಿಗೆಲ್ಲ ಆಸರೆಯಾಗಿ ಸಂಜೆ ಅವಳನ್ನು ಮತ್ತೆ ಮನೆಗೆ ಹಿಂತಿರುಗಿಸುವುದಕ್ಕೂ ಆ ಮೂವರು ಬಾಲಕಿಯರೇ ನೆರವಾಗುತ್ತಾರೆ. 

ಅಶಕ್ತ ಬಾಲಕಿಯ ಪಾಲಿಗೆ ಕೈಹಿಡಿದು ನಡೆಸುವ ನಾವಿಕರಂತಿರುವ ಮೂವರು ಬಾಲಕಿಯರ ಮಾತೃ ಹೃದಯೀ ಸೇವೆಯನ್ನೀಗ ಅಲ್ಲಿನ ಊರವರೆಲ್ಲ ಕೊಂಡಾಡುತ್ತಾರೆ. ತೀರಾ ಬಡ ಕುಟುಂಬದ ಫಾತಿಮತ್ ನಿಶಾಗೆ ತಂದೆಯಿಲ್ಲ. ಕೆಲವು ವರ್ಷಗಳ ಹಿಂದೆ ತಂದೆ ಮೃತಪಟ್ಟ ಬಳಿಕ ತಾಯಿಯೇ ತಂದೆಯ ಸ್ಥಾನದಲ್ಲಿ ನಿಂತು ನಿಶಾಗೆ ಶಕ್ತಿತುಂಬಿದ್ದಾರೆ. ಅಜ್ಜಿ, ತಾಯಿ ಮತ್ತು ಕಿರಿಯ ಸಹೋದರನಿರುವ ನಿಶಾ ಕುಟುಂಬ ಕೊಣಾಜೆ ಬಳಿಯ ಬಾಡಿಗೆ ಮನೆಯಲ್ಲಿದೆ. ಇಷ್ಟಕ್ಕೂ ತಾಯಿ ಕಟ್ಟುವ ಬೀಡಿಯಿಂದಲೇ ಇವರೆಲ್ಲರ ಬದುಕು ಸಾಗಬೇಕು. 

ಡಾಕ್ಟರ್ ಆಗುವ ಕನಸು ಹೊತ್ತಿದ್ದಾಳೆ ನಿಶಾ 

ದೇಹಕ್ಕೆ ಮಾತ್ರ ಊನ, ಮನಸ್ಸಿಗಲ್ಲ  ಎನ್ನುವ ಮಾತಿದೆ. ಹಾಗೆಯೇ ನಿಶಾಳದ್ದು ವೈಕಲ್ಯ ಮೆಟ್ಟಿ ನಿಂತ ಬದುಕು. ಕ್ಲಾಸಿಗೆ ಟಾಪರ್ ಆಗಿರುವ ನಿಶಾಗೆ ಡಾಕ್ಟರ್ ಆಗುವ ಆಸೆಯಿದೆ. ತನ್ನಂತೆ ಇತರರ ಬದುಕು ಆಗಬಾರದು. ಅಂಥ ಅಶಕ್ತರ ಬಾಳಿಗೆಲ್ಲ ಬೆಳಕು ತೋರಬೇಕು ಎಂಬ ಅದಮ್ಯ ವಿಶ್ವಾಸ ನಿಶಾಗಿದೆ. ತನ್ನ ಸಾಧನೆಗೆ, ಶಾಲೆ ಕಲಿಕೆಗೆಲ್ಲ ಶಿಕ್ಷಕರು ಮತ್ತು ಆಸರೆಯಾಗಿ ನಿಂತಿರುವ ಗೆಳತಿಯರೇ ಕಾರಣ ಎನ್ನುತ್ತಾಳೆ ನಿಶಾ. ಇಂತಹ ಗೆಳತಿಯರನ್ನು ನೀಡಿದ್ದಕ್ಕಾಗಿ ನಾನು ದೇವರಿಗೆ ಋಣಿಯಾಗಿದ್ದೇನೆ. ನನ್ನ ಶಾಲಾ ಕಲಿಕೆಯಲ್ಲಿ ಇವರ ನೆರವನ್ನು ಮರೆಯಲಾಗದು. ಜೊತೆಗೆ ನಿಂತು ಬಹಳಷ್ಟು ಸಹಕರಿಸುತ್ತಿದ್ದಾರೆ. ಅವರ ಋಣ ತೀರಿಸಲಾಗದು.  ಕೃತಜ್ಞನಾಗಿದ್ದೇನೆ ಎಂದು ಗೆಳತಿಯರ ಬಗ್ಗೆ ಭಾವುಕ ಮಾತುಗಳಾನ್ನಾಡುತ್ತಾಳೆ ನಿಶಾ.

"ಯಾವುದೇ ನೂನ್ಯತೆ, ದೈಹಿಕ ವೈಕಲ್ಯ ಸಾಧನೆಗೆ ಅಡ್ಡಿಯಾಗಲ್ಲ. ಸಾಧಿಸುವ ಛಲ ಇದ್ದರೆ ಯಶಸ್ಸು ಸಾಧ್ಯ ಎಂಬುದನ್ನು ಫಾತಿಮತ್ ನಿಶಾ ತೋರಿಸಿಕೊಟ್ಟಿದ್ದಾಳೆ. ಸಹಪಾಠಿ ವಿದ್ಯಾರ್ಥಿನಿಯರು ಆಕೆಯ ಬೇಕು ಬೇಡಗಳಿಗೆಲ್ಲ ಜೊತೆಗೆ ನಿಂತು ಮಾದರಿಯಾಗಿದ್ದಾರೆ ಎಂದು ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ರಾಜೀವ್ ನಾಯಕ್ ಹೇಳುತ್ತಾರೆ.

Mangalore school students, and teachers of Konaje Govt school show incredible love to handicap student Nisha Fathima who has no strength to walk since childhood. Her friends show incredible love towards Nisha in her daily life. The school has also arranged free pick and drop service to Nisha for her Doctor's dream to come true. These students here are becoming role models for living in love and harmony amid communal unrest in the district.